ಬೆಂಗಳೂರು : ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರಾಗಿದ್ದು, ರೈತರ ಬಗ್ಗೆ ಅವರಿಗೆ ವಿಶೇಷವಾದ ಕಾಳಜಿ ಇತ್ತು. ದೇಶದ ಸಂಸ್ಕೃತಿಗೆ ಅವರದೇ ಆದ ಅಡಿಪಾಯ ಹಾಕಿದ್ದು, ನಾವು ಅವರನ್ನು ಸ್ಮರಿಸಿದ್ದೇವೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದರು.
ನಾವೆಲ್ಲರೂ ಬಾಬು ಜಗಜೀವನರಾಮ್ ಅವರ ಪುಣ್ಯಸ್ಮರಣೆ ಆಚರಿಸುತ್ತಿದ್ದೇವೆ. ಜಾತಿ ಮೇಲೆ ಅಭಿವೃದ್ಧಿ ಮಾಡಿದರೆ ಜನರಿಗೆ ಮೋಸವಾಗಲಿದೆ ಎಂದು ಬಹಳ ದಿಟ್ಟವಾಗಿ ಗುಡುಗಿದ ನಾಯಕರು ಬಾಬು ಜಗಜೀವನರಾಮ್ ಅವರು. ಬಡತನ ಮುಕ್ತ ಭಾರತ ನಿರ್ಮಾಣಕ್ಕೆ ತಮ್ಮದೇ ಆದ ಹೋರಾಟ ಮಾಡಿದ್ದ ಧೀಮಂತ ನಾಯಕರು. ನಾವು ಯುವ ಕಾಂಗ್ರೆಸ್ ನಲ್ಲಿದ್ದಾಗ ದೆಹಲಿಯಲ್ಲಿ ಸಮಾವೇಶಕ್ಕೆ ಹೋಗಿದ್ದಾಗ ಪ್ರಧಾನಿ ರಾಜೀವ್ ಗಾಂಧಿ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಅವರ ಮನೆಗೆ ಹೋಗಿದ್ದೆವು. ಒಂದೊಂದು ರಾಜ್ಯಗಳ ನಿಯೋಗ ಭೇಟಿ ಮಾಡಿ ಫೋಟೋ ತೆಗೆಸಿಕೊಳ್ಳಲಾಗುತ್ತಿತ್ತು. ನಮ್ಮ ರಾಜ್ಯದ ಸರದಿ ಬರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ರಾಜೀವ್ ಗಾಂಧಿ ಅವರು ಮನೆಯೊಳಗಿಂದ ಹೊರಬಂದು ಹಿರಿಯ ನಾಯಕರನ್ನು ಮನೆಯೊಳಗೆ ಕರೆದುಕೊಂಡು ಹೋದರು. ಆನಂತರ ನಾವು ಆ ಹಿರಿಯ ನಾಯಕರು ಯಾರು ಎಂದು ಕೇಳಿದಾಗ, ಅವರು ಬಾಬುಜಗಜೀವನರಾಮ್. ಅವರು ಬಂದು ನಾನು ನೆಹರೂ, ಇಂದಿರಾ ಗಾಂಧಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕೆಲವು ಭಿನ್ನಾಭಿಪ್ರಾಯದಿಂದಾಗಿ ನಾನು ಪಕ್ಷ ತೊರೆದಿದ್ದೆ. ಈಗ ನನಗೆ ವಯಸ್ಸಾಗಿದೆ ಸಾಯುವ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಾಂಗ್ರೆಸಿಗನಾಗಿ ಸಾಯಬೇಕು ಎಂದು ಹೇಳಿದ್ದಾಗಿ ರಾಜೀವ್ ಗಾಂಧಿ ಅವರು ನಮಗೆ ಹೇಳಿದರು ಎಂದು ತಮ್ಮ ನೆನಪು ಮೆಲಕು ಹಾಕಿದರು.
ಬಾಬು ಜಗಜೀವನರಾಮ್ ಅವರು ದೇಶಕ್ಕೆ ಕೊಟ್ಟ ಕೊಡುಗೆ, ಕಾಂಗ್ರೆಸ್ ಪಕ್ಷದ ಮೇಲೆ ಅವರಿಗಿದ್ದ ನಿಷ್ಠೆ ಮರೆಯಲು ಸಾಧ್ಯವಿಲ್ಲ. ಅವರ ಸುಪುತ್ರಿ ಅವರಿಗೆ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ನೀಡಿ ಕೇಂದ್ರ ಸಚಿವರು ಹಾಗೂ ಮೊದಲ ಮಹಿಳಾ ಸ್ಪೀಕರ್ ಆಗಿ ಮಾಡಲಾಗಿತ್ತು. ವಿಧಾನಸೌಧದ ಉತ್ತರ ದಿಕ್ಕಿನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಪಶ್ಚಿಮ ದ್ವಾರದಲ್ಲಿ ಬಾಬು ಜಗಜೀವನರಾಮ್ ಅವರ ಪ್ರತಿಮೆ ನಿರ್ಮಿಸಿ ಗೌರವ ಸಲ್ಲಿಸುತ್ತಿದ್ದೇವೆ. ಅವರು ರೈತರ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.
