ಬೆಂಗಳೂರು:ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಸಮಗ್ರ ಯೋಜನೆ ರೂಪಿಸಿಕೊಂಡು ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಜುಲೈ 1ರಿಂದ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ” ಕೈಗೆತ್ತಿಕೊಳ್ಳುವ ಸಂಬಂಧ ಇಂದು ನಡೆದ ವರ್ಚುವಲ್(Video Conference-VC) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆಯನ್ನು ಪಾಲಿಸಬೇಕು. ಸಮಗ್ರ ಯೋಜನೆ ರೂಪಿಸಿಕೊಂಡು, ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಾಚರಣೆ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಮೊದಲಿಗೆ ಯಾವ ಯಾವ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂಬುದರ ಪಟ್ಟಿಯನ್ನು ಸಿದ್ಧಪಡಿಸಬೇಕು. ನಂತರ ಅಂಗಡಿ ಮಾಲೀಕರು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕು. ಅನಂತರ ನೋಟಿಸ್ ನೀಡಿ, ಅದರ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು, ಉದ್ದಿಮೆ ಪರವಾನಗಿ ನೀಡುವ ಆರೋಗ್ಯಾಧಿಕಾರಿಗಳು, ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ಹಾಗೂ ಒತ್ತುವರಿ ತೆರವು ತಂಡಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು.
ನಾನ್-ವೆಂಡಿಂಗ್ ವಲಯಗಳ ಅಧಿಸೂಚನೆ ಹೊರಡಿಸಲು ಕ್ರಮವಹಿಸಿ:
ನಗರದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳು ಸೇರಿದಂತೆ ಪ್ರಮುಖ ರಸ್ತೆಗಳನ್ನು ನಾನ್-ವೆಂಡಿಂಗ್ ವಲಯಗಳಾಗಿ ಅಧಿಸೂಚನೆ ಹೊರಡಿಸಲು ಕ್ರಮವಹಿಸಿ. ನಗರದಲ್ಲಿ ಸುಮಾರು 15 ಸಾವಿರ ಕಿ.ಮೀ ರಸ್ತೆಗಳಿದ್ದು, ಅವುಗಳಲ್ಲಿ ಸುಮಾರು 1500 ಕಿ.ಮೀ. ರಸ್ತೆಗಳನ್ನು ನಾನ್-ವೆಂಡಿಂಗ್ ವಲಯಗಳಾಗಿ ಗುರುತಿಸಬೇಕು. ಉಳಿದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರ ನಡೆಸಲು ಬೀದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು.
ಬೀದಿ ವ್ಯಾಪಾರಿಗಳಿಗೆ ಜೀವನ ನಡೆಸಲು ಮುಕ್ತ ಅವಕಾಶ:
ನಗರದಲ್ಲಿ ಬೀದಿ ವ್ಯಾಪಾರಿಗಳು ಜೀವನ ನಡೆಸಲು ಮುಕ್ತ ಅವಕಾಶವಿದೆ. ಪಾಲಿಕೆ ಗುರುತಿಸುವ ನಾನ್-ವೆಂಡಿಂಗ್ ವಲಯಗಳ ರಸ್ತೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮುಕ್ತವಾಗಿ ವ್ಯಾಪಾರ ನಡೆಸಬಹುದು.
ನಾಗರಿಕರಲ್ಲಿ ಜಾಗೃತಿ ಮೂಡಿಸಿ:
ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ನಾಗರಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ಯಾವ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಯಲಿದೆಯೋ, ಆ ರಸ್ತೆಗಳಲ್ಲಿ ಮುಂಚಿತವಾಗಿಯೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಾಗೃತಿ ಕಾರ್ಯಕ್ರಮದ ವೇಳೆ ಒತ್ತುವರಿಯನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ದರೆ ಪಾಲಿಕೆಯಿಂದ ತೆರವುಗೊಳಿಸಿ, ಕಾನೂನಿನ ಪ್ರಕಾರ ದಂಡ ವಿಧಿಸಲಾಗುವುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನೂ ಕೈಗೊಳ್ಳಿ:
ನಗರದಲ್ಲಿ ಎಲ್ಲೆಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತದೆಯೋ, ಅದೇ ಸ್ಥಳಗಳಲ್ಲಿ ಸಮಾನಾಂತರವಾಗಿ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನೂ ತಕ್ಷಣ ಕೈಗೊಳ್ಳಬೇಕು. ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ, ಹಾಳಾಗಿರುವ ಸ್ಲ್ಯಾಬ್‌ಗಳು, ಕರ್ಬ್‌ಗಳು ಹಾಗೂ ಅಗತ್ಯ ಸಿವಿಲ್ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರು ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
