ಬೆಂಗಳೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ವಿನೂತನ ರೀತಿಯಲ್ಲಿ ಆಚರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
ರೇಸ್ ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ
2026ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಪೂರ್ವಸಿದ್ದತೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಾರಿಯ ದಸರಾ ಆಚರಣೆಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ದಸರಾ ಉತ್ಸವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ದೇಶಾದ್ಯಂತ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ದೇಶಿಸಿದೆ.
ಪ್ರಮುಖ ಗಣ್ಯರಿಗೆ ಆಹ್ವಾನ: ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಹಾಗೂ ವಿವಿಧ ದೇಶಗಳ ರಾಯಭಾರಿಗಳು (Ambassadors) ಮತ್ತು ಉನ್ನತಾಧಿಕಾರಿಗಳನ್ನು ದಸರಾ ವೀಕ್ಷಣೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ.
ಸೇನಾ ಬಲ ಮತ್ತು ಏರ್ ಷೋ: ಆಕರ್ಷಕ ‘ಏರ್ ಷೋ’ (Air Show) ಆಯೋಜಿಸುವ ಕುರಿತು ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಿಂದ ಕವಾಯತು (Parade) ಮತ್ತು ಸ್ತಬ್ಧಚಿತ್ರ (Tableau) ತಂಡಗಳನ್ನು ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು.
ರಾಷ್ಟ್ರೀಯ ಸಂಸ್ಥೆಗಳ ಭಾಗವಹಿಸುವಿಕೆ: ಭಾರತೀಯ ಸೇನಾಪಡೆಗಳು, ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ, ಇಸ್ರೋ (ISRO), ಹಾಗೂ ಡಿಆರ್‌ಡಿಒ (DRDO) ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಪ್ರಮುಖ ಸಂಸ್ಥೆಗಳನ್ನು ಆಹ್ವಾನಿಸಲಾಗುವುದು.
ವಿನೂತನ ಆಕರ್ಷಣೆಗಳು: ಬೃಹತ್ ‘ಡ್ರೋನ್ ಷೋ’ (Drone Show), ಚಿತ್ರಸಂತೆ, ಫ್ಲೀ ಮಾರ್ಕೆಟ್ (Flea Market), ವಿಂಟೇಜ್ ಕಾರ್ ರ್ಯಾಲಿ, ರಂಗೋಲಿ ಸ್ಪರ್ಧೆ ಮುಂತಾದ ಹೊಸ ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿದೆ.
ಸಂಸ್ಕೃತಿ ಮತ್ತು ಕಲಾತಂಡಗಳು: ರಾಜ್ಯದ ಎಲ್ಲಾ ಭಾಗಗಳನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ಕಲಾತಂಡಗಳಿಗೆ ಆದ್ಯತೆ ನೀಡಲಾಗುವುದು. ಜೊತೆಗೆ, ನೆರೆ ರಾಜ್ಯಗಳ ಕಲಾತಂಡಗಳಿಗೂ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗುವುದು.
ಆಸನ ವ್ಯವಸ್ಥೆ ಮತ್ತು ಉಸ್ತುವಾರಿ: ದಸರಾಗೆ ಟಿಕೆಟ್ ಪಡೆದು ಆಗಮಿಸುವ ವೀಕ್ಷಕರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಉಸ್ತುವಾರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಪ್ರತಿದಿನ ಒಬ್ಬೊಬ್ಬ ಸಚಿವರನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗುವುದು.
ಮೈಸೂರು ಅರಮನೆ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಕುರಿತು ಕಿರುಚಿತ್ರ (Short Film) ನಿರ್ಮಿಸಿ, ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಲು ನಿರ್ದೇಶಿಸಲಾಗಿದೆ.
ಸಭೆಯಲ್ಲಿ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ, ಯುವ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ. ಬಿ. ಕಾವೇರಿ , ಪ್ರವಾಸೋದ್ಯಮ ಇಲಾಖೆ ಆಯುಕ್ತ ರಾಮ್ ಪ್ರಸಾತ್ ಮನೋಹರ್, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿ ಇ ಓ ಉಕೇಶ್ ಕುಮಾರ್, ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಇನ್ನಿತರರು ಉಪಸ್ಥಿತರಿದ್ದರು.
