ಬೆಂಗಳೂರು: ರಾಜ್ಯದಲ್ಲಿ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಉಪ ಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನೀಡಿದ ಮಾಧ್ಯಮ ಪ್ರಕಟಣೆಯಲ್ಲಿ ಅವರು ಸರ್ಕಾರದ ಪ್ರಮುಖ ಕ್ರೀಡಾ ಸೌಲಭ್ಯಗಳು ಹಾಗೂ ಭವಿಷ್ಯದ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ.
ನಗದು ಬಹುಮಾನ ಹಾಗೂ ಪ್ರೋತ್ಸಾಹಧನ: ಒಲಿಂಪಿಕ್ಸ್, ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪದಕ ವಿಜೇತರಿಗೆ ಹೆಚ್ಚುವರಿಯಾಗಿ ₹15 ಲಕ್ಷ ನಗದು ಬಹುಮಾನ ವಿತರಿಸಲಾಗುತ್ತಿದ್ದು, ಗ್ಲಾಸ್ಕೋ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪಾ ಅವರಿಗೆ ಒಟ್ಟು ₹20 ಲಕ್ಷ ನೀಡಿ ಗೌರವಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ: ರಾಜ್ಯಾದ್ಯಂತ ₹36 ಕೋಟಿ ವೆಚ್ಚದಲ್ಲಿ 32 ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ತಾಲೂಕು ಮಟ್ಟದಿಂದಲೇ ದಸರಾ ಕ್ರೀಡಾಕೂಟಗಳನ್ನು ವ್ಯವಸ್ಥಿತವಾಗಿ ಆಯೋಜಿಸಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ.
ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿ: CET ಯಲ್ಲಿ ಕ್ರೀಡಾ ಮೀಸಲಾತಿ ಮೂಲಕ ಈ ವರ್ಷ 115 ಕ್ರೀಡಾಪಟುಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳು ಲಭ್ಯವಾಗಿವೆ. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ಸುಮಾರು 2,000 ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಸಿಗಲಿದೆ. ಈಗಾಗಲೇ 13 ಪ್ರಮುಖ ಪದಕ ವಿಜೇತರಿಗೆ ‘ಎ’ ಮತ್ತು ‘ಬಿ’ ಗುಂಪಿನ ಹುದ್ದೆಗಳನ್ನು ನೀಡಲಾಗಿದೆ.
ಹಾಜರಾತಿಯಲ್ಲಿ ವಿನಾಯಿತಿ: 34 ಮಾನ್ಯತೆ ಪಡೆದ ಕ್ರೀಡೆಗಳಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗಿದೆ. ರಾಜ್ಯ/ರಾಷ್ಟ್ರೀಯ ಮಟ್ಟದ ಸ್ಪರ್ಧಿಗಳಿಗೆ ಶೇ. 15 ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳಿಗೆ ಶೇ. 25ರಷ್ಟು ವಿನಾಯಿತಿ ನೀಡಲಾಗಿದ್ದು, ಕನಿಷ್ಠ ಶೇ. 50 ಹಾಜರಾತಿ ಇದ್ದರೆ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ.
ಬ್ಯಾಸ್ಕೆಟ್‌ಬಾಲ್ ಕೇಂದ್ರ ಮತ್ತು ಕಂಠೀರವ ಕ್ರೀಡಾಂಗಣ ಉನ್ನತೀಕರಣ: ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಅಭಿವೃದ್ಧಿಗೆ 5 ಎಕರೆ ಜಾಗ ಮೀಸಲಿಟ್ಟು ಅತ್ಯಾಧುನಿಕ ತರಬೇತಿ ಕೇಂದ್ರ ನಿರ್ಮಿಸಲಾಗುವುದು. 2030ರ ಕಾಮನ್‌ವೆಲ್ತ್ ಗೇಮ್ಸ್ ಮುನ್ನ ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ₹5,000 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಿ, ಜಾಗತಿಕ ಮಟ್ಟದ ಕ್ರೀಡೆಗಳನ್ನು ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಕ್ರೀಡೆ ಮತ್ತು ಶಿಕ್ಷಣ ಎರಡನ್ನೂ ಸಮತೋಲನಗೊಳಿಸಿ, ರಾಜ್ಯದ ಯುವ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿಸುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ಬೆಂಬಲವಾಗಿ ನಿಲ್ಲಿಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಭರವಸೆ ನೀಡಿದ್ದಾರೆ.
