ಸಮಗ್ರ ಸುದ್ದಿ

ಕೂಡ್ಲಿಗಿ ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಿಸಲು ಕ್ರಮ- ಡಿಸಿಎಂ ಡಾ.ಜಿ.ಪರಮೇಶ್ವರ್

Share

ಬೆಂಗಳೂರು:ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಸದರಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.‌ಪರಮೇಶ್ವರ ಅವರು ತಿಳಿಸಿದರು.

ಇಂದು ವಿಧಾನಸಭೆಯಲ್ಲಿ ಪ್ರಶ್ನೊತ್ತರ ವೇಳೆಯಲ್ಲಿ ‘ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ’ ಕುರಿತು ಸದಸ್ಯರಾದ ಎನ್.ಟಿ. ಶ್ರೀನಿವಾಸ್‌ ಅವರ ಪ್ರಶ್ನೆಗೆ ಉಪ ಮುಖ್ಯಮಂತ್ರಿಗಳು ಉತ್ತರಿಸಿದರು.

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ರೂಪಿಸಿರುವ ‘ಬರ ನಿರ್ವಹಣಾ ಕೈಪಿಡಿ 2020’ ರಲ್ಲಿ (Manual for Drought Management 2020) ನೀಡಿರುವ ಮಾರ್ಗಸೂಚಿಗಳಂತೆ ಬರ ಮೌಲ್ಯಮಾಪನ ಮತ್ತು ಘೋಷಣೆಗೆ ವಸ್ತುನಿಷ್ಠ, ಪಾರದರ್ಶಕ ಮತ್ತು ಸಾಕ್ಷ್ಯ ಆಧಾರಿತ ವಿಧಾನವನ್ನು ಅನುಸರಿಸಿ ಕಡ್ಡಾಯ ಸೂಚಕಗಳಾದ ಮಳೆ ಕೊರತೆ ಅಥವಾ ಒಣಹವೆ, ಬಿತ್ತನೆ ಪ್ರಗತಿ, ಉಪಗ್ರಹ ಆಧಾರಿತ ರಿಮೋಟ್ ಸೆನ್ಸಿಂಗ್-ಆಧಾರಿತ ಸಸ್ಯವರ್ಗದ ಸೂಚ್ಯಂಕಗಳು, ಮಣ್ಣಿನ ತೇವಾಂಶ ಸೂಚ್ಯಂಕಗಳು ಮತ್ತು ಜಲವಿಜ್ಞಾನದ ಸೂಚಕಗಳ ಅಧ್ಯಯನ ನಡೆಸಿ ಮೊಬೈಲ್ ಆ್ಯಪ್ ಬಳಸಿ ಸ್ಥಳ ಪರಿಶೀಲನೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ನಿಯಮಾನುಸಾರ ಬರಪೀಡಿತ ತಾಲೂಕೆಂದು ಘೋಷಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ತೀವ್ರ ಮಳೆ ಅಭಾವದಿಂದಾಗಿ ರೈತಾಪಿ ವರ್ಗದ ಹಾಗೂ ಕೂಲಿ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ದೂರದ ನಗರಗಳಿಗೆ ಉದ್ಯೋಗ ಅರಸಿ ಗುಳೆ ಹೋಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಬರ ಪರಿಹಾರ ಸಾಮುದಾಯಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಕಾಮಗಾರಿಗಳು ಮುಖ್ಯವಾಗಿ ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ಮಣ್ಣಿನ ತೇವಾಂಶ ಹೆಚ್ಚಳದ ಮೇಲೆ ಗಮನಹರಿಸುತ್ತವೆ. ಇವುಗಳಲ್ಲಿ ಕೆರೆ ಮತ್ತು ತೂಬುಗಳ ಹೂಳೆತ್ತುವುದು, ಕೃಷಿ ಹೊಂಡಗಳ ನಿರ್ಮಾಣ, ಚೆಕ್ ಡ್ಯಾಂ, ನಾಲಾ ಬಂದ್, ಇಂಗು ಗುಂಡಿಗಳು, ಕುಡಿಯುವ ನೀರಿನ ಮೂಲಗಳ ಬಳಿ ಮರುಪೂರಣ ಗುಂಡಿಗಳು/ಶಾಫ್ಟ್‌ಗಳು, ಬಂಡ್ ನಿರ್ಮಾಣ, ಕಂಪಾರ್ಟ್‌ಮೆಂಟ್ ಬಂಡಿಂಗ್, ಎತ್ತರದ ಪ್ರದೇಶಗಳಲ್ಲಿ ಕಂಟೂರ್ ಟ್ರೆಂಚಿಂಗ್ ಮತ್ತು ಬರ ನಿರೋಧಕತೆಯನ್ನು ಸುಧಾರಿಸುವ ಇತರ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವುದರ ಮೂಲಕ ರೈತಾಪಿ ವರ್ಗದ ಹಾಗೂ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯನಗರ ಜಿಲ್ಲೆಯಲ್ಲಿ 2026, ಆಗಸ್ಟ್‌ 13ರ ವರೆಗೆ ಒಟ್ಟು 38,126 ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡಲಾಗಿದ್ದು, ಕೂಡ್ಲಿಗಿ ತಾಲ್ಲೂಕಿನಲ್ಲಿ 6,555 ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಪ್ರಸ್ತುತ ಕೂಡ್ಲಿಗಿ ತಾಲ್ಲೂಕಿನಲ್ಲಿ 29 ಕಾಮಗಾರಿಗಳು ನಡೆಯುತ್ತಿದ್ದು, 21,943 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ ಎಂದು ತಿಳಿಸಿದರು.


Share

You cannot copy content of this page