ರಾಜಕೀಯ

ಅಧಿವೇಶನದಲ್ಲಿ ರೈತರ ಸಮಸ್ಯೆ, ಬೆಂಬಲ ಬೆಲೆ, ಬಾಕಿ ಹಣ ಬಿಡುಗಡೆ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಬಗ್ಗೆ ಚರ್ಚೆ: ಡಿಸಿಎಂ ಡಿ.ಕೆ. ಶಿವಕುಮಾರ್

Share

ಬೆಳಗಾವಿ : ರೈತರ ಸಮಸ್ಯೆ, ಬೆಂಬಲ ಬೆಲೆ, ಬಾಕಿ ಹಣ ಬಿಡುಗಡೆ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ಆಡಳಿತ ಪಕ್ಷ, ವಿರೋಧ ಪಕ್ಷ ಸೇರಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ವಿಶ್ವಾಸವಿದೆ. ರೈತರ ಸಮಸ್ಯೆ ವಿಚಾರದಲ್ಲಿ ಕೇಂದ್ರ ಯಾಕೆ ಭಾಗಿಯಾಗುತ್ತಿಲ್ಲ. ಪ್ರೋತ್ಸಾಹ ನೀಡುತ್ತಿಲ್ಲ. ಬೆಂಬಲ ಬೆಲೆ ಹಣ ಯಾಕೆ ಬಿಡುಗಡೆ ಮಾಡುತ್ತಿಲ್ಲ? ಬೆಳೆಗಳನ್ನು ಕೇಂದ್ರ ಸರ್ಕಾರ ಯಾಕೆ ಖರೀದಿ ಮಾಡುತ್ತಿಲ್ಲ. ಸಕ್ಕರೆ ಬೆಲೆ ಸೇರಿದಂತೆ ಅನೇಕ ವಿಚಾರವಾಗಿ ಚರ್ಚೆ ಮಾಡಬೇಕು. ಈ ಎಲ್ಲಾ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ತಿಳಿಸಿದರು.

ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಏನೆಲ್ಲಾ ಕೆಲಸ ಆಗಬೇಕು, ಕೇಂದ್ರ ಸರ್ಕಾರದಿಂದ ಬರಬೇಕಾದ ಬಾಕಿ ಹಣ ಬಿಡುಗಡೆಗೆ ಒತ್ತಡ ಹಾಕಬೇಕು. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ರೈತರ ಜೊತೆಗೂಡಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಬಗ್ಗೆ ಕೇಳಿದಾಗ, ಕಬ್ಬು, ಮೆಕ್ಕೆಜೋಳ ವಿಚಾರದಲ್ಲಿ ರೈತರ ಪರವಾಗಿ ನಾವು ತೆಗೆದುಕೊಂಡಿರುವ ದಿಟ್ಟ ತೀರ್ಮಾನವನ್ನು ಬಿಜೆಪಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಎಂದಾದರೂ ತೆಗೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

ಮೆಕ್ಕೆಜೋಳ ಖರೀದಿಗೆ ತೀರ್ಮಾನ ಮಾಡಿದ್ದೇವೆ. ಕಬ್ಬಿನ ವಿಚಾರದಲ್ಲಿ ರೈತರ ಪರವಾಗಿ ನಿಂತಿದ್ದೇವೆ. ಸಕ್ಕರೆ ಕಾರ್ಖಾನೆಯವರು ನಮಗೆ ನಷ್ಟವಾಗುತ್ತದೆ, ಕಾರ್ಖಾನೆ ಬಂದ್ ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಈ ಬೆಳೆಗಳಿಗೆ ದರ ನಿಗದಿ ಮಾಡುವವರು ಕೇಂದ್ರ ಸರ್ಕಾರದವರು.

ಕಳೆದ 10 ವರ್ಷಗಳಿಂದ ಕೇಂದ್ರ ಸಕ್ಕರೆ ಬೆಲೆ ಹೆಚ್ಚಳ ಮಾಡಿಲ್ಲ. ಆದರೂ ಕೇಂದ್ರ ಸರ್ಕಾರ ಯಾಕೆ ಸಹಾಯ ಮಾಡುತ್ತಿಲ್ಲ. ನಿಮಗೆ ನಷ್ಟವಾದರೂ ರೈತರು ಬದುಕಬೇಕು ಎಂದು ನಾವು ಒತ್ತಾಯ ಮಾಡುತ್ತಿದ್ದೇವೆ. ಈ ಹೋರಾಟ ಮಾಡಬೇಕಿರುವುದು ಕೇಂದ್ರ ಸರ್ಕಾರದ ವಿರುದ್ಧ. ಬಿಜೆಪಿ ಅವರಿಗೆ ಮಾತನಾಡಲು ಬೇರೆ ವಿಚಾರ ಇಲ್ಲ. ಹೀಗಾಗಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.


Share

You cannot copy content of this page