ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ನೆರವೇರಿಸುವ ಪ್ರಥಮ ಆರತಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪಿಸಿರುವ ಹೊಸ ಶಿಷ್ಟಾಚಾರ ವ್ಯವಸ್ಥೆ ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುವ ಮಹತ್ವದ ಹೆಜ್ಜೆಯಾಗಿದ್ದು, ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ, ಈ ಗೌರವವನ್ನು ಕೇವಲ ರಾಜಕೀಯ ಪ್ರತಿನಿಧಿಗಳಿಗೆ ಮಾತ್ರ ಸೀಮಿತಗೊಳಿಸದೆ, ಆ ದಿನ ತಿರುಮಲದಲ್ಲಿ ಉಪಸ್ಥಿತರಿರುವ ಕರ್ನಾಟಕದ ಪ್ರಮುಖ ಗಣ್ಯರೊಬ್ಬರಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಶಿಷ್ಟಾಚಾರ ರೂಪಿಸುವುದು ಸೂಕ್ತ ಎಂದು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯನಗರ ಸಾಮ್ರಾಜ್ಯದ ನಂತರ ಮೈಸೂರು ಮಹಾರಾಜರು ತಿರುಪತಿ ದೇವಸ್ಥಾನಕ್ಕೆ ನೀಡಿದ ಸೇವೆಯ ಸ್ಮರಣಾರ್ಥ, ಸುಪ್ರಭಾತ ಸೇವೆಯ ನಂತರ ನಡೆಯುವ ಪ್ರಥಮ ಆರತಿ ಹಾಗೂ ನಿತ್ಯಾರತಿ ಸ್ವೀಕರಿಸುವ ಗೌರವವನ್ನು ಐತಿಹಾಸಿಕವಾಗಿ ಮೈಸೂರು ಮಹಾರಾಜರಿಗೆ ನೀಡಲಾಗುತ್ತಿತ್ತು . ಮೈಸೂರು ಸಂಸ್ಥಾನದ ಆಡಳಿತ ಅಂತ್ಯಗೊಂಡ ನಂತರ ಈ ಗೌರವ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಮುಂದುವರಿಯುತ್ತಿದ್ದು, ಇಂದಿಗೂ ದೇವರ ಆರತಿಗೆ ಬಳಸುವ ದೀಪ ಮತ್ತು ತುಪ್ಪವನ್ನು ಮೈಸೂರು ಮಹಾರಾಜರ ಹೆಸರಿನಲ್ಲೇ ಸಮರ್ಪಿಸಲಾಗುತ್ತಿದೆ.
ಹಿಂದೆ ಮೈಸೂರು ಮಹಾರಾಜರು ದೇವಸ್ಥಾನಕ್ಕೆ ಆಗಮಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಅವರ ಪರವಾಗಿ ದಿವಾನರು ಅಥವಾ ಸರ್ಕಾರದ ಹಿರಿಯ ಪ್ರತಿನಿಧಿಗಳು ಆರತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಪ್ರಸ್ತುತ ಈ ಕುರಿತು ಯಾವುದೇ ಸ್ಪಷ್ಟ ಆಡಳಿತಾತ್ಮಕ ಶಿಷ್ಟಾಚಾರ ಇಲ್ಲದಿರುವುದರಿಂದ, ಮಹಾರಾಜರ ಅನುಪಸ್ಥಿತಿಯಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಆರತಿ ಸ್ವೀಕರಿಸುವ ವ್ಯವಸ್ಥೆ ಜಾರಿಯಲ್ಲಿದೆ.
ಈ ಹಿನ್ನೆಲೆಯಲ್ಲಿ, ಈ ಶಿಷ್ಟಾಚಾರವನ್ನು ಮರುಪರಿಶೀಲಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಸ್ತಾಪ ಸ್ವಾಗತಾರ್ಹವಾಗಿದೆ. ಆದರೆ, ಈ ಐತಿಹಾಸಿಕ ಗೌರವವನ್ನು ಕೇವಲ ರಾಜಕೀಯ ಹುದ್ದೆಗಳಿಗೆ ಸೀಮಿತಗೊಳಿಸದೆ, ಆ ದಿನ ತಿರುಮಲದಲ್ಲಿ ಉಪಸ್ಥಿತರಿರುವ ರಾಜ್ಯದ ಪ್ರಮುಖ ಗಣ್ಯರೊಬ್ಬರಿಗೆ ರಾಜ್ಯದ ಪರವಾಗಿ ಆರತಿ ಸ್ವೀಕರಿಸುವ ಅವಕಾಶ ಕಲ್ಪಿಸುವ ರೀತಿಯಲ್ಲಿ ನಿಯಮ ರೂಪಿಸುವುದು ಹೆಚ್ಚು ಸೂಕ್ತವಾಗಲಿದೆ ಎಂದು ನರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂತಹ ಐತಿಹಾಸಿಕ ಸಂಪ್ರದಾಯಗಳು ಹಾಗೂ ಧಾರ್ಮಿಕ ಶಿಷ್ಟಾಚಾರಗಳ ಬಗ್ಗೆ ಆಸಕ್ತಿ ವಹಿಸಿ, ಅವುಗಳಿಗೆ ಸೂಕ್ತವಾದ ಆಡಳಿತಾತ್ಮಕ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಶಿಷ್ಟಾಚಾರದ ವ್ಯವಸ್ಥೆಯನ್ನು ಕೇವಲ ಟಿಟಿಡಿ ಅಧೀನದ ದೇವಾಲಯಗಳಿಗೆ ಮಾತ್ರ ಸೀಮಿತಗೊಳಿಸದೆ, ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿಯೂ ಐತಿಹಾಸಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಸೂಕ್ತ ಶಿಷ್ಟಾಚಾರ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಟಿಟಿಡಿ ಸದಸ್ಯ ಭಾನುಪ್ರಕಾಶ್ ಅವರು ಉಪಮುಖ್ಯಮಂತ್ರಿಗಳ ಹೇಳಿಕೆಯ ಹಿನ್ನೆಲೆಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದೆ ಪ್ರತಿಕ್ರಿಯಿಸಿರುವುದು ಸರಿಯಲ್ಲ. ಕರ್ನಾಟಕ ಸರ್ಕಾರ ಈ ಕುರಿತು ಅಧಿಕೃತ ಪ್ರಸ್ತಾವನೆಯನ್ನು ಟಿಟಿಡಿ ಆಡಳಿತ ಮಂಡಳಿಗೆ ಸಲ್ಲಿಸಿದಲ್ಲಿ, ದೇವಸ್ಥಾನದ ಸಂಪ್ರದಾಯ, ಐತಿಹಾಸಿಕ ಹಿನ್ನೆಲೆ ಹಾಗೂ ಜಾರಿಯಲ್ಲಿರುವ ನಿಯಮಾವಳಿಗಳನ್ನು ಪರಿಗಣಿಸಿ ಟಿಟಿಡಿ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಪರಿಶೀಲಿಸಲಿದೆ ಎಂದು ಎಸ್. ನರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
