ಸಮಗ್ರ ಸುದ್ದಿ

ರಾಜ್ಯದ ಸಹಕಾರಿ ರಂಗದಲ್ಲಿ ದೊಡ್ಡ ಕ್ರಾಂತಿಯಾಗಬೇಕಾಗಿದೆ: ಬಸವರಾಜ ಬೊಮ್ಮಾಯಿ

Share

ಹಾವೇರಿ: ಗುಜರಾತ್ ಹಾಗೂ ಮಹಾರಾಷ್ಟ್ರದಂತೆ ರಾಜ್ಯದಲ್ಲಿ ಸಹಕಾರಿ ರಂಗದಲ್ಲಿ ದೊಡ್ಡ ಕ್ರಾಂತಿಯಾಗಬೇಕಾಗಿದೆ. ಅದು ಉತ್ತರ ಕರ್ನಾಟಕದಲ್ಲಿಯೇ ಆಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಇಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಒಬ್ಬ ವ್ಯಕ್ತಿಗೆ ನೂರು ವರ್ಷ ಆಗುವುದು ಮುಖ್ಯವಲ್ಲ ಒಂದು ಸಂಸ್ಥೆಗೆ ನೂರು ವರ್ಷ ಆಗುವುದು ಬಹಳ ಮುಖ್ಯ. ಮನುಷ್ಯ ಸಹಕಾರಿ ಜೀವಿ ಯಾರೂ ಒಬ್ಬಂಟಿಗರಾಗಿ ಬದುಕಲು ಆಗುವುದಿಲ್ಲ. ಒಂದು ಮನೆ, ಊರು ಸಮಾಜ ದೇಶದಲ್ಲಿ ಇರುತ್ತೇವೆ. ಹಲವಾರು ರೀತಿಯಲ್ಲಿ ನಮ್ಮನ್ನು ಒಗ್ಗೂಡಿಸುವ ಸಂಸ್ಕೃತಿ ಸಂಪ್ರದಾಯ ಮಾನವೀಯ ಇತಿಹಾಸ ನಮ್ಮಲ್ಲಿದೆ. ವಿಶ್ವದಲ್ಲಿಯೇ ಮಾನವ ಸಂಘ ಜೀವಿ. ಪ್ರಭು ಗಂಜಿಗಟ್ಟಿಯವರು ಸದ್ವಿಚಾರದಿಂದ ಸತ್ಕಾರ್ಯ ಮಾಡಿದ್ದಾರೆ‌. ನೂರು ವರ್ಷ ನಡೆಸಿರುವುದು ಹೆಮ್ಮೆಯ ಸಂಗತಿ ಎಂದರು.

ಈ ಸಂಘ ನಮ್ಮ ಗ್ರಾಮೀಣ ಭಾಗದಲ್ಲಿ ಎಷ್ಡು ಪ್ರಗತಿ ಸಾದಿಸಬೇಕಿತ್ತೊ ಅಷ್ಟು ಆಗಿಲ್ಲ ಎನ್ನುವ ಬಗ್ಗೆ ಯೋಚಿಸಬೇಕು. ಮುಂದಿನ ಹತ್ತು ವರ್ಷದಲ್ಲಿ ವಿವಿದೋದ್ದೇಶಕ್ಕೆ ಬಳಸಲು ಛಲ ಮಾಡಿದರೆ ಸಾಧಿಸಲು ಸಾಧ್ಯ. ನಮ್ಮ ಮನಸ್ಸಿನಲ್ಲಿ ಮಾಡಬೇಕೆಂಬ ಛಲ ಮತ್ತು ಕೆಲಸ ಮಾಡುವುದರಿಂದ ಕಾರ್ಯ ಸಾಧ್ಯವಾಗುತ್ತದೆ ಎಂದರು.

ಪ್ರಬಲ ರಂಗ:
ಕೇಂದ್ರದಲ್ಲಿ ಮೋದಿಯವರು ಸಹಕಾರಿ ಇಲಾಖೆ ಸ್ಥಾಪನೆ ಮಾಡಿದ್ದಾರೆ. ಅಮಿತ್ ಶಾ ಅವರು ಅದರ ಸಚಿವರಿದ್ದಾರೆ. ಪ್ರತಿಯೊಂದು ಗ್ರಾಮದಲ್ಲಿ ಸಹಕಾರ ಸಂಘ ಇರಬೇಕು ಅನ್ನುವ ಉದ್ದೇಶ ಇದೆ. ಸಹಕಾರ ಬಹಳ ದೊಡ್ಡ ಕ್ಷೇತ್ರ ಇದೆ ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಸಹಕಾರ ಸರ್ಕಾರವನ್ನು ಆಳುತ್ತದೆ. ಇಲ್ಲಿ ಸರ್ಕಾರ ಸಹಕಾರವನ್ನು ಆಳಲು ಹೊರಟಿದ್ದಾರೆ. ಅಲ್ಲಿ ಸರ್ಕಾರವನ್ನು ಆಳಬೇಕೆಂದರೆ ಸಹಕಾರಿಗಳು ಸಿಎಂಗಳು ಆಗುತ್ತಾರೆ. ಅಷ್ಟು ಪ್ರಬಲವಾಗಿದೆ. ಸಹಕಾರ ರಂಗ ಎಲ್ಲ ರಂಗದಲ್ಲೂ ಬಂದಿದೆ. ಪ್ರತಿ ವರ್ಷ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಸಹಕಾರ ರಂಗದಿಂದ ಸರ್ಕಾರಕ್ಕೆ ಹೋಗುತ್ತದೆ ಎಂದರು.

ಸಮಗ್ರ ಬದಲಾವಣೆ ಅಗತ್ಯ:

ರಾಜ್ಯದಲ್ಲಿ ಸಹಕಾರಿ ರಂಗದಲ್ಲಿ ದೊಡ್ಡ ಕ್ರಾಂತಿ ಯಾಗಬೇಕಾಗಿದೆ. ಅದು ಉತ್ತರ ಕರ್ನಾಟಕದಲ್ಲಿಯೇ ಆಗಲು ಸಾಧ್ಯ. ಇಲ್ಲಿ ಸಹಕಾರ ಸಂಘಗಳು ಮತ್ತು ಅವುಗಳ ಚಟುವಟಿಕೆಗಳು ತುಂಗಭದ್ರಾ ದಾಟಿದ ನಂತರ ಇಲ್ಲ. ಅಲ್ಲಿ ಸಾಹುಕಾರರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಹಕಾರಿಗಳು, ಬೆವರು ಸುರಿಸಿ ದುಡಿಯುವ ರೈತರು ಇದ್ದಾರೆ‌. ದಕ್ಷಿಣ ಕರ್ನಾಟಕದಲ್ಲಿ ಭೂಮಿಗೆ ಬಹಳ ಬೆಲೆ ಇದೆ. ಉತ್ತರ ಕರ್ನಾಟಕದಲ್ಲಿ ದುಡಿಮೆಗೆ ಬಹಳ ಬೆಲೆ ಇದೆ. ರೈತನಿಗೆ ಬೆವರಿಗೆ ಬೆಲೆ ಇಲ್ಲ ಅದಕ್ಕಾಗಿ ಇಲ್ಲಿ ಹೋರಾಟಗಳು ನಡೆಯುತ್ತವೆ. ಅಮೂಲಾಗ್ರ ಬದಲಾವಣೆ ಆಗಬೇಕು.

ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಳ ಅಗತ್ಯ:

ಗ್ರಾಮೀಣ ಹಣಕಾಸು ವ್ಯವಸ್ಥೆ ಸಂಪೂರ್ಣ ಬದಲಾಗಬೇಕು. ಈ ದೇಶದಲ್ಲಿ ಸ್ವಾತಂತ್ರ್ಯ ಬಂದು ಎಪ್ಪತ್ತೆಂಟು ವರ್ಷ ಆಗಿದೆ. ಇಷ್ಟು ವರ್ಷದಲ್ಲಿ ಕೃಷಿಯಲ್ಲಿ ನಾವು ಹಾಕಿದ ಬಂಡವಾಳ ಮತ್ತು ಉದ್ಯೋಗದಲ್ಲಿ ಹಾಕಿರುವ ಬಂಡವಾಳ ನೋಡಿದಾಗ ಅಜಗಜಾಂತರ ಇದೆ. ಭೂಮಿ ಆಕಾಶದಷ್ಟು ಅಂತರ ಇದೆ. ಇಲ್ಲಿ ಎಷ್ಟೇ ಸಹಾಯ ಮಾಡಿದರೂ ರೈತನಿಗೆ ಬೆಳೆ ಸಾಲ ನೀಡುವುದಷ್ಟೇ ಸಹಾಯ ಮಾಡಬೇಕು. ಕೃಷಿಯಲ್ಲಿ ಬಂಡವಾಳ ಹೂಡಿಕೆ ಕಡಿಮೆ ಇದೆ. ಯಾವಾಗ ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ ಆಗ ಕೃಷಿ ಉತ್ಪಾದನೆ ಹೆಚ್ಚಾಗುತ್ತದೆ. ಆಗ ಸುಧಾರಿಸಲು ಸಾಧ್ಯವಾಗುತ್ತದೆ. ಹಸಿರು ಕ್ರಾಂತಿಯಿಂದ ಕೃಷಿ ಬೆಳೆದಿದೆ‌ ಎಂದರು.


Share

You cannot copy content of this page