ಸಮಗ್ರ ಸುದ್ದಿ

ದುರ್ಗಾಪುರ ಉಕ್ಕು ಸ್ಥಾವರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ| ಉಕ್ಕು ಕ್ಷೇತ್ರದ ಸ್ವಾವಲಂಬನೆ, ಇಂಗಾಲಮುಕ್ತ ಉಕ್ಕು ಉತ್ಪಾದನೆಗೆ ಒತ್ತು ನೀಡುವ ಬಗ್ಗೆ ಸಮಾಲೋಚನೆ

Share

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಅಧಿಕೃತ ಭೇಟಿಯಲ್ಲಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಕುಕತಿ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಎರಡನೇ ದಿನವಾದ ಸೋಮವಾರ ದುರ್ಗಾಪುರ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲನೆ ನಡೆಸಿದರು.

ಭಾನುವಾರ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವರು ಬರ್ನ್ ಪುರದ ಇಸ್ಕೋ ಮುಖ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತದನಂತರ ದುರ್ಗಾಪುರದ ಸ್ಥಾವರಕ್ಕೆ ಭೇಟಿ ನೀಡಿದರು. ಇವರೆಡೂ ಕಾರ್ಖಾನೆಗಳು ಉಕ್ಕು ಸಚಿವಾಲಯದ ಅಧೀನದ ಭಾರತೀಯ ಉಕ್ಕು ಪ್ರಾಧಿಕಾರ (SAIL) ವ್ಯಾಪ್ತಿಗೆ ಬರುತ್ತವೆ.

ಬೆಳಗ್ಗೆಯಿಂದಲೇ ದುರ್ಗಾಪುರ ಕಾರ್ಖಾನೆಯ ಪರಿಶೀಲನೆ ಮತ್ತು ನೇರ ವೀಕ್ಷಣೆ ಕೈಗೊಂಡ ಕೇಂದ್ರ ಸಚಿವರು; ಪ್ರಮುಖ ಉತ್ಪಾದನಾ ಸೌಲಭ್ಯಗಳನ್ನು ಪರಿಶೀಲಿಸಿ, ಉಕ್ಕು ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿ ಸಭೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಭಾರತದ ಉಕ್ಕು ಉತ್ಪಾದಕ ಸಂಸ್ಥೆಗಳಲ್ಲಿಯೇ ದೈತ್ಯ ಸಂಸ್ಥೆಯಾದ ಭಾರತೀಯ ಉಕ್ಕು ಪ್ರಾಧಿಕಾರದ ಬೆಳವಣಿಗೆ ಮತ್ತು ಮುನ್ನೋಟದ ಕುರಿತು ಸಂಸದೀಯ ಸಮಿತಿ ಜತೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದರು. ಈ ಸಭೆಯಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದೀಯ ಸಮಿತಿಯ ಸದಸ್ಯರಾದ ಸಂಸತ್ ಸದಸ್ಯರುಗಳು, ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್, ಭಾರತೀಯ ಉಕ್ಕು ಪ್ರಾಧಿಕಾರದ (SAIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕುಮಾರ್ ಪಾಂಡ ಸೇರಿದಂತೆ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರ ಸಚಿವರು ದುರ್ಗಾಪುರ ಉಕ್ಕು ಸ್ಥಾವರದ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು.

ಭಾರತೀಯ ಉಕ್ಕು ಪ್ರಾಧಿಕಾರದ (SAIL) ಕಾರ್ಯಕ್ಷಮತೆ ವೃದ್ಧಿಸುವ ನಿಟ್ಟಿನಲ್ಲಿ ಈಗಾಗಲೇ ಕೈಗೊಂಡಿರುವ ಉಪಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ರೂಪಿಸಲಾಗಿರುವ ವಿಸ್ತರಣಾ ಯೋಜನೆಗಳು ಇತ್ಯಾದಿಗಳ ಬಗ್ಗೆ ಸಚಿವರು ಅತ್ಯಂತ ಮಹತ್ವಪೂರ್ಣವಾಗಿ ಸಮಾಲೋಚನೆ ನಡೆಸಿದರು. ಅಲ್ಲದೆ ದೀರ್ಘಾವಧಿ ಸುಸ್ಥಿರ ಬೆಳವಣಿಗೆ ದೃಷ್ಟಿಯಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹೆಗ್ಗುರಿಯೊಂದಿಗೆ ಸಚಿವರು ತಮ್ಮ ಚರ್ಚೆಯನ್ನು ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ **ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಭಾರತೀಯ ಒಕ್ಕೂ ಪ್ರಾಧಿಕಾರ ಈ ದೇಶದಲ್ಲಿ ಅತಿ ಹೆಚ್ಚು ಉಕ್ಕು ಉತ್ಪಾದನೆ ಮಾಡುವ ಸಂಸ್ಥೆಯಾಗಿದೆ. ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಾಧಿಕಾರ ನೀಡುತ್ತಿರುವ ಬಹುದೊಡ್ಡ ಕೊಡುಗೆಯನ್ನು ಸಚಿವರು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ ಭಾರತದ ಕೈಗಾರಿಕಾ ಬೆಳವಣಿಗೆಯ ಕೇಂದ್ರಬಿಂದುವಾಗಿ ಭಾರತೀಯ ಉಕ್ಕು ಪ್ರಾಧಿಕಾರ ಹೊರಹೊಮ್ಮಿದೆ. ಇದು ಈ ರಾಷ್ಟ್ರವನ್ನು ಅಕ್ಷರಶಃ ಬಲಿಷ್ಠವಾಗಿ ನಿರ್ಮಾಣ ಮಾಡಲು ನೆರವಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಮಹಾರತ್ನ ಸ್ಥಾನವನ್ನು ಹೊಂದಿದೆ. ಭಾರತದ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಈ ಸಂಸ್ಥೆ ನಿರ್ಣಾಯಕ ಪಾತ್ರ ಪೋಷಿಸಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ದುರ್ಗಾಪುರ ಉಕ್ಕು ಸ್ಥಾವರದ ಕಾರ್ಯಕ್ಷಮತೆಯನ್ನು ಬಗ್ಗೆ ಮಾತನಾಡಿದ ಕೇಂದ್ರ ಸಚಿವರು; 2025–26ನೇ ಹಣಕಾಸು ವರ್ಷವು ಕಚ್ಚಾ ಉಕ್ಕಿನ ಉತ್ಪಾದನೆ, ಮಾರಾಟ ಮಾಡಬಹುದಾದ ಉಕ್ಕಿನ ಉತ್ಪಾದನೆ, ಸಿದ್ಧಪಡಿಸಿದ ಉಕ್ಕಿನ ಉತ್ಪಾದನೆ, ಬ್ಲಾಸ್ಟ್ ಫರ್ನೇಸ್ (ಕುಲುಮೆ) ತಯಾರಿಕೆ, ಕಲ್ಲಿದ್ದಲು ದರ ಮತ್ತು ನಿರ್ದಿಷ್ಟ ಇಂಧನ ಬಳಕೆ ಸೇರಿದಂತೆ ಬಹು ಕಾರ್ಯಾಚರಣೆಯ ಆಯಾಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.

2025–26ರ ಹಣಕಾಸು ವರ್ಷದಲ್ಲಿ ಸಾಧಿಸಿದ ದಾಖಲೆಯ ಪ್ರಗತಿಯು ಕೇವಲ ಹೆಚ್ಚಿನ ಉತ್ಪಾದನೆಯನ್ನು ಮಾಡುವುದು ಮಾತ್ರವಲ್ಲದೆ; ಕಾರ್ಯಾಚರಣೆಯ ಶ್ರೇಷ್ಠತೆ, ದಕ್ಷತೆ, ವೆಚ್ಚ ಕಡಿತ ಮತ್ತು ತಾಂತ್ರಿಕ ಪ್ರಗತಿಯನ್ನು ಕಾಯ್ದುಕೊಂಡು ಬಂದಿದೆ. ಇಷ್ಟೇ ಅಲ್ಲದೆ ತಾಂತ್ರಿಕ ನಾವಿನ್ಯತೆ, ಸ್ಪೆಷಾಲಿಟಿ ಸ್ಟೀಲ್ ಉತ್ಪಾದನೆ, ಉಕ್ಕು ಉತ್ಪಾದನೆಯಲ್ಲಿ ಡಿಜಿಟಲ್ ವ್ಯವಸ್ಥೆ ಅನುಷ್ಠಾನ ಸೇರಿದಂತೆ ಅನೇಕ ಉಪಕ್ರಮಗಳ ಮೂಲಕ ಭಾರತೀಯ ಉಕ್ಕು ಪ್ರಾಧಿಕಾರವು ತನ್ನೆಲ್ಲ ಉಕ್ಕು ಸ್ಥಾವರಗಳನ್ನು ಸುಸ್ಥಿರ ಬೆಳವಣಿಗೆಯತ್ತ ಕೊಂಡೊಯ್ಯುತ್ತಿದೆ ಎಂದು ಸಚಿವರು ಹೇಳಿದರು.

ಬ್ಲಾಸ್ಟ್ ಫರ್ನೇಸ್‌ಗಳಲ್ಲಿ ಹೈಡ್ರೋಜನ್ ಇಂಧನ ಬಳಕೆ ಮಾಡುವ ಮೂಲಕ ಇಂಗಾಲ ಹೊರಸುಸುವಿಕೆಯನ್ನು ಶೂನ್ಯ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಭಾರತೀಯ ಉಕ್ಕು ಪ್ರಾಧಿಕಾರ ದೊಡ್ಡ ಹೆಜ್ಜೆ ಇರಿಸಿದೆ. ಅಲ್ಲದೆ ಇಂಧನ ಸಾಮರ್ಥ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿಯೂ ಪರಿಣಾಮಕಾರಿಯಾಗಿ ಅಭಿವೃದ್ಧಿಯನ್ನು ಸಾಧಿಸಿದೆ. ಪರಿಸರ ಪೂರಕ ಉಪಕ್ರಮಗಳಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು.


Share

You cannot copy content of this page