ಬೆಂಗಳೂರು: ಒಂದು ಭಾಷೆಯ ಬೆಳವಣಿಗೆ ಮತ್ತೊಂದು ಭಾಷೆಯ ಅಳಿವಿನ ಮೇಲೆ ನಿಲ್ಲಬಾರದು. ಭಾಷೆ ಮನುಷ್ಯರನ್ನು ಬೆಸೆಯುವ ಶಕ್ತಿಯಾಗಿದ್ದು, ಕನ್ನಡ ಕಲಿಕೆಯ ಮೂಲಕ ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಒಗ್ಗಟ್ಟನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಕನ್ನಡ-ಕಲಿ ತರಗತಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಭಾಷಾ ಕಲಹದಿಂದ ದೇಶದ ಭಾವೈಕ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯೋನ್ಮುಖವಾಗುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಕನ್ನಡ-ಕಲಿ ತರಗತಿಗಳು ಈ ಉದಾತ್ತ ಆಶಯವನ್ನು ಹೊಂದಿದೆ ಎಂದರು.
ಸಂಸ್ಕೃತ ಮತ್ತು ಹಿಂದಿಯನ್ನು ಹೊರತುಪಡಿಸಿ ಅನುದಾನದ ಕೊರತೆಯಿಂದ ಬಹುತೇಕ ಭಾರತೀಯ ಭಾಷೆಗಳು ಸಂಕಷ್ಟಗಳನ್ನು ಎದುರಿಸುತ್ತಿವೆ. ಸರ್ಕಾರವು ನೀಡುವ ಸೀಮಿತ ಅನುದಾನದಲ್ಲಿಯೇ ಕನ್ನಡದ ಬೆಳವಣಿಗೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿದ್ದು, ಅವುಗಳಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕನ್ನಡ-ಕಲಿ ಕಾರ್ಯಕ್ರಮ ಪ್ರಮುಖವಾಗಿದೆ ಎಂದರು.
ಸ್ಥಳೀಯ ಸಮಾಜದೊಂದಿಗೆ ಉತ್ತಮ ಬಾಂಧವ್ಯ:
ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಕನ್ನಡೇತರರು ಕನ್ನಡ ಕಲಿಯುವುದರಿಂದ ಸ್ಥಳೀಯ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಅನುಕೂಲವಾಗುತ್ತದೆ. ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ, ಶುದ್ಧ ಕನ್ನಡ ನಾಮಫಲಕ ಜಾಗೃತಿ, ಆಡಳಿತ ಕಚೇರಿಗಳು, ನ್ಯಾಯಾಲಯಗಳು, ಮಾಧ್ಯಮ, ವೈದ್ಯಕೀಯ, ಸಾರಿಗೆ ವಲಯಗಳು ಸೇರಿದಂತೆ ಹಲವಾರು ಕಡೆ ಕನ್ನಡ ಬಳಕೆಯನ್ನು ಉತ್ತೇಜಿಸುವ ವಿವಿಧ ಕಾರ್ಯಕ್ರಮಗಳನ್ನು ಪ್ರಾಧಿಕಾರವು ಯಶಸ್ವಿಯಾಗಿ ನಡೆಸುತ್ತಿದೆ. ಇದೀಗ ಕನ್ನಡೇತರರಿಗೆ ಕನ್ನಡ –ಕಲಿ ತರಗತಿಗಳನ್ನು ವ್ಯಾಪಕವಾಗಿಸುತ್ತಿರುವುದು ಇದೇ ಪ್ರಯತ್ನದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್ ಜೋಸೆಫ್ ಪಿಂಟೋ, ಭಾಷಾ ವಿಭಾಗದ ಮುಖ್ಯಸ್ಥೆ ಡಾ. ಶ್ರೀಲತಾ, ಡಾ. ಶಿವಾನಂದ ಜವಳಿ, ಡಾ.ಎಂ.ಟಿ. ರತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
