ಸಮಗ್ರ ಸುದ್ದಿ

ಕರ್ನಾಟಕದ ಪಂಚ ಗ್ಯಾರಂಟಿಗಳು ದೇಶಕ್ಕೇ ಮಾದರಿ: ಈಶ್ವರ ಖಂಡ್ರೆ

Share

ಬೀದರ್: ಕಾಂಗ್ರೆಸ್ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷವಲ್ಲ. ಅದು ಒಂದು ಆಂದೋಲನ. ನಮಗೆ ಬಡವರ ಕಲ್ಯಾಣವೇ ಪರಮೋಚ್ಛವಾಗಿದ್ದು, ನುಡಿದಂತೆ ನಡೆಯುತ್ತಿದ್ದೇವೆ. ನಮ್ಮ ಪಂಚ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಮ್ಮ ಗ್ಯಾರಂಟಿಯ ಬಗ್ಗೆ ಟೀಕೆ ಮಾಡುತ್ತಿದ್ದವರೇ ಇಂದು ನಮ್ಮ ಗ್ಯಾರಂಟಿ ಕದ್ದು ಮಹಾರಾಷ್ಟ್ರ, ಬಿಹಾರ್, ಹರಿಯಾಣ ಮೊದಲಾದ ಕಡೆ ಜನಪ್ರಿಯತೆ ಪಡೆಯುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಬೀದರ್ ನ ಗಣೇಶ ಮೈದಾನದಲ್ಲಿಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್.ಡಿ.ಎ. ಅಧಿಕಾರಕ್ಕೆ ಬಂದು 12 ವರ್ಷವಾದರೂ ಕೊಟ್ಟ ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ. ಸುಳ್ಳನ್ನೇ ಸತ್ಯ ಎಂದು ಬಿಂಬಿಸುವುದರಲ್ಲೇ ತಲ್ಲೀನರಾಗಿದ್ದಾರೆ ರೈತರ ಆದಾಯ ದುಪ್ಪಟ್ಟಾಗಲಿಲ್ಲ, ಯುವಕರಿಗೆ 2 ಕೋಟಿ ಉದ್ಯೋಗ ಸಿಗಲಿಲ್ಲ. ಅಡುಗೆ ಅನಿಲ ಸಿಲಿಂಡರ್ ದರ, ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದೆ. ಬಿಜೆಪಿ ಜನ ವಿರೋಧಿಯಾಗಿದೆ ಎಂದರು.

ಬೀದರ್ ನಲ್ಲಿ 11 ಲಕ್ಷ ಫಲಾನುಭಾವಿಗಳಿಗಳಿಗೆ ಅನ್ನಭಾಗ್ಯ:

ನಮ್ಮ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಬೀದರ್ ನಲ್ಲಿ 11 ಲಕ್ಷಕ್ಕೂ ಹೆಚ್ಚು ಜನರು ಅನ್ನಭಾಗ್ಯ ಫಲಾನುಭವಿಗಳಾಗಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ, ಬೀದರ್ ನ ಎಲ್ಲ ವಿಧಾನಸಬಾ ಕ್ಷೇತ್ರದಲ್ಲೂ ನಾವು ಜಯ ಸಾಧಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಅಕ್ಟೋಬರ್ ಅಥವಾ ಈ ವರ್ಷಾಂತ್ಯದೊಳಗೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ಈ ಎಲ್ಲ ಚುನಾವಣೆಯಲ್ಲೂ ಪಕ್ಷ ಜಯ ಸಾಧಿಸುತ್ತದೆ. ಇದಕ್ಕೆ ನೀವೆಲ್ಲರೂ ಶ್ರಮಿಸಬೇಕು ಎಂದರು.

ರಾಜ್ಯದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಇದು ಬಿಜೆಪಿಯ ಹುನ್ನಾರವಾಗಿದೆ. ಬಡವರು, ಅಲ್ಪಸಂಖ್ಯಾತರ ಹೆಸರನ್ನು ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ. ಪ್ರತಿ ಬಿ.ಎಲ್.ಓ.ಗಳು ಮನೆ ಮನೆಗೆ ಹೋಗಿ ಮತದಾರರಿಗೆ ಅರ್ಜಿ ನೀಡಿ, ಭರ್ತಿ ಮಾಡಿಸಿ, ಸಹಿ ಪಡೆಯಬೇಕು. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಕಾರಂಜಾ ಸಂತ್ರಸ್ಥರ ಸಮಸ್ಯೆ ದಶಕಗಳಿಂದ ಇದೆ. ಇದನ್ನು ಪರಿಹರಿಸಲು ವಿಶೇಷ ಅನುದಾನ ನೀಡಬೇಕು. ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಿದರೆ ಅವರು ನಿಮ್ಮನ್ನು ಸದಾ ಸ್ಮರಿಸುತ್ತಾರೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಬೀದರ್ ಸರ್ವಧರ್ಮ ಸಮನ್ವಯದ ಜಿಲ್ಲೆ:

ಬೀದರ್ ಸರ್ವಧರ್ಮ ಸಮನ್ವಯದ ಜಿಲ್ಲೆ. ಇಲ್ಲಿ ಜರಣಿ ನರಸಿಂಹ ದೇವಾಲಯವಿದೆ, ಇತಿಹಾಸ ಪ್ರಸಿದ್ಧ ನಾನಕ್ ಝೀರಾ ಗುರುದ್ವಾರವಿದೆ, ಮಹಮದ್ ಗವಾನ್ ದರ್ಗಾ ಇದೆ, ಬೆಥೆಸ್ಟಾ ಚರ್ಚ್ ಇದೆ. ಹೀಗಾಗಿ ಶಾಂತಿಯ ತೋಟವಾಗಿದೆ ಎಂದು ಈಶ್ವರ ಖಂಡ್ರೆ ಬಣ್ಣಿಸಿದರು.

ಬಸವಾದಿ ಶರಣರ ನಾಡಿನಿಂದಲೇ ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸ ಆರಂಭಿಸಿದ್ದಾರೆ ಇದು ನಮಗೆ ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಚಿವರಾದ ರಾಜಶೇಖರ ಪಾಟೀಲ್, ರಹೀಂಖಾನ್ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page