ಕೃಷಿ

ಮೆಕ್ಕೆ ಜೋಳ ಖರೀದಿ ಹೆಚ್ಚಳಕ್ಕೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

Share

ಬೆಂಗಳೂರು: ರಾಜ್ಯ ಸರ್ಕಾರ ಮೆಕ್ಕೆ ಜೋಳ ಬೆಳೆ ಬೆಳೆಯುವ ರೈತರಿಗೆ ಗುಡ್ ನ್ಯೂಸ್ ನೀಡಿದೆ.. ಪ್ರತಿ ರೈತರಿಂದ ಖರೀದಿಸುವ ಮೆಕ್ಕೆಜೋಳದ ಗರಿಷ್ಠ ಮಿತಿಯನ್ನು 20 ಕ್ವಿಂಟಾಲ್‌ನಿಂದ 50 ಕ್ವಿಂಟಾಲ್‌ಗೆ ಹೆಚ್ಚಿಸಿ ದಿನಾಂಕ 02.12.2025 ರಂದು ತಿದ್ದುಪಡಿ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಾಗೂ ಕೃಷಿ ಸಚಿವ ಎನ್ .ಚಲುವರಾಯಸ್ವಾಮಿಯವರ ವಿಶೇಷ ಕಾಳಜಿ ಹಾಗೂ ಪ್ರಯತ್ನದಿಂದ ಸಂಕಷ್ಟದಲ್ಲಿದ್ದ ಮೆಕ್ಕೆ ಜೋಳ ಬೆಳೆಯುವ ರೈತರ ಪರವಾಗಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರತಿ ಎಕರೆಗೆ 12 ಕ್ವಿಂಟಾಲ್ ಲೆಕ್ಕದಲ್ಲಿ ಗರಿಷ್ಠ 20.00 ಕ್ವಿಂಟಾಲ್ ಮೆಕ್ಕೆಜೋಳವನ್ನು ಮಾತ್ರ ಬೆಂಬಲ ಬೆಲೆ ರೂ. 2400.00 ಪ್ರತಿ ಕ್ವಿಂಟಾಲ್ ದರದಲ್ಲಿ ಖರೀದಿಸಲು ಈ ಹಿಂದೆ ಆದೇಶ ಹೊರಡಿಸಲಾಗಿತ್ತು.

ಇದೀಗ ಈ ಮಿತಿಯನ್ನು 50.00 ಕ್ವಿಂಟಾಲ್‌ಗೆ ಏರಿಕೆ ಮಾಡುವ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ದೊಡ್ಡ ಪ್ರಮಾಣದಲ್ಲಿ ತಮ್ಮ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ.

FRUITS ತಂತ್ರಾಂಶದಲ್ಲಿ ನೋಂದಾಯಿತವಾಗಿರುವ ರೈತರ ಜಮೀನು ವಿಸ್ತೀರ್ಣದ ಆಧಾರದ ಮೇಲೆಯೇ ಈ ಗರಿಷ್ಠ ಮಿತಿ ನಿಗದಿಪಡಿಸಲಾಗುತ್ತದೆ. ಜೊತೆಗೆ ಡಿಸ್ಟಿಲರಿಗಳ ಸಮೀಪದಲ್ಲಿರುವ PACS (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು) ಮೂಲಕ ಖರೀದಿಗೆ ಆದ್ಯತೆ ನೀಡಲಾಗುವುದು ಎಂದು ತಿದ್ದುಪಡಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ರೈತರು ಹಾಗೂ ರೈತ ಸಂಘಟನೆಗಳ ಮನವಿ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಾವಿರಾರು ಮೆಕ್ಕೆಜೋಳ ಬೆಳೆಗಾರ ರೈತರಿಗೆ ನೇರ ಲಾಭವಾಗಲಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿಯಿಂದ ರಕ್ಷಣೆ ದೊರೆಯಲಿದೆ ಎಂದು ರೈತ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ಈ ತಿದ್ದುಪಡಿ ಆದೇಶವನ್ನು ಎಲ್ಲ PACS, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣ ಜಾರಿಗೆ ತರಬೇಕೆಂದು ಸರ್ಕಾರ ಸೂಚಿಸಿದೆ.


Share

You cannot copy content of this page