ಸಮಗ್ರ ಸುದ್ದಿ

ಕೆ.ಪಿ.ಎಸ್.ಸಿ ಗೇಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ  ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Share

ಬೆಂಗಳೂರು:2026-27ನೇ ಸಾಲಿನ ಗೇಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 319 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 7 ರವರೆಗೆ ವಿಸ್ತರಿಸಿ ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದೆ.  

ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 319 ಹುದ್ದೆಗಳಿಗೆ (ಉಳಿಕೆ ಮೂಲ ವೃಂದ 297 + ಹೈದ್ರಾಬಾದ್-ಕರ್ನಾಟಕ ವೃಂದ 22) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ 31-07-2026ರಂದು ಅಧಿಸೂಚನೆ ಹೊರಡಿಸಿತ್ತು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 31 ರವರೆಗೆ ಕಾಲಾವಕಾಶ ನೀಡಲಾಗಿತ್ತು.

ಆದರೆ, ಇತ್ತೀಚೆಗೆ ನಾಡಕಛೇರಿ ಹಾಗೂ ಸೇವಾ ಸಿಂಧು ಪೋರ್ಟಲ್‌ನಲ್ಲಿ ತಾಂತ್ರಿಕ ಸರ್ವರ್ ಸಮಸ್ಯೆಗಳು ಎದುರಾಗಿದ್ದರಿಂದ ಜಾತಿ, ಆದಾಯ ಹಾಗೂ ಒಳ ಮೀಸಲಾತಿ ಪ್ರಮಾಣ ಪತ್ರಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲು ಅಭ್ಯರ್ಥಿಗಳಿಗೆ ಸಾಧ್ಯವಾಗಿರಲಿಲ್ಲ. ಜೊತೆಗೆ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಇಂಟರ್‌ನೆಟ್ ಸಂಪರ್ಕದ ಕೊರತೆಯಿಂದಾಗಿ ಶುಲ್ಕ ಪಾವತಿಯಲ್ಲಿ ವೈಫಲ್ಯ ಉಂಟಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಅನೇಕ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು.

ಅಭ್ಯರ್ಥಿಗಳಿಂದ ಬಂದ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಲೋಕಸೇವಾ ಆಯೋಗವು, ಅಭ್ಯರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 07-09-2026ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜ್ಯೋತಿ ಕೆ‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page