ನವದೆಹಲಿ: ಭಾರತದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ ‘ವಿಕ್ರಮ್-1’ (Vikram-1) ನ ಯಶಸ್ವಿ ಉಡಾವಣೆಯ ಐತಿಹಾಸಿಕ ಸಾಧನೆಗೈದಿರುವ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ನ ಸಂಸ್ಥಾಪಕರಾದ ಪವನ್ ಕುಮಾರ್ ಚಂದನಾ ಮತ್ತು ನಾಗ ಭರತ್ ಡಾಕಾ ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸ್ವೀಕರಿಸಿದ ಬೆನ್ನಲ್ಲೇ, ಸ್ಕೈರೂಟ್ ಸಂಸ್ಥಾಪಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಐತಿಹಾಸಿಕ ಮೈಲಿಗಲ್ಲಿಗೆ ಸಿಎಂ ಮೆಚ್ಚುಗೆ:
ಭಾರತದ ವಾಣಿಜ್ಯಿಕ ಬಾಹ್ಯಾಕಾಶ ಪಯಣದಲ್ಲಿ ಹೊಸ ಅಧ್ಯಾಯ ಬರೆದಿರುವ ಸ್ಕೈರೂಟ್ ತಂಡವನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 18, 2026 ರಂದು ಯಶಸ್ವಿಯಾಗಿ ಉಡಾವಣೆಗೊಂಡ ‘ವಿಕ್ರಮ್-1’, ಹಲವು ಪೇಲೋಡ್‌ಗಳನ್ನು ಭೂಮಿಯ ಕೆಳ ಕಕ್ಷೆಗೆ (Low Earth Orbit) ಸೇರಿಸುವ ಮೂಲಕ ಕಕ್ಷೆಗೆ ತಲುಪಿದ ಭಾರತದ ಮೊದಲ ಖಾಸಗಿ ಉಡಾವಣಾ ವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಾಧನೆಯೊಂದಿಗೆ ಅಮೆರಿಕ ಮತ್ತು ಚೀನಾ ನಂತರ ಖಾಸಗಿ ಕಕ್ಷೀಯ ಉಡಾವಣಾ ಸಾಮರ್ಥ್ಯ ಹೊಂದಿದ ವಿಶ್ವದ ಮೂರನೇ ದೇಶವಾಗಿ ಭಾರತ ಹೊರಹೊಮ್ಮಿದೆ.
ಸ್ಪೇಸ್-ಟೆಕ್ ಯೂನಿಕಾರ್ನ್ ಸಂಸ್ಥೆಗೆ ಅಭಿನಂದನೆ
ಇತ್ತೀಚೆಗೆ 1.1 ಬಿಲಿಯನ್ ಯುಎಸ್ ಡಾಲರ್ (USD 1.1 Billion) ಮೌಲ್ಯಾಂಕನ ದಾಟುವ ಮೂಲಕ ಭಾರತದ ಮೊದಲ ‘ಸ್ಪೇಸ್-ಟೆಕ್ ಯೂನಿಕಾರ್ನ್’ (Space-tech Unicorn) ಎನಿಸಿಕೊಂಡ ಸ್ಕೈರೂಟ್ ಸಂಸ್ಥೆಯ ಸಾಧನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ಲಾಘಿಸಿದರು. 2022 ರ ಸಬ್‌ಆರ್ಬಿಟಲ್ ‘ವಿಕ್ರಮ್-ಎಸ್’ ಪರೀಕ್ಷೆಯಿಂದ ಹಿಡಿದು ಇಂದಿನ ಮೈಲಿಗಲ್ಲಿನ ‘ವಿಕ್ರಮ್-1’ ವರೆಗಿನ ಸ್ಕೈರೂಟ್‌ನ ಪ್ರಯಾಣವು ಭಾರತೀಯ ನಾವೀನ್ಯತೆ, ಉದ್ಯಮಶೀಲತೆ ಮತ್ತು ವೈಜ್ಞಾನಿಕ ಕೌಶಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಕರ್ನಾಟಕದ ಬೆಂಬಲ
ಸಭೆಯಲ್ಲಿ, ಭಾರತದ ಬಾಹ್ಯಾಕಾಶ ಅರ್ಥವ್ಯವಸ್ಥೆಯ ಭವಿಷ್ಯ, ಏರೋಸ್ಪೇಸ್ ಮತ್ತು ಡೀಪ್-ಟೆಕ್ನಾಲಜಿ ಕ್ಷೇತ್ರಗಳಲ್ಲಿನ ಹೊಸ ಅವಕಾಶಗಳು ಹಾಗೂ ಸಂಶೋಧನಾಧಾರಿತ ಬೆಳವಣಿಗೆಯ ಕುರಿತು ಚರ್ಚಿಸಲಾಯಿತು.
ಕರ್ನಾಟಕವನ್ನು ಏರೋಸ್ಪೇಸ್, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಟ್ಟದ ನೆಲೆನ್ನಾಗಿಸಲು ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದೇ ವೇಳೆ ಪುನರುಚ್ಚರಿಸಿದರು. ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ನಾಯಕತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸ್ಕೈರೂಟ್ ತಂಡಕ್ಕೆ ತಮ್ಮ ಹೃತ್ಪೂರ್ವಕ ಶುಭ ಹಾರೈಸಿದರು.
