ವಿಶಾಖಪಟ್ಟಣ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ
ಮೂರನೇ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಯಶಸ್ವಿ ಜೈಸ್ವಾಲ್ ಅಜೇಯ ಶತಕ ಹಾಗೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಒಂಬತ್ತು ವಿಕೆಟ್‌ಗಳಿಂದ ಜಯ ಗಳಿಸಿದೆ.
ಸರಣಿಯ ಕೊನೆಯ ಪಂದ್ಯದಲ್ಲಿ ಜಯಗಳಿಸುವ ಮೂಲಕ ಭಾರತ ತಂಡವು 2-1ರಿಂದ ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಕ್ವಿಂಟನ್ ಡಿ ಕಾಕ್ ಅವರ ಶತಕದ ನೆರವಿನಿಂದ 47.5 ಓವರ್‌ಗಳ ಅಂತ್ಯಕ್ಕೆ 10 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿತ್ತು.
271 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಅವರು ಉತ್ತಮ ಆರಂಭ ಒದಗಿಸಿಕೊಟ್ಟರು.
ರೋಹಿತ್ ಶರ್ಮಾ ಅವರು 73 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 75 ರನ್ ಗಳಿಸಿ ಕೇಶವ್ ಮಹಾರಾಜ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಯಶಸ್ವಿ ಜೈಸ್ವಾಲ್ ಜೊತೆಗೂಡಿದ ವಿರಾಟ್ ಕೊಹ್ಲಿ, ಕೊನೆಯ ಪಂದ್ಯದಲ್ಲೂ ಉತ್ತಮ ರನ್ ಕಲೆಹಾಕಿದರು. ಜೈಸ್ವಾಲ್ ಅಜೇಯ 116 ರನ್ (121 ಎಸೆತ) ಹಾಗೂ ವಿರಾಟ್ ಕೊಹ್ಲಿ ಅಜೇಯ 65 ರನ್ (45 ಎಸೆತ) ಗಳಿಸುವ ಮೂಲಕ ಎರಡನೇ ವಿಕೆಟ್‌ಗೆ 116 ರನ್‌ಗಳ ಜೊತೆಯಾಟ ಆಡಿದರು.
ದಕ್ಷಿಣ ಆಫ್ರಿಕಾ ನೀಡಿದ್ದ 271 ರನ್‌ಗಳ ಗುರಿಯನ್ನು ಭಾರತವು 39.5 ಓವರ್‌ಗಳಲ್ಲೇ ಗಳಿಸುವ ಮೂಲಕ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು.
