ಮೈಸೂರು: ಖ್ಯಾತ ಹಿರಿಯ ಗಾಯಕಿ,ಗಾನಕೋಗಿಲೆ’ ಎಂದೇ ಪ್ರಸಿದ್ಧರಾಗಿದ್ದ ಎಸ್. ಜಾನಕಿ ಅವರು ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಎಸ್. ಜಾನಕಿ ಅವರು, ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸುವ ಮೂಲಕ ಕನ್ನಡಿಗರ ಮನೆಮನಗಳಿಗೆ ಹತ್ತಿರವಾಗಿದ್ದರು. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಒಟ್ಟು 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಅಪ್ರತಿಮ ಸಾಧನೆ ಮಾಡಿದ್ದರು.
ಅದರಲ್ಲೂ ಪ್ರಮುಖವಾಗಿ 70 ಮತ್ತು 80ರ ದಶಕದಲ್ಲಿ ವರನಟ ಡಾ. ರಾಜ್‌ಕುಮಾರ್ ಹಾಗೂ ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಸುವರ್ಣ ಯುಗ ಸೃಷ್ಟಿಸಿತ್ತು. ಇವರಿಬ್ಬರ ಧ್ವನಿಯಲ್ಲಿ ಮೂಡಿಬಂದ ‘ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ’ ಸೇರಿದಂತೆ ನೂರಾರು ಗೀತೆಗಳು ಸದಾ ಹಸಿರಾಗಿವೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ, ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಕನ್ನಡ ಚಿತ್ರರಂಗದ ಮೇರುಗಾಯಕಿ, ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಜನರ ಮನೆಮನಗಳಲ್ಲಿ ನೆಲೆಸಿದ್ದ ಬಹುಭಾಷಾ ಗಾಯಕಿ ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ.
ಅನೇಕ ಗಾಯಕರನ್ನು ಪ್ರೋತ್ಸಾಯಿಸಿ ಬೆಳೆಸಿದ, ಸರಳತೆಯ ಸಾಕಾರಮೂರ್ತಿ ಜಾನಕಮ್ಮನವರ ಅಪ್ರತಿಮ ಕಂಠಸಿರಿ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಂದೆಂದಿಗೂ ಅಮರ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬವರ್ಗ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಎಕ್ಸ್ ಖಾತೆಯಲ್ಲಿ, ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ.
ಕನ್ನಡ ಸೇರಿದಂತೆ ಸುಮಾರು 20 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ್ದ ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಸಂಗೀತ ಲೋಕ ಇಂದು ಬಡವಾಗಿದೆ. ಜಾನಕಿ ಅಮ್ಮನ ಹಾಡುಗಳಿಗೆ ಕಿವಿಗೊಟ್ಟು ಕೂತರೆ ಸಂಗೀತದ ಕಡಲಲ್ಲಿ ತೇಲಿಹೋದ ಅನುಭವವಾಗುತ್ತಿತ್ತು.
ಸುಮಧುರ ಧ್ವನಿ, ವಾತ್ಸಲ್ಯ ತುಂಬಿದ ಮಾತುಗಳಿಂದ ಅವರು ಎಂದಿಗೂ ಜನಮಾನಸದಲ್ಲಿ ಶಾಶ್ವತ. ತುಂಬಿದ ಕೊಡದಂತೆ ಬದುಕಿದ ಮೇರು ಸಾಧಕಿಗೆ ಭಾವಪೂರ್ಣ ವಿದಾಯಗಳು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
