ಸಮಗ್ರ ಸುದ್ದಿ

ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ|ಮೈಸೂರಿನಲ್ಲಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಸ್ಮಾರಕ ನಿರ್ಮಾಣ – ಮುಖ್ಯಮಂತ್ರಿ ಸಿದ್ದರಾಮಯ್ಯ

Share

ಬೆಳಗಾವಿ, ಸುವರ್ಣ ವಿಧಾನಸೌಧ: ಸರ್ಕಾರದಿಂದ ಶತಾಯುಷಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ ಹಾಗೂ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಸ್ಮಾರಕ ನಿರ್ಮಾಣ ಮೈಸೂರಿನಲ್ಲಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದು ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಇತ್ತೀಚೆಗೆ ನಿಧನರಾದ ವಿಧಾನ ಸಭೆಯ ಹಾಲಿ ಸದಸ್ಯ ಹೆಚ್.ವೈ.ಮೇಟಿ, (ಹುಲ್ಲಪ್ಪ ಯಮನಪ್ಪ ಮೇಟಿ) ಮಾಜಿ ಸದಸ್ಯ ಆರ್.ವಿ.ದೇವರಾಜ್, ಶಿವಶರಣಪ್ಪಗೌಡ ಪಾಟೀಲ್, ವೃಕ್ಷಮಾತೆ ಸಾಲಮರದ ತಿಮ್ಮಕ್ಕ ಹಾಗೂ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಎಂ.ಎಸ್.ಉಮೇಶ್ ಅವರಿಗೆ ಸಭಾಧ್ಯಕ್ಷ ಯು.ಟಿ.ಖಾಧರ್ ಸಂತಾಪ ಸೂಚಿಸಿ ನಿರ್ಣಯ ಮಂಡಿಸಿದರು. ನಿರ್ಣಯ ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ರಾಜ್ಯ ಸರ್ಕಾರ ಸಾಲುಮರದ ತಿಮ್ಮಕ್ಕನವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನ ಮಾನ ನೀಡಿ ಪರಿಸರ ರಾಯಭಾರಿಯಾಗಿ ನೇಮಿಸಿತ್ತು. 114 ವರ್ಷ ಜೀವಿಸಿದ್ದ ಸಾಲುಮರದ ತಿಮ್ಮಕ್ಕ ಮರಗಿಡಗಳನ್ನೇ ತಮ್ಮ ಮಕ್ಕಳು ಎಂದು ಭಾವಿಸಿದ್ದರು. ಸುಮಾರು 4000 ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಅವರ ಕೊನೆಗಾಲದಲ್ಲಿ ನಾನು ಭೇಟಿಯಾದ ಸಂದರ್ಭದಲ್ಲಿ ಬೇಲೂರು ಗ್ರಾಮದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವಂತೆ ಪತ್ರ ನೀಡಿದ್ದರು. ಸರ್ಕಾರ ತಿಮ್ಮಕ್ಕನವರ ಕೋರಿಕೆ ಈಡೇರಿಸಲು ಪ್ರಯತ್ನಿಸಲಿದೆ.

ತಿಮ್ಮಕ್ಕನವರ ಪರಿಸರ ಸೇವೆ ಗುರುತಿಸಿದ ಕೇಂದ್ರ ಸರ್ಕಾರ ಪ್ರದ್ಮಶ್ರೀ ಪ್ರಶಸ್ತಿ ನೀಡಿದೆ. ಇದರೊಂದಿಗೆ ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ, ವೀರಚಕ್ರ, ಕರ್ನಾಟಕ ಕಲ್ಪವಲ್ಲಿ, ರಾಜ್ಯೋತ್ಸವ, ನಾಡೋಜ ಪ್ರಶಸ್ತಿಗಳಿಗೂ ತಿಮ್ಮಕ್ಕ ಭಾಜನರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಎಸ್.ಎಲ್.ಭೈರಪ್ಪ ಸ್ಮಾರಕ:

ದೇಶಕಂಡಂತಹ ಶ್ರೇಷ್ಠ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪನವರದು ಸರಳ ವ್ಯಕ್ತಿತ್ವ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಹಳ್ಳಿಯಲ್ಲಿ ಜನಸಿದ್ದರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪರ್ವ, ವಂಶವೃಕ್ಷ, ತಬ್ಬಲಿ ನೀನಾದೆ ಮಗನೆ, ಮತದಾನ, ಯಾನ, ಉತ್ತರಕಾಂಡ, ನಾಯಿ ನೆರಳು ಸೇರಿದಂತೆ 25 ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಪರ್ವ ಕಾದಂಬರಿ ತುಂಬಾ ಜನಪ್ರಿಯತೆ ಪಡೆದುಕೊಂಡಿದೆ.

1999ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿದ್ದರು. ಎಸ್.ಎಲ್.ಭೈರಪ್ಪನವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ ಸಹ ಅವರ ಸಾಹಿತ್ಯಿಕ ಕೊಡುಗೆಗಳನ್ನು ವೈಯಕ್ತಿಕವಾಗಿ ಗೌರವದಿಂದ ಕಾಣುತ್ತಿದ್ದೆ. ಕೆಲವು ಕಾದಂಬರಿಗಳನ್ನು ಸಹ ಓದಿದ್ದೇನೆ. ಸರ್ಕಾರದ ವತಿಯಿಂದ ಮೈಸೂರಿನಲ್ಲಿ ಎಸ್.ಎಲ್.ಭೈರಪ್ಪನವರ ಸ್ಮಾರಕ ನಿರ್ಮಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಮನೆಯಲ್ಲಿ ಎಸ್.ಎಲ್.ಭೈರಪ್ಪ ತಮ್ಮ ಕೊನೆಯ ದಿನಗಳನ್ನು ಕಳೆದರು. ವಿಶ್ವವಾಣಿ ಪತ್ರಿಕೆ ವತಿಯಿಂದ ಆಯೋಜಿಸಿದ್ದ ಪ್ರವಾಸಿ ಪ್ರಪಂಚ ಕಾರ್ಯಕ್ರಮದಲ್ಲಿ ಭೈರಪ್ಪನವರನ್ನು ಭೇಟಿಯಾಗಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

ಹೆಚ್.ವೈ.ಮೇಟಿ ಅವರದು ಜ್ಯಾತ್ಯತೀತ ವ್ಯಕ್ತಿತ್ವ:
ಹೆಚ್.ವೈ.ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ) ಅವರ ಜ್ಯಾತ್ಯತೀತ ವ್ಯಕ್ತಿತ್ವವಾಗಿತ್ತು, ಎಲ್ಲಾ ಜಾತಿ ಜನಾಂಗದ ಜನರ ಪ್ರೀತಿ ಅಭಿಮಾನವನ್ನು ಗಳಿಸಿದ್ದರು. 1983 ರಿಂದ ನನಗೆ ಮೇಟಿ ಅವರ ಒಡನಾಟವಿದ್ದು, ನನ್ನ ನಿಷ್ಠಾವಂತ ಅನುಯಾಯಿಯಾಗಿದ್ದರು. ಹೆಚ್.ವೈ.ಮೇಟಿ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ 1946ರಂದು ಜನಿಸಿದ್ದರು.

ವೃತ್ತಿಯಲ್ಲಿ ಕೃಷಿಕರಾಗಿದ್ದ ಇವರು, ಬಿಲ್‍ಕೆರೂರು ಮಂಡಳ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು., ಬಾಗಲಕೋಟೆ ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಮಿತಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮತ್ತು ಎಂ.ಎಸ್.ಐ.ಎಲ್ ನ ಅಧ್ಯಕ್ಷರಾಗಿ ಡಿ.ಸಿ.ಸಿ ಬ್ಯಾಂಕ್ ಹಾಗೂ ಎ.ಪಿ.ಎಂ.ಸಿ.ಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ ಮೊದಲಬಾರಿಗೆ ವಿಧಾನಭೆಗೆ ಆಯ್ಕೆಯಾಗಿದ್ದರು. ನಂತರ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಅರಣ್ಯ ಸಚಿವರಾಗಿ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಹೆಚ್.ವೈ.ಮೇಟಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷ ಏನೇ ಹೇಳಿದರೂ ವಿರುದ್ಧವಾಗಿ ಮಾತನಾಡದೇ ಪಕ್ಷದ ತೀರ್ಮಾನವನ್ನು ಒಪ್ಪಿಕೊಳ್ಳುತ್ತಿದ್ದರು. ಮಂತ್ರಿಗಳಾಗಿದ್ದರೂ ಸಹ 1996ರಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು ಎಂದು ಮುಖ್ಯಮಂತ್ರಿ ಮೇಟಿ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲಕು ಹಾಕಿದರು.

ವಿಧಾನಸಭೆಯ ಮಾಜಿ ಸದಸ್ಯ ಆರ್.ವಿ.ದೇವರಾಜ್ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ಹಠಾತ್ ಆಗಿ ನಿಧನರಾಗಿದ್ದು ತುಂಬಾ ಖೇದಕರ ಸಂಗತಿಯಾಗಿದೆ. 3 ಬಾರಿ ಶಾಸಕರಾಗಿದ್ದ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. 11ನೇ ವಿಧಾನಸಭೆ ಸದಸ್ಯರಾಗಿದ್ದ ಯಲಬುರ್ಗಾದ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲರ ನಿಧನ ಹಾಗೂ ಖ್ಯಾತ ಹಾಸ್ಯನಟ ಎಂ.ಎಸ್.ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಗಲಿದ ಗಣ್ಯರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ, ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.

ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹೆಚ್.ವೈ.ಮೇಟಿ ಸಜ್ಜನ ರಾಜಕಾರಣಿಯಾಗಿದ್ದರು. ಕೆಳಮಟ್ಟದಿಂದ ರಾಜಕಾರಣ ಆರಂಭಿಸಿದ ಅವರು ಪ್ರಸ್ತುತ ವಿಧಾನಸಭೆ ಸದಸ್ಯರಾಗಿದ್ದರು. ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭೆ ಸದಸ್ಯಗಿದ್ದ ಆರ್.ವಿ.ದೇವರಾಜ್ ಅವರೊಂದಿಗೆ ನನ್ನ ವೈಯಕ್ತಿಕ ಒಡನಾಟವಿತ್ತು. ಹುಟ್ಟುಹಬ್ಬದ ದಿನದಂದೇ ಅವರ ಅಂತ್ಯಕ್ರಿಯೆ ನಡೆದಿದ್ದು ದುರ್ದೈವದ ಸಂಗತಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಖೇದ ವ್ಯಕ್ತಪಡಿಸಿದರು. ಇದೇ ವೇಳೆ ಮಾಜಿ ಶಾಸಕ ಶಿವರಣಪ್ಪಗೌಡ ಪಾಟೀಲ್ ನಿಧನಕ್ಕೂ ಸಂತಾಪ ವ್ಯಕ್ತಪಡಿಸಿದರು.

ರಾಜಕಾರಣಿಗಳಿಗಿಂತಲೂ ಸಾಲುಮರದ ತಿಮ್ಮಕ್ಕ ನಾಡಿನಲ್ಲಿ ಚಿರಪರಿತರಾಗಿದ್ದರು. ರಾಜ್ಯದಲ್ಲಿ ತಿಮ್ಮಕ್ಕ ಗೊತ್ತಿರದ ವ್ಯಕ್ತಿಗಳೇ ಇಲ್ಲ. ತಿಮ್ಮಕ್ಕ ಬೆಳಿಸಿದ ಮರಗಳು ಅವರ ನೆನಪನ್ನು ನಮ್ಮ ನಡುವೆ ಸಾದಾ ಹಚ್ಚಹಸಿರಾಗಿಸಿವೆ. ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ. ಸರ್ಕಾರ ತಿಮ್ಮಕ್ಕನವರ ಆಶಯದಂತೆ ಸರ್ಕಾರ ವಸ್ತು ಸಂಗ್ರಹಾಲಯ ನಿರ್ಮಿಸುವ ವಿಶ್ವಾಸವಿದೆ.

ಸಾಹಿತಿ ಎಸ್.ಎಲ್.ಭೈರಪ್ಪನವರದು ನೇರ ಹಾಗೂ ನಿಷ್ಠುರ ವ್ಯಕ್ತಿತ್ವವಾಗಿತ್ತು. ಅವರ ಕೃತಿಗಳು ವಿಮರ್ಶಾತ್ಮಕ ರೀತಿಯಲ್ಲಿ ಓದಿ ಅರ್ಥೈಸಿಕೊಳ್ಳಬೇಕು. ಸಾಹಿತ್ಯ ಕ್ಷೇತ್ರ ಮಹೋನ್ನತ ಪ್ರಶಸ್ತಿ ‘ಸರಸ್ವತಿ ಸಮ್ಮಾನ್’ ಎಸ್.ಎಲ್.ಭೈರಪ್ಪನವರು ಭಾಜರಾಗಿದ್ದು ನಾಡಿಗೆ ಗೌರವದ ಸಂಗತಿಯಾಗಿದೆ. ಹಾಸ್ಯ ಕಲಾವಿದ ಎಂ.ಎಸ್.ಉಮೇಶ್ ಅವರು ಅಭಿನಯದ ಮೂಲಕ ತಮ್ಮ ಜೀವನದ ಕಷ್ಟಗಳನ್ನು ಮೆರೆತು ಜನರನ್ನು ನಕ್ಕುನಗಿಸಿದರು. ಸರ್ಕಾರ ನಮ್ಮನ್ನು ಅಗಲಿದ ಎಲ್ಲಾ ಧೀಮಂತ ನಾಯಕರ ಹೆಸರುಗಳು ಸದಾಕಾಲ ಉಳಿಯುವಂತಹ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೋರಿದರು.

ಗೃಹ ಸಚಿವ ಪರಮೇಶ್ವರ್ ಸಂತಾಪ ಸೂಚನೆಯನ್ನು ಬೆಂಬಲಿಸಿ ಮಾತನಾಡಿ, ಹೆಚ್.ವೈ. ಮೇಟಿ ಅವರು ಆತ್ಮೀಯ ಸ್ನೇಹಿತರಾಗಿದ್ದರು. ಸಾಲುಮರದ ತಿಮ್ಮಕ್ಕನವರು ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಕೈಗೊಂಡಿದ್ದ ಅವರು 4000 ಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಸಾಲು ಮರದ ತಿಮ್ಮಕ್ಕ ಎಂದೇ ಹೆಸರುವಾಸಿಯಾಗಿದ್ದರು.

ಜಾಗತಿಕ ತಾಪಮಾನ ಹೆಚ್ಚಳದ ಸಮಸ್ಯೆ ಇಡೀ ವಿಶ್ವವನ್ನೇ ಕಾಡುತ್ತಿದ್ದು, ಪರಿಸರ ಹಾಳಾಗುತ್ತಿದೆ. ಗಿಡಮರಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎನ್ನುವ ಸಂದೇಶವನ್ನು ತಿಮ್ಮಕ್ಕ ಅವರು ನಮಗೆಲ್ಲ ನೀಡಿದ್ದಾರೆ.

ಪರಿಸರದ ಬಗೆಗಿನ ಇವರ ಅತೀವ ಕಾಳಜಿಯನ್ನು ಪರಿಗಣಿಸಿದ್ದ ರಾಜ್ಯ ಸರ್ಕಾರವು ಇವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಪರಿಸರ ರಾಯಭಾರಿಯನ್ನಾಗಿ ನೇಮಿಸಿತ್ತು. ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿದಲ್ಲಿ, ಇವರ ಹೆಸರನ್ನು ಜನತೆ ಶಾಶ್ವತವಾಗಿ ಸ್ಮರಿಸುವಂತಾಗಲಿದೆ ಎಂದು ತಿಳಿಸಿ ಸಂತಾಪ ಸೂಚನೆಗೆ ಬೆಂಬಲ ವ್ಯಕ್ತಪಡಿಸಿದರು.

ಎಸ್.ಎಲ್.ಭೈರಪ್ಪ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕವನ್ನು ಪಡೆದಿದ್ದರು. ಅವರು ಸಮಗ್ರ ಅಧ್ಯಯನ ಮಾಡಿ ವಿಮರ್ಶಿಸಿ ತಮ್ಮದೇ ಆದ ವಿಶಿಷ್ಟ ಧಾಟಿಯಲ್ಲಿ ಸಮಾಜಮುಖಿ ಕಾದಂಬರಿಗಳನ್ನು ರಚಿಸುತ್ತಿದ್ದರು. ಕೆಲವೊಮ್ಮೆ ಅವರ ವಿಮರ್ಶೆಗಳು ಸೈದ್ಧಾಂತಿಕವಾಗಿ ಭಿನ್ನವಾಗಿದ್ದರೂ, ಸಮಾಜಮುಖಿ ಚರ್ಚೆಗಳು ಬರುವಾಗ ಈ ರೀತಿಯ ವಿವಾದಗಳು ಬರುವುದು ಸಹಜ. ಅವರ ಎಲ್ಲಾ ಕಾದಂಬರಿಗಳು ಸಾಮಾಜಿಕ ರಚನೆ, ಮೌಲ್ಯಗಳನ್ನು ಬಹಳ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ ಎಂದು ತಿಳಿಸಿದ ಪರಮೇಶ್ವರ್ ಅವರು, ಕೊಪ್ಪಳ ಜಿಲ್ಲೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶಿವಶರಣಪ್ಪ ಗೌಡ ಪಾಟೀಲ್, ಹಾಸ್ಯ ಕಲಾವಿದ ಎಂ.ಎಸ್. ಉಮೇಶ್ ಅವರ ನಿಧನಕ್ಕೂ ಸಂತಾಪ ಸೂಚಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಹೆಚ್.ವೈ. ಮೇಟಿ ಅವರು ಬಡವರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು, ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು ಎಂದು ಸ್ಮರಿಸಿದರು.

ಸಾಲು ಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ರಾಜ್ಯದ ಎಲ್ಲೆಡೆ ಉದ್ಯಾನವನ್ನು ನಿರ್ಮಿಸುವ ಮೂಲಕ ಅರಣ್ಯ ಇಲಾಖೆ ಶ್ಲಾಘನೀಯ ಕಾರ್ಯ ಮಾಡಿದೆ. ತಿಮ್ಮಕ್ಕ ಅವರ ಪುತ್ಥಳಿ ಸ್ಥಾಪಿಸುವುದು ಅಥವಾ ರಸ್ತೆಗೆ ಅವರ ಹೆಸರನ್ನಿಡುವುದು ಇಂತಹ ಕ್ರಮಗಳಿಗಿಂತಲೂ, ಉದ್ಯಾನವನಗಳನ್ನು ನಿರ್ಮಿಸಿ, ಅವುಗಳಿಗೆ ತಿಮ್ಮಕ್ಕನವರ ಹೆಸರು ಇಟ್ಟಿರುವುದು ಸಾರ್ಥಕವೆನಿಸಿದೆ. ಇವರ ಶ್ರಮ, ಪರಿಸರ ಪ್ರೇಮ, ಗಿಡಮರಗಳ ಮೇಲಿನ ಅವರ ಕಾಳಜಿ ಯುವಜನತೆಗೆ ಪ್ರೇರಣೆಯಾಗಬೇಕು.

ಈ ನಿಟ್ಟಿನಲ್ಲಿ ಸಾಲುಮರದ ತಿಮ್ಮಕ್ಕನವರ ಕುರಿತ ಸಾಧನೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಎಸ್.ಎಲ್. ಭೈರಪ್ಪ ಅವರ ಕುರಿತು ಮಾತನಾಡಿದ ಅವರು, ಅವರ ಕೆಲವು ಸಿದ್ಧಾಂತಗಳು, ಹೇಳಿಕೆಗಳು ವಿವಾದವನ್ನು ಉಂಟುಮಾಡಿದ್ದರೂ, ಅವರ ಸಾಹಿತ್ಯಕ್ಕೆ ಇಡೀ ದೇಶ ಮೆಚ್ಚುತ್ತದೆ ಎಂದರು.

ವಿಧಾನಸಭೆ ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನೆಯನ್ನು ಬೆಂಬಲಿಸಿ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಸಿ.ಎಮ್. ನರೇದ್ರಸ್ವಾಮಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರುಗಳಾದ ಸಿದ್ದು ಸವದಿ, ಎಂ.ಟಿ. ಕೃಷ್ಣಪ್ಪ, ಅಪ್ಪಾಜಿ ನಾಡಗೌಡ, ಹೆಚ್.ಸಿ. ಬಾಲಕೃಷ್ಣ, ಸುರೇಶ್, ಶ್ರೀನಿವಾಸಯ್ಯ ಎನ್., ಸಿ.ಕೆ. ರಾಮಮೂರ್ತಿ, ಮಹೇಶ್ ಟೆಂಗಿನಕಾಯಿ, ಡಾ. ರೂಪಕಲಾ ಸೇರಿದಂತೆ ವಿವಿಧ ಶಾಸಕರು ಸಂತಾಪ ಸೂಚನೆಯ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ, ಮಾತನಾಡಿದರು. ಮೃತ ಗಣ್ಯರ ಗೌರವಾರ್ಥ ವಿಧಾನಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ, ಗೌರವ ಸಲ್ಲಿಸಲಾಯಿತು.

ವಿಧಾನಸಭೆ ಕಲಾಪವನ್ನು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಗಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಘೋಷಿಸಿದರು.


Share

You cannot copy content of this page