ಸಮಗ್ರ ಸುದ್ದಿ

ಅಹಿಂದ ಒಗ್ಗಟ್ಟಿನಿಂದ ಮಾತ್ರ ಶೋಷಣೆಮುಕ್ತ ಸಮಾಜ ನಿರ್ಮಾಣ ಸಾಧ್ಯ: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

Share

ರಾಯಚೂರು: ಸಮಾಜದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಶೋಷಣೆಯನ್ನು ಎದುರಿಸಲು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಹೋರಾಟ ನಡೆಸುವುದು ಅಗತ್ಯವಾಗಿದ್ದು, ಅಹಿಂದ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಮೂಲಕ ಮಾತ್ರ ಶೋಷಣೆಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ಕೃಷಿ ತಾಂತ್ರಿಕ ಮಹಾವಿಶ್ವವಿದ್ಯಾಲಯದ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ, ಸಮುದಾಯದ ಬಂಧುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಜಗಜ್ಯೋತಿ ಬಸವಣ್ಣ, ಗೌತಮ ಬುದ್ಧ ಹಾಗೂ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದುಳಿದ ವರ್ಗಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮಹತ್ತರ ಕಾರ್ಯ ಮಾಡಿದ್ದಾರೆ. ಅವರ ತತ್ವ ಹಾಗೂ ವಿಚಾರಗಳ ಹಾದಿಯೇ ನಮಗೆ ದಾರಿದೀಪವಾಗಿದೆ. ಇಂದು ದೇಶದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಮೂಲ ಕಾರಣವಾಗಿದೆ ಎಂದು ಸಚಿವರು ಸ್ಮರಿಸಿದರು.

ಮಹಾನಾಯಕ ಅಂಬೇಡ್ಕರ್ ಅವರ ಆಶಯದಂತೆ ಸೂಕ್ತ ರಾಜಕೀಯ ಶಕ್ತಿಯನ್ನು ಪಡೆದುಕೊಂಡಾಗ ಮಾತ್ರವೇ ಪ್ರತಿಯೊಂದು ರಂಗದಲ್ಲೂ ಪೂರ್ಣ ಪ್ರಮಾಣದ ಅಭಿವೃದ್ಧಿ ಹೊಂದಲು ಸಾಧ್ಯ. ಒಗ್ಗಟ್ಟಿನಲ್ಲಿಯೇ ಶಕ್ತಿಯಿದ್ದು, ಸಾಮಾಜಿಕ ನ್ಯಾಯದ ರಕ್ಷಣೆಗಾಗಿ ‘ಅಹಿಂದ’ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ್ ರಾಮಸ್ವಾಮಿ, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಕೆ. ಶಾಂತಪ್ಪ, ಕಾನೂನು ಘಟಕದ ಮುಖ್ಯಸ್ಥರಾದ ಶ್ರೀಕಾಂತ್ ರಾವ್, ನೌಕರರ ಸಂಘದ ಮುಖ್ಯಸ್ಥರಾದ ಡಾ. ಶ್ಯಾಮಣ್ಣ ಮಾಚನೂರು, ಮಹಿಳಾ ಸಂಘದ ಮುಖ್ಯಸ್ಥರಾದ ಶ್ರೀಮತಿ ಗಾಯತ್ರಿ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಗೂ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.


Share

You cannot copy content of this page