ಸಮಗ್ರ ಸುದ್ದಿ

ಮಾರ್ಚ್‌ 2027ರೊಳಗೆ ಕುಷ್ಟಗಿ 400ಕೆವಿ ಉಪಕೇಂದ್ರ ಕಾಮಗಾರಿ ಪೂರ್ಣಗೊಳಿಸಿ: ಡಾ. ವಿ. ರಾಮ್‌ ಪ್ರಸಾತ್‌ ಮನೋಹರ್‌ ಸೂಚನೆ|ಡೋಣಿ-ಕುಷ್ಟಗಿ ಮಾರ್ಗದ ಅಡೆತಡೆ ನಿವಾರಣೆಗೆ 3 ತಿಂಗಳ ಗಡುವು

Share

ಕೊಪ್ಪಳ:ಉತ್ತರ ಕರ್ನಾಟಕದಲ್ಲಿ ಉತ್ಪಾದನೆಯಾಗುವ ನವೀಕರಿಸಬಹುದಾದ ಹಸಿರು ವಿದ್ಯುತ್‌ ಅನ್ನು ರಾಜ್ಯ ಹಾಗೂ ದೇಶದ ಇತರೆ ಭಾಗಗಳಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಅತ್ಯಂತ ನಿರ್ಣಾಯಕವಾಗಿರುವ, ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ 400ಕೆವಿ (EHV) ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು ಮಾರ್ಚ್ 2027ರೊಳಗೆ ಪೂರ್ಣಗೊಳಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈ ಬೃಹತ್ ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು (ಸ್ಟೇಷನ್ ಚಾರ್ಜ್ ಮಾಡಲು) ಡೋಣಿ-ಕುಷ್ಟಗಿ ಫೀಡರ್ ಮಾರ್ಗವು ಅತ್ಯಂತ ಪ್ರಮುಖವಾಗಿದೆ. ಈ ಮಾರ್ಗವು ಹಸಿರು ಇಂಧನ ಸಾಗಣೆಯ (Green Energy Transportation) ಜೀವನಾಡಿಯಾಗಿದ್ದು, ಇದು ಪೂರ್ಣಗೊಂಡರಷ್ಟೇ ಉಪಕೇಂದ್ರದ ಕಾರ್ಯಾರಂಭ ಸಾಧ್ಯವಾಗಲಿದೆ.

ಆದರೆ, ಈ ಪ್ರಮುಖ ವಿದ್ಯುತ್ ಮಾರ್ಗದ ಕಾಮಗಾರಿಗೆ ಕೆಲವೆಡೆ ಮಾರ್ಗಾಧಿಕಾರ ಅಥವಾ ರೈಟ್ ಆಫ್ ವೇ (RoW) ಸಮಸ್ಯೆಗಳು ಅಡ್ಡಿಯಾಗಿವೆ. ಈ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಾಮ್ ಪ್ರಸಾತ್ ಮನೋಹರ್ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ (DC) ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರೊಂದಿಗೆ ಉನ್ನತ ಮಟ್ಟದ ಸಮನ್ವಯ ಸಭೆ ನಡೆಸಿದರು.

ಪ್ರಸರಣ ಮಾರ್ಗಕ್ಕೆ ಎದುರಾಗಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಎಂಜಿನಿಯರಿಂಗ್ ತಂಡಗಳಿಗೆ 3 ತಿಂಗಳ ಗಡುವು ನೀಡಿದ ಅವರು, ಭೂಮಿ ಮತ್ತು RoW ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಅಗತ್ಯವಿರುವ ಎಲ್ಲಾ ಆಡಳಿತಾತ್ಮಕ ಮತ್ತು ಪೊಲೀಸ್ ಭದ್ರತಾ ಸಹಕಾರವನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಈ ಹೊಸ ಉಪಕೇಂದ್ರವು ಸ್ಥಳೀಯ ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆಯಾಗುವ ಬೃಹತ್ ಪ್ರಮಾಣದ ಹಸಿರು ಇಂಧನವನ್ನು ಸುಲಭವಾಗಿ ರಾಜ್ಯದ ಮುಖ್ಯ ಗ್ರಿಡ್‌ಗೆ ರವಾನಿಸುವ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸಲಿದೆ.

ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, “ಉಪಕೇಂದ್ರದ ಕಾಮಗಾರಿಗಳು ಉತ್ತಮ ವೇಗದಲ್ಲಿ ಸಾಗುತ್ತಿವೆ. ಆದರೆ, ಫೀಡರ್ ಮಾರ್ಗವಿಲ್ಲದೆ ಸ್ಟೇಷನ್ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹಸಿರು ಇಂಧನ ಸಾಗಣೆಗೆ ಡೋಣಿಯಿಂದ ಕುಷ್ಟಗಿ ವಿದ್ಯುತ್ ಮಾರ್ಗವೇ ಜೀವಾಳ. ಮುಂದಿನ ಮೂರು ತಿಂಗಳೊಳಗೆ ಸ್ಥಳೀಯವಾಗಿ ಎದುರಾಗಿರುವ ಎಲ್ಲಾ RoW ಸಮಸ್ಯೆಗಳನ್ನು ಬಗೆಹರಿಸಲು ನಾವು ನಿಗಾ ವಹಿಸಲಿದ್ದೇವೆ. ಈ ನಿಟ್ಟಿನಲ್ಲಿ ಅಗತ್ಯ ಬೆಂಬಲ ನೀಡುವಂತೆ ಕೊಪ್ಪಳ ಡಿಸಿ ಮತ್ತು ಎಸ್‌ಪಿ ಅವರಿಗೆ ಸೂಚಿಸಲಾಗಿದೆ. ಜಿಲ್ಲಾಡಳಿತದೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಾರ್ಚ್ 2027ರೊಳಗೆ ಸಂಪೂರ್ಣ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುವುದು,” ಎಂದು ಅವರು ತಿಳಿಸಿದ್ದಾರೆ.

ಇಂಧನ ಸಚಿವರಾದ ಕೆ.ಜೆ.ಜಾರ್ಜ್,”ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನವನ್ನು ಯಶಸ್ವಿಯಾಗಿ ಸಂಯೋಜಿಸಲು ನಮ್ಮ ಪ್ರಸರಣ ಯೋಜನೆಗಳ ತ್ವರಿತ ಅನುಷ್ಠಾನ ಅತ್ಯಗತ್ಯವಾಗಿದೆ. ಕುಷ್ಟಗಿ 400ಕೆವಿ ಉಪಕೇಂದ್ರ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ಡೋಣಿ-ಕುಷ್ಟಗಿ ಮಾರ್ಗವು ಕಲ್ಯಾಣ ಕರ್ನಾಟಕ ಭಾಗದ ವಿದ್ಯುತ್ ಚಿತ್ರಣವನ್ನೇ ಬದಲಾಯಿಸಲಿವೆ. ಕೆಪಿಟಿಸಿಎಲ್ ಮತ್ತು ಜಿಲ್ಲಾಡಳಿತದ ನಡುವಿನ ಅತ್ಯುತ್ತಮ ಸಮನ್ವಯತೆಯ ಮೂಲಕ, ನಾವು ನಿಗದಿಪಡಿಸಿರುವ ಮಾರ್ಚ್ 2027ರ ಗಡುವಿನೊಳಗೆ ಯೋಜನೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೆವೆ, ಹಸಿರು ಇಂಧನ ಆಧಾರಿತ ಭವಿಷ್ಯವನ್ನು ನಿರ್ಮಿಸುವ ಸರ್ಕಾರದ ಬದ್ಧತೆಗೆ ಈ ತ್ವರಿತ ಆಡಳಿತಾತ್ಮಕ ಕ್ರಮಗಳೇ ಸಾಕ್ಷಿಯಾಗಿವೆ” ಎಂದು ಹೇಳಿದ್ದಾರೆ.


Share

You cannot copy content of this page