ಬೆಂಗಳೂರು:ಬರಗಾಲ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಧಾವಿಸಬೇಕೆಂದು ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ, ತುರ್ತು ಪರಿಹಾರದ ಜೊತೆಗೆ ತಲಾ 50,000 ರೂ.ವರೆಗೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳು ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದರೆ, ಮತ್ತೊಂದೆಡೆ ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದ ಆತಂಕ ಎದುರಾಗಿದೆ.
ಲಕ್ಷಾಂತರ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಕುಟುಂಬಗಳು ಸಂಕಷ್ಟದಲ್ಲಿದ್ದು, ಸರ್ಕಾರದ ತುರ್ತು ನೆರವು ನಿರೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ತಾವು ಬರಪೀಡಿತ ರೈತರ ಸಾಲಮನ್ನಾ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದ್ದೀರಿ. ಆದರೆ ರೈತರಿಗೆ ಈಗ ಬೇಕಾಗಿರುವುದು ಪರಿಶೀಲನೆ ಅಲ್ಲ, ತಕ್ಷಣದ ನಿರ್ಧಾರ. ಆದ್ದರಿಂದ ವಿಳಂಬ ಮಾಡದೆ ಬರ ಮತ್ತು ಪ್ರವಾಹದಿಂದ
ಸಂತ್ರಸ್ತರಾಗಿರುವ ಎಲ್ಲ ರೈತರಿಗೆ ₹50,000 ವರೆಗೆ ಸಾಲಮನ್ನಾ ಘೋಷಿಸಿ ಅವರ ಸಂಕಷ್ಟಕ್ಕೆ ಸೃ೦ದಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಕೇಂದ್ರದ ವಿರುದ್ಧದ ನಿರ್ಣಯ ಖಂಡನೀಯ
ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ಬರ ಪರಿಹಾರ ಕಾರ್ಯಕ್ಕಾಗಿ 10 ಸಾವಿರ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಮಾಡಿರುವ ನಿರ್ಣಯ ಬೇಜವಾಬ್ದಾರಿಯುತ ಮತ್ತು ದುರದೃಷ್ಟಕರ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಹಾಕಲು ಹಾಗೂ ರೈತರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ನಿರ್ಣಯ ಅಂಗೀಕರಿಸಿರುವುದು ಖಂಡನೀಯ. ಪ್ರಕೃತಿ ವಿಕೋಪವನ್ನು ಎದುರಿಸುವ ಸಂದರ್ಭದಲ್ಲೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಮಾಡುವ ಮನಸ್ಥಿತಿ ಈ ನಿರ್ಣಯದಲ್ಲಿ ಪ್ರತಿಫಲಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬರ ನಿರ್ವಹಣೆ, ಬೆಳೆಹಾನಿ ಸಮೀಕ್ಷೆ, ಎಸ್‌ಡಿಆರ್‌ಎಫ್ ನಿಧಿಯ ಸಮರ್ಪಕ ಬಳಕೆ, ರೈತರಿಗೆ ಮಧ್ಯಂತರ ಪರಿಹಾರ ವಿತರಣೆ ಹಾಗೂ ಕೇಂದ್ರ ಸರ್ಕಾರಕ್ಕೆ ಕಾಲಮಿತಿಯೊಳಗೆ ಸಮಗ್ರ ವರದಿ ಸಲ್ಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಬದಲು, ತನ್ನ ಆಡಳಿತ ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರದ ವಿರುದ್ದ ಆರೋಪಗಳ ನಿರ್ಣಯ ಕೈಗೊಂಡಿರುವುದು ರಾಜ್ಯದ ರೈತರಿಗೆ ಮಾಡುವ ದೊಡ್ಡ ದ್ರೋಹ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ 2 ಅಧಿಕಾರಕ್ಕೆ ಬಂದ ನಂತರ ಕರ್ನಾಟಕವು ವಿಪತ್ತು ನಿರ್ವಹಣೆ ಮತ್ತು ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ದಾಖಲೆ ಪ್ರಮಾಣದ ನೆರವು ಪಡೆದಿದೆ. ಕಳೆದ 12 ವರ್ಷಗಳಲ್ಲಿ ಎನ್‌ಡಿಆರ್‌ಎಫ್ ಅಡಿಯಲ್ಲಿ ಮಾತ್ರ 12,542.97 ಕೋಟಿಗೂ ಅಧಿಕ ನೆರವು ರಾಜ್ಯಕ್ಕೆ ಬಿಡುಗಡೆಯಾಗಿದೆ.
ಇದರ ಜೊತೆಗೆ ಎಸ್‌ಡಿಆರ್‌ಎಫ್ ಅಡಿಯಲ್ಲಿ ಕೇಂದ್ರದ ಪಾಲಿನ 3,806.30 ಕೋಟಿಗಳನ್ನು ನಿಯಮಾನುಸಾರ ನಿರಂತರವಾಗಿ ಬಿಡುಗಡೆ ಮಾಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ನೆರವು ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂದು ಕೆಪಿಸಿಸಿ ನಿರ್ಣಯದಲ್ಲಿ ಬಿಂಬಿಸಿರುವುದು ಅಧಿಕೃತ ಅಂಕಿ-ಅಂಶಗಳನ್ನೇ ನಿರಾಕರಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.
ಎನ್‌ಡಿಆರ್‌ಎಫ್ ನೆರವು ಯಾವುದೇ ಸರ್ಕಾರದ ಇಚ್ಛೆಯಂತೆ ಬಿಡುಗಡೆಯಾಗುವುದಿಲ್ಲ. ರಾಜ್ಯ ಸರ್ಕಾರ ಸಮಗ್ರ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಹಿತ ಮನವಿ ಸಲ್ಲಿಸಬೇಕು. ಆ ನಂತರ ಇದೇ ರೀತಿ ಇತರೆ ರಾಜ್ಯಗಳು ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ಕೇಂದ್ರದ ಗೃಹ ಸಚಿವರ ನೇತೃತ್ವದ ಸಮಿತಿ ಸಭೆ ನಡಸಿ ನಿಯಮಾನುಸಾರ ರಾಜ್ಯಗಳಿಗೆ ನಿಗದಿತ ಕಾನೂನುಬದ್ಧ ಪ್ರಕ್ರಿಯೆಯಂತೆ ನೆರವು ಬಿಡುಗಡೆ ಮಾಡುತ್ತದೆ. ಅಲ್ಲಿಯವರೆಗೆ ಎಸ್‌ಡಿಆರ್‌ಎಫ್ ನಿಧಿ ಬಳಸಿಕೊಂಡು ರೈತರಿಗೆ ತಕ್ಷಣದ ಪರಿಹಾರ ನೀಡುವುದು ರಾಜ್ಯ ಸರ್ಕಾರದ ಮೊದಲ ಕರ್ತವ್ಯ. ಈ ಮೂಲಭೂತ ಸತ್ಯವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಅಂಗೀಕರಿಸಿರುವ ಕೆಪಿಸಿಸಿ ನಡೆ ಅತ್ಯಂತ ಖಂಡನೀಯ.
ಆದ್ದರಿಂದ ಈ ರಾಜಕೀಯ ಪ್ರೇರಿತ ನಿರ್ಣಯ ಹಿಂಪಡೆದು, ರಾಜ್ಯ ಸರ್ಕಾರ ತನ್ನ ಆಡಳಿತಾತ್ಮಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ರೈತರ ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸುವುದು, ಸಾಲಮನ್ನಾ ಆಸೆಗಾಗಿ ಬರಗಾಲ ಬರಲಿ ಎಂದು ರೈತರು ಬಯಸುತ್ತಿದ್ದಾರೆ ಎಂದು ರೈತರನ್ನು ಅಪಮಾನ ಮಾಡುವುದು, ಕೇಂದ್ರ, ಸರ್ಕಾರದ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದರಲ್ಲೇ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದೆಯೇ ಹೊರತು ರೈತರ ನೆರವಿಗೆ ಬರುವ ಉದ್ದೇಶವೇ ಇದ್ದಂತಿಲ್ಲ ಎಂದು ಅವರು ಹೇಳಿದ್ದಾರೆ.
2019 ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಆಗ ಯಡಿಯೂರಪ್ಪನವರೇ ಸ್ವತಃ ಪ್ರವಾಸ ಕೈಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್‌ಡಿಆರ್‌ಎಫ್ ಅನ್ವಯ ನೀಡುವ ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಯಿತು.
ನಾನು ಕಂದಾಯ ಸಚಿವನಾಗಿದ್ದಾಗ 2022 ನೇ ಸಾಲಿನಲ್ಲಿ 139,421 ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಆಗ 14,62,841 ರೈತರ ಬ್ಯಾಂಕ್ ಖಾತೆಗೆ 2031.15 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ನೀಡಲಾಯಿತು. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ 6,800 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6,800 ರೂ. ಸೇರಿಸಿ, ಒಟ್ಟು 13,600 ರೂ. ನೀಡಲಾಯಿತು. ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 13,500 ರೂ. ಮಾರ್ಗಸೂಚಿ ದರವಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ 11,500 ರೂ. ಸೇರಿಸಿ ಒಟ್ಟು 25,000 ರೂ. ನೀಡಲಾಯಿತು.
ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ 10,000 ರೂ. ಸೇರಿಸಿ ಒಟ್ಟು 28,000 ರೂ. ನೀಡಲಾಯಿತು. ಕೇಂದ್ರದ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರವನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಅನುದಾನದ ಮೂಲಕ ನೀಡಿ ರೈತರ ಬೆನ್ನಿಗೆ ನಿಲ್ಲಲಾಗಿತ್ತು. ಅಂದರೆ ಅಂದಿನ ಬಿಜೆಪಿ ಸರ್ಕಾರದ ಅದ್ಯತೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ, ಬದಲಾಗಿ ರೈತರ ಕಣ್ಣೀರು ಒರೆಸುವುದಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪದಂತಹ ಸೂಕ್ಷ್ಮ ವಿಚಾರಗಳಲ್ಲಿಯೂ ರಾಜಕೀಯ ನಿರ್ಣಯಗಳನ್ನು ಅಂಗೀಕರಿಸಿ ಜನರನ್ನು ದಿಕ್ಕು ತಪ್ಪಿಸುವುದು ಯಾವುದೇ ಜವಾಬ್ದಾರಿಯುತ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರೈತರಿಗೆ ಈಗ ಬೇಕಾಗಿರುವುದು ಆರೋಪಗಳಲ್ಲ, ಆಶ್ರಯ; ಪ್ರಚಾರವಲ್ಲ, ಪರಿಹಾರ. ಆದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ನಿರಾಧಾರ ಆರೋಪಗಳನ್ನು ಕೈಬಿಟ್ಟು, ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು
ನಿರ್ವಹಿಸಿ, ತಾವು ನೀಡಿರುವ ಸಾಲ ಮನ್ನಾ ಭರವಸೆಯನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕೆಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರ ಕೂಡಲೇ ಕೆಲವು ಕ್ರಮಗಳನ್ನು ವಹಿಸಲು ಅವರು ಆಗ್ರಹಿಸಿದ್ದಾರೆ.
ಬರ ಮತ್ತು ಪ್ರವಾಹದಿ೦ದ ಸಂಕಷ್ಟಕ್ಕೊಳಗಾದ ಎಲ್ಲಾ ರೈತರಿಗೆ ಕನಿಷ್ಠ ₹50,000 ವರೆಗೆ ಸಾಲ ಮನ್ನಾ ಘೋಷಿಸಬೇಕು.
ಎಸ್‌ಡಿಆರ್‌ಎಫ್ ನಿಧಿಯಿಂದ ತಕ್ಷಣ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿ ಯಾವುದೇ ರೈತ ನೆರವಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.
ಪ್ರತಿ ತಾಲ್ಲೂಕಿನಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಿ ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಹಾಗೂ ಪುನರ್ವಸತಿ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕು.
ಜಿಲ್ಲಾಧಿಕಾರಿಗಳಿಗೆ ಪಿಡಿ ಅಕೌಂಟ್ ಹಾಗೂ ಎಸ್‌ಡಿಆರ್‌ಎಫ್ ನಿಧಿಯಿಂದ ತುರ್ತು ಅನುದಾನ ಬಿಡುಗಡೆ ಮಾಡಿ ಪರಿಹಾರ ಕಾರ್ಯಗಳಿಗೆ ವೇಗ ನೀಡಬೇಕು.
ಬೆಳೆಹಾನಿ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ರಾಜ್ಯಕ್ಕೆ ದೊರೆಯಬೇಕಾದ ಎನ್‌ಡಿಆರ್‌ಎಫ್ ನೆರವನ್ನು ಶೀಘ್ರ ಪಡೆದುಕೊಳ್ಳಬೇಕು.
ಸಚಿವರು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು.
