ಸಮಗ್ರ ಸುದ್ದಿ

ಕೃಷ್ಣ ಮೃಗಗಳ ಸಾವಿಗೆ ಸಾಂಕ್ರಮಿಕ ರೋಗ ಕಾರಣ: ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ

Share

ಬೆಳಗಾವಿ, ಸುವರ್ಣಸೌಧ: ಬೆಳಗಾವಿಯ ಭೂತರಾಮನ ಹಟ್ಟಿಯಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 30 ಕೃಷ್ಣ ಮೃಗಗಳು ಮೃತಪಡಲು ಸಾಂಕ್ರಾಮಿಕ ರೋಗವೇ ಕಾರಣ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ, ಸದಸ್ಯ ತಳವಾರ್ ಸಾಬಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ, ಕೃಷ್ಣ ಮೃಗಗಳು ‘ಹೆಮರಾಜಿಕ್ ಸೆಫ್ಟಿಸೆಮಿಯಾ’ ಎಂಬ ಸಾಂಕ್ರಾಮಿಕ ರೋಗದಿಂದ ಮರಣ ಹೊಂದಿರುವುದು ಪ್ರಯೋಗಾಲಯದ ದೃಢಪಟ್ಟಿರುವುದರಿಂದ, ಮೇಲ್ನೋಟಕ್ಕೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಿರುವುದಿಲ್ಲ ಎಂದರು.

ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳು ಮೃತಪಟ್ಟ ಪ್ರಕರಣದಲ್ಲಿ, ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯ ಜೈವಿಕ ಸಂಸ್ಥೆ, ತಂಡವು ಹೆಬ್ಬಾಳ, ಬೆಂಗಳೂರು ಇಲ್ಲಿಂದ ನುರಿತ ಪಶುವೈದ್ಯಾಧಿಕಾರಿ ಹಾಗೂ ತಜ್ಞರ ಮೃಗಾಲಯಕ್ಕೆ ಭೇಟಿ ನೀಡಿ ಮೃತ ಪ್ರಾಣಿಗಳನ್ನು ಪರಿಶೀಲಿಸಿದ್ದು, ಸಾವಿನ ಕಾರಣ ಪತ್ತೆ ಹಚ್ಚಲು ಮೃತಪಟ್ಟ ಪ್ರಾಣಿಗಳ ಮಾದರಿಯನ್ನು (Blood samples and organs) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮೃಗಾಲಯದಲ್ಲಿರುವ ಬೇರೆ ಪ್ರಾಣಿಗಳಿಗೆ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಒಟ್ಟು 38 ಕೃಷ್ಣಮೃಗಗಳಲ್ಲಿ 31 ಪ್ರಾಣಿಗಳು ಮೃತಪಟ್ಟಿದ್ದವು, ಉಳಿದ 7 ಕೃಷ್ಣಮೃಗಗಳನ್ನು ಎಲ್ಲಾ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಸಂರಕ್ಷಿಸಲಾಗಿದೆ ಎಂದು ತಿಳಿಸಿದರು.

ಮೃಗಾಲಯದಲ್ಲಿ ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ / ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿರುವ ಎಲ್ಲಾ ಮೃಗಾಲಯಗಳ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.


Share

You cannot copy content of this page