ಸಮಗ್ರ ಸುದ್ದಿ

ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಸಹಕಾರ ಅಗತ್ಯ|ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ₹40,000 ಕೋಟಿ ಅನುದಾನವನ್ನು ಕೊಡಿಸುವ ನಿಟ್ಟಿನಲ್ಲಿ ಸಂಸದರು ಶ್ರಮಿಸಬೇಕು- ಡಾ. ಜಿ ಪರಮೇಶ್ವರ

Share

ನವದೆಹಲಿ : ಕೇಂದ್ರ ಸರ್ಕಾರವು ನೀಡಬೇಕಾದ ₹40,000 ಕೋಟಿಗೂ ಹೆಚ್ಚಿನ ಅನುದಾನ ಬಾಕಿ ಉಳಿಸಿಕೊಂಡಿದ್ದು, ರಾಜ್ಯಕ್ಕೆ ಕೊಡಿಸುವ ನಿಟ್ಟಿನಲ್ಲಿ‌ ಎಲ್ಲ‌ ಸಂಸದರು ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಮನವಿ‌ ಮಾಡಿದರು.

ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಕರ್ನಾಟಕದ ಸರ್ವಪಕ್ಷ ಸಂಸದರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ 15ನೇ ಹಣಕಾಸು ಆಯೋಗದಲ್ಲಿ ಹೇಳಿದ್ದ ವಿಶೇಷ ಅನುದಾನ ₹5,495 ಕೋಟಿ, ಕೆರೆಗಳ ಅಭಿವೃದ್ಧಿಗೆ ರೂ.3,000 ಕೋಟಿ, ಬೆಂಗಳೂರಿನ ಹೊರ ವರ್ತುಲ ರಸ್ತೆಗೆ‌ ರೂ.3,000 ಕೋಟಿ, ಜಲಜೀವನ್ ಮಿಶನ್ ನಡಿ ಬಾಕಿ ಇರುವ ರೂ.17,554 ಕೋಟಿ, 15ನೇ ಹಣಕಾಸು ಆಯೋಗವು ಗ್ರಾಮೀಣ ಪ್ರದೇಶ ಕ್ರಿಟಿಕಲ್ ಇನ್ಫ್ರಾಸ್ಟ್ರಕ್ಚರ್ ಗೆ ರೂ.2,860 ಕೋಟಿ ನೀಡಬೇಕಿತ್ತು ಎಂದು ವಿವರಿಸಿದರು.

ಕೇಂದ್ರ ಸರ್ಕಾರವೇ ಭದ್ರ ಮೇಲ್ದಂಡೆ ಯೋಜನೆಗಾಗಿ ರೂ.5,400 ಕೋಟಿ ಕೊಡುತ್ತೇವೆಂದು ಬಜೆಟ್‌ನಲ್ಲಿ ಹೇಳಿತ್ತು. ಆದರೆ, ಈವರೆಗೆ ಕೊಡಲಿಲ್ಲ. ಎಂಎಸ್‌ಪಿಯಡಿ ಖರೀದಿಸಿದ ಕೃಷಿ ಉತ್ಪನ್ನಗಳಿಗೆ ಬಾಕಿ ಇರುವ ಮೊತ್ತ ₹1,500 ಕೋಟಿ ಸೇರಿ ರಾಜ್ಯಕ್ಕೆ ನೀಡಬೇಕಾದ ಒಟ್ಟು ರೂ. 40,000 ,ಕೋಟಿ ರೂ. ಗಳಿಗೂ ಹೆಚ್ಚಿನ ಅನುದಾನ ನೀಡಿಲ್ಲ. ಇದರ ಜೊತೆಗೆ 60ಕ್ಕಿಂತ ಹೆಚ್ಚಿನ ಪ್ರೋಪೊಸಲ್‌ಗಳು ಕೇಂದ್ರದಲ್ಲಿ ಬಾಕಿ ಇವೆ ಎಂದು ಹೇಳಿದರು.

ಕರ್ನಾಟಕ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಕೇಂದ್ರವು ತಾರತಮ್ಯ ಧೋರಣೆ ತೋರಿಸದೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಬರ ಇದೆ. ಈ ವರ್ಷದ ಎಲ್ ನಿನೋ ಸೂಪರ್ ಎಲ್‌ ನೀನೋ ಆಗಿದೆ. ಉಷ್ಣಾಂಶ ಸುಮಾರು 3 ಡಿಗ್ರಿಗಳಿಗೂ ಹೆಚ್ಚಿಗೆ ದಾಖಲಾಗುತ್ತಿದೆ. ರಾಜ್ಯದಲ್ಲಿ 169ಕ್ಕೂ ಹೆಚ್ಚಿನ ತಾಲ್ಲೂಕುಗಳಲ್ಲಿ ಮಳೆಯೇ ಆಗಿಲ್ಲ. ಬಿತ್ತನೆ ಮಾಡಿದ ಬೆಳೆ ಕೂಡ ಮಳೆ ಇಲ್ಲದೆ ಹಾಳಾಗಿದೆ. ಕೇಂದ್ರಕ್ಕೆ ಈಗಾಗಲೇ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಬರ ಘೋಷಿಸಲು ಇರುವ ನಿಯಮಗಳನ್ನು ಸಡಿಲಿಸಬೇಕು. ಈ ಬಗ್ಗೆ ಕೇಂದ್ರಕ್ಕೆ ಒತ್ತಡ ಹೇರುವಂತೆ ಸಂಸದರಲ್ಲಿ ಮನವಿ ಮಾಡಿದರು.

ಬಹಳ ವರ್ಷಗಳಿಂದ ಕೃಷ್ಣ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳು ಬಾಕಿ ಇವೆ. ಅವುಗಳನ್ನು ಇತ್ಯರ್ಥ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಂಸದರು ರಾಜ್ಯಕ್ಕೆ ಅಗತ್ಯ ಸಹಕಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.


Share

You cannot copy content of this page