ಮೈಸೂರು: ಭಾರತ ಅತ್ಯಂತ ವೈವಿಧ್ಯಮಯ ದೇಶ. ಅದೇ ರೀತಿ ಬುಡಕಟ್ಟು ಸಮುದಾಯ ಮತ್ತು ಅವರ ಭಾಷೆ, ಸಂಸ್ಕೃತಿಯೂ ವಿಭಿನ್ನ ಮತ್ತು ಅಪರೂಪವಾದುದು. ಇದನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ನಮ್ಮ ಮುಂದಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಸಚಿವ ಟಿ. ರಘುಮೂರ್ತಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರದಿಂದ ಆರಂಭವಾದ ಮೂರು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಸಚಿವರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಬುಡಕಟ್ಟು ಭಾಷೆಗಳು ನಶಿಸಿದರೆ ಕೇವಲ ಭಾಷೆಯಷ್ಟೇ ಅಲ್ಲದೆ, ಸಮುದಾಯದ ಸಂಸ್ಕೃತಿ, ಪರಂಪರೆ ಹಾಗೂ ಪಾರಂಪರಿಕ ಜ್ಞಾನವೂ ನಷ್ಟವಾಗುತ್ತದೆ. ಹೀಗಾಗಿ ಬುಡಕಟ್ಟು ಭಾಷೆಗಳ ದಾಖಲಾತಿ, ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಬುಡಕಟ್ಟು ಭಾಷೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಸಂಶೋಧನಾ ಕಾರ್ಯಗಳು ಅಭಿನಂದನಾರ್ಹವಾಗಿವೆ ಎಂದು ರಘುಮೂರ್ತಿ ಹೇಳಿದರು.
ನಮ್ಮ ದೇಶದಲ್ಲಿ ವಿವಿಧ ಬುಡಕಟ್ಟುಸಮುದಾಯದವರು ಇದ್ದಾರೆ. ಇವರ ಭಾಷೆ, ಉಪ ಭಾಷೆ, ಸಂಸ್ಕೃತಿ ಆಚರಣೆಗಳು ಕೂಡ ವಿಭಿನ್ನವಾಗಿವೆ. ಬುಡಕಟ್ಟು ಭಾಷೆ ಎಂದರೆ ಕೇವಲ ಸಂವಹನ ಅಲ್ಲ, ಅದರಲ್ಲಿ ದಶಕಗಳಿಂದ ಪಾಲಿಸಿಕೊಂಡು ಬಂದಿರುವ ಸಾಂಪ್ರದಾಯಿಕತೆ, ಅರಣ್ಯ, ಮತ್ತು ಜೀವವೈವಿಧ್ಯತೆ ಅಡಗಿದೆ ಎಂದರು.
ಕೆಲವು ಬುಡಕಟ್ಟು ಸಮುದಾಯದ ಯುವಕರು ಈಗ ಮೂಲ ಭಾಷೆಯಿಂದ ದೂರ ಹೋಗುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಎಲ್ಲರೂ ಗಮನಹರಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.
ಬುಡಕಟ್ಟು ಭಾಷೆಗಳ ಜೀವಂತಿಕೆ, ಮಾತನಾಡುವವರ ಸಂಖ್ಯೆ, ಭೌಗೋಳಿಕ ವ್ಯಾಪ್ತಿ, ಪೀಳಿಗೆಯಿಂದ ಪೀಳಿಗೆಗೆ ಭಾಷೆಯ ವರ್ಗಾವಣೆ, ಶಿಕ್ಷಣದಲ್ಲಿ ಭಾಷೆಯ ಬಳಕೆ, ಲಿಖಿತ ಸಂಪನ್ಮೂಲಗಳು, ಡಿಜಿಟಲ್ ಸಂಪನ್ಮೂಲಗಳು ಹಾಗೂ ಈಗಾಗಲೇ ನಡೆದಿರುವ ದಾಖಲಾತಿಯ ಸ್ಥಿತಿಗತಿಗಳನ್ನು ಒಳಗೊಂಡ ಸಮಗ್ರ ಭಾಷಾ ಪ್ರೊಫೈಲ್ ರೂಪಿಸುವ ಅಗತ್ಯವಿದೆ. ಪ್ರತಿಯೊಂದು ಬುಡಕಟ್ಟು ಭಾಷೆಯ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಗುರುತಿಸಿ, ಅದರ ಆಧಾರದ ಮೇಲೆ ಸಂರಕ್ಷಣೆ, ಪುನರುಜ್ಜೀವನ ಮತ್ತು ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿದರೆ ಹೆಚ್ಚಿನ ಪರಿಣಾಮಕಾರಿತ್ವ ಸಾಧಿಸಬಹುದು ಎಂದು ರಘುಮೂರ್ತಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾದ ದುರ್ಗಾದಾಸ್ ಉಯಿಕಿ, ಮೈಸೂರು ಹಾಗೂ ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಜಂಟಿ ಕಾರ್ಯದರ್ಶಿಗಳಾದ ಅನಂತ್ ಪ್ರಕಾಶ್ ಪಾಂಡೆ, ಕರ್ನಾಟಕ ಬೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ರಾಮಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಕನಗವಲ್ಲಿ, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರಾದ ಬಸವರಾಜ್ ಕೋಡಗುಂಟಿ, ಪರಿಶಿಷ್ಟ ಪಂಗಡಗ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ಅಶೋಕ್, ಜಂಟಿ ನಿರ್ದೇಶಕರಾದ ಡಾ.ರಾಜ್ ಕುಮಾರ್, ಉಪ ನಿರ್ದೇಶಕರಾದ ಹೆಚ್.ಎಸ್ ಗಿರಿಜಾಂಬ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
