ಬೆಂಗಳೂರು: ಯುವಜನರಲ್ಲಿ ಇಂಧನ ಸಂರಕ್ಷಣೆ ಹಾಗೂ ಸುಸ್ಥಿರತೆಯ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು “ಕರ್ನಾಟಕ ರಾಜ್ಯ ಇಂಧನ ಕ್ವಿಜ್ ಸ್ಪರ್ಧೆ” ಸೆಮಿಫೈನಲ್ ಹಾಗೂ ಗ್ರ್ಯಾಂಡ್ ಫಿನಾಲೆಯನ್ನು ಶನಿವಾರ ಯಶಸ್ವಿಯಾಗಿ ನಡೆಸಿತು.
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಲ್ಲಿ ಇಂಧನ ಸಂರಕ್ಷಣೆ, ಇಂಧನ ದಕ್ಷತೆ, ನವೀಕರಿಸಬಹುದಾದ ಇಂಧನ, ಹವಾಮಾನ ಬದಲಾವಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಕ್ರೆಡಲ್ ಈ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು.
ಸ್ಪರ್ಧೆಯಲ್ಲಿ ರಾಜ್ಯದ 7 ಇಂಜಿನಿಯರಿಂಗ್ ಕಾಲೇಜುಗಳ 10 ವಿದ್ಯಾರ್ಥಿಗಳು ಗ್ರ್ಯಾಂಡ್ ಫಿನಾಲೆಗೆ ತಲುಪಿದ್ದರು. ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಬಿ.ಶಶಾಂಕ್ ಶೆಣೈ ಪ್ರಥಮ ಸ್ಥಾನ ಪಡೆದು ₹1 ಲಕ್ಷ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. ಅದೇ ಕಾಲೇಜಿನ ತನ್ಮಯ್ ಉಮೇಶ್ ದ್ವಿತೀಯ ಸ್ಥಾನ ಹಾಗೂ ಆದಿತ್ಯ ಎಸ್. ರಾವ್ ತೃತೀಯ ಸ್ಥಾನ ಪಡೆದು ಕ್ರಮವಾಗಿ ₹50,000 ಹಾಗೂ ₹25,000 ನಗದು ಬಹುಮಾನಗಳೊಂದಿಗೆ ಟ್ರೋಫಿ, ಪ್ರಮಾಣಪತ್ರ ಮತ್ತು ಗೌರವ ಪ್ರಶಸ್ತಿಗಳನ್ನು ಪಡೆದರು.
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಕ್ರೆಡಲ್ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ. ರಾಜೇಗೌಡ ಅವರು, “ಇಂದಿನ ಜಗತ್ತಿನಲ್ಲಿ ಅಭಿವೃದ್ಧಿಯ ಪ್ರಮುಖ ಚಾಲಕಶಕ್ತಿಯೇ ಇಂಧನ. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳೇ ನಾಳಿನ ಇಂಧನ ಕ್ಷೇತ್ರದ ನಾಯಕರಾಗಿ ಹೊರಹೊಮ್ಮುವ ಭರವಸೆ ಇದೆ. ಯುವಜನರು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಂಡು ನವೀಕರಿಸಬಹುದಾದ ಇಂಧನ ವಲಯ ಹಾಗೂ ಇಂಧನ ಭದ್ರತೆಗೆ ಕೊಡುಗೆ ನೀಡುವಂತಾಗಬೇಕು” ಎಂದು ಕರೆ ನೀಡಿದರು.
“ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ)ಯ ಪ್ರಮುಖ ಕಾರ್ಯಕ್ರಮಗಳು, ಇಂಧನ ಸಂರಕ್ಷಣಾ ಕಾಯ್ದೆ, ಬಿಇಇ ಸ್ಟಾರ್ ಲೇಬಲ್ ಹೊಂದಿರುವ ವಿದ್ಯುತ್ ಉಪಕರಣಗಳು ಹಾಗೂ ಬಿಇಇ ಸ್ಟ್ಯಾಂಡರ್ಡ್ಸ್- ಲೇಬಲಿಂಗ್ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಿಕೊಳ್ಳುಲು ವೇದಿಕೆಯನ್ನು ಒದಗಿಸುವುದು ಈ ಸ್ಪರ್ಧೆಯ ಉದ್ದೇಶ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿಆರ್‌ಜೆ, “ಯುವಜನರಲ್ಲಿ ಇಂಧನ ದಕ್ಷತೆ, ಇಂಧನ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಅರಿವು ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಾಯಕತ್ವ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಮಾರ್ಗದರ್ಶನದಲ್ಲಿ ಯುವ ಮನಸ್ಸುಗಳಲ್ಲಿ ಅರಿವು ಮೂಡಿಸಿ, ಅವರನ್ನು ಜವಾಬ್ದಾರಿಯುತ ಇಂಧನ ರಾಯಭಾರಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
“ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಆದರೆ, ಒಬ್ಬ ನಿಜವಾದ ಇಂಜಿನಿಯರ್ ಆಗಲು ಪದವಿ ಮಾತ್ರ ಸಾಲದು. ಶಿಕ್ಷಣ ಸಂಸ್ಥೆಗಳು ಜ್ಞಾನ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ನೀಡಿದರೆ, ಸಮಾಜವು ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ಎರಡರ ನಡುವೆ ಇರುವ ಅಂತರವನ್ನು ತುಂಬುವುದು ದೊಡ್ಡ ಜವಾಬ್ದಾರಿ. ಇಂತಹ ಕಾರ್ಯಕ್ರಮಗಳ ಮೂಲಕ ನಾವು ಈ ಅಂತರವನ್ನು ಕಡಿಮೆ ಮಾಡಿ ನುರಿತ ಎಂಜಿನಿಯರ್‌ಗಳನ್ನು ರೂಪಿಸಲು ಕ್ರೆಡಲ್ ಬದ್ಧ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ರೆಡಲ್‌ನ ಹಣಕಾಸು ಮತ್ತು ಆಡಳಿತ ವಿಭಾಗದ ಮಹಾಪ್ರಬಂಧಕಿ ರೂಪಶ್ರೀ, ತಾಂತ್ರಿಕ ವಿಭಾಗದ ಮಹಾಪ್ರಬಂಧಕ ದಿವಾಕರ್, ಕೆಎಸ್‌ಪಿಡಿಸಿಎಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರನಾಥ್ ಹಾಗೂ ಕ್ರೆಡಲ್ ತಾಂತ್ರಿಕ ಸಲಹೆಗಾರರಾದ ಜಗದೀಶ್ ಬೆಳಗಲಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಇಂಧನ ರಸಪ್ರಶ್ನೆ ಸ್ಪರ್ಧೆ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ ಹಾಗೂ ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನವೋದ್ಯಮ ಪ್ರತಿಷ್ಠಾನದ ಸಹಯೋಗದಲ್ಲಿ ಕ್ರೆಡಲ್, ರಾಜ್ಯದ ವಿವಿಧ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಹಾಗೂ ಪ್ರಾಥಮಿಕ ಹಂತದ ಸ್ಪರ್ಧೆಗಳನ್ನು ನಡೆಸಿತ್ತು. ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳು ರಾಜ್ಯ ಮಟ್ಟದ ಗ್ರ್ಯಾಂಡ್ ಫಿನಾಲೆಗೆ ಅರ್ಹತೆ ಪಡೆದವು.
ಸ್ಪರ್ಧೆಯಲ್ಲಿ ಒಟ್ಟು 20 ವಿದ್ಯಾರ್ಥಿಗಳು ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ್ದು, ಅವರಲ್ಲಿ 10 ಮಂದಿ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾದರು. ಪ್ರಥಮ ಬಹುಮಾನವಾಗಿ 1,00,000 ರೂ. ದ್ವಿತೀಯ ಬಹುಮಾನವಾಗಿ 50,000ರೂ. ಹಾಗೂ ತೃತೀಯ ಬಹುಮಾನವಾಗಿ 25,000 ರೂ. ನಗದು ಬಹುಮಾನದ ಜತೆಗೆ ಟ್ರೋಫಿ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
