ಸಮಗ್ರ ಸುದ್ದಿ

ಯುವಕರ‌ ಭವಿಷ್ಯದೊಂದಿಗೆ ಚೆಲ್ಲಾಟ ಸಹಿಸುವುದಿಲ್ಲ:ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ-ಪ್ರಿಯಾಂಕ್ ಖರ್ಗೆ

Share

ಕಲಬುರಗಿ: ಕೆ.ಪಿ.ಎಸ್.ಸಿ ಪರೀಕ್ಷಾ ಅಕ್ರಮದಲ್ಲಿ ಯಾರೇ ಭಾಗಿಯಾದರು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮದಲ್ಲಿ ಬಾಗಿಯಾದವರು ಎಷ್ಟೆ ಬಲಿಷ್ಟವಾದರು, ಯಾವುದೇ ಪಕ್ಷದವರಾದರು ಸರಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ ಎಂದ ಅವರು, ತಾವೇ ರಾಜ್ಯದ ಗೃಹ ಸಚಿವರಿರುವಾಗ ಯಾವುದೇ ಸಾಕ್ಷಿ ದುರ್ಬಲಗೊಳಿಸಲು‌ ಸಹ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದೆ ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಪರೀಕ್ಷಾ ಅಕ್ರಮ ತಡೆಯಲು ಖಾಸಗಿ ಬಿಲ್ ಮಂಡಿಸಿದೆ. ಇದೀಗ ನಮ್ಮ ಸರ್ಕಾರದ ಅವಧಿಯಲ್ಲಿಯೆ ಪರೀಕ್ಷಾ ಅಕ್ರಮ ತಡೆಯಲು ಬಿಲ್ಲು ತರಲಾಗಿದೆ. 70 ಸಾವಿರ ಹುದ್ದೆ ಭರ್ತಿಗೆ ಚಾಲನೆ ನೀಡಿದ್ದು, 35 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರೆಲ್ಲರ ಹಿತ ಕಾಯುವುದು ನಮ್ಮ‌ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯ 5 ತಾಲೂಕು ಮಾತ್ರ ಬರ ಘೋಷಣೆ ಮಾಡಲಾಗಿದೆ‌ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಬರ ಘೋಷಣೆ ಮಾಡಬೇಕಾಗುತ್ತದೆ. ನಿಯಾಮಾವಳಿ ರಚಿಸಿದ್ದು ಕೇಂದ್ರ ಸರ್ಕಾರ. ವಿರೋಧ ಪಕ್ಷದವರು ಕಲಬುರಗಿಯಲ್ಲಿ ಪ್ರತಿಭಟನೆ ಮಾಡುವುದರ‌ ಬದಲಾಗಿ ಕೇಂದ್ರ ಸರ್ಕಾರದ ಮುಂದೆ ಹೀಗಿ ಪ್ರತಿಭಟಿಸಲಿ ಎಂದರು.

ಕಾರಾಗೃಹ ಸುಧಾರಣೆ ವರದಿ ಸಲ್ಲಿಕೆ:

ಕರ್ನಾಟಕದ ಕಾರಾಗೃಹಗಳ (ಜೈಲುಗಳ) ಆಡಳಿತ, ಸುರಕ್ಷತೆ ಮತ್ತು ಸುಧಾರಣೆಗಳಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಅವರ ನೇತೃತ್ವದಲ್ಲಿ ರಚಿಸಲಾದ ಉನ್ನತ ಮಟ್ಟದ ಸಮಿತಿಯೂ ಈಗಾಗಲೆ ವರದಿ ಸಲ್ಲಿಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಚಿವ‌ ಪ್ರಿಯಾಂಕ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ ಇದ್ದರು.


Share

You cannot copy content of this page