ಸಮಗ್ರ ಸುದ್ದಿ

ಸಿಇಓಗಳ ಗ್ರಾಮ ಭೇಟಿ ಕಡ್ಡಾಯ: ಈಶ್ವರ ಖಂಡ್ರೆ

Share

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಓ) ವಾರದಲ್ಲಿ ಕನಿಷ್ಠ 2 ದಿನ 4-5 ಗ್ರಾಮಗಳಿಗಾದರೂ ದಿಢೀರ್ ಭೇಟಿ ನೀಡಿ ಖುದ್ದು ಪರಿಶೀಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಸಿಇಓಗಳು ಗ್ರಾಮ ಪಂಚಾಯತಿಗಳಿಗೆ ಪೂರ್ವ ಸೂಚನೆ ನೀಡಿದೆ ಭೇಟಿ ನೀಡಿ, ಹಾಜರಾತಿ, ಪಿಡಿಓ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯವೈಖರಿ ಪರಾಮರ್ಶಿಸುವುದರ ಜೊತೆಗೆ, ಜನರ ಆಹವಾಲು ಆಲಿಸಿ ಸ್ಥಳದಲ್ಲೇ ಕೆಲವು ಸಮಸ್ಯೆಗಳನ್ನಾದರೂ ಪರಿಹರಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯದ 31 ಜಿಲ್ಲೆಗಳಲ್ಲಿ 5900ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿದ್ದು, 57,879 ವಸತಿ ಪ್ರದೇಶಗಳಿವೆ. ರಾಜ್ಯದ ಒಟ್ಟು ಜನಸಂಖ್ಯೆ 6 ಕೋಟಿ 13 ಲಕ್ಷ ಇದ್ದು, ಈ ಪೈಕಿ 26,589 ಹಳ್ಳಿಗಳಲ್ಲಿ 4 ಕೋಟಿ 45 ಲಕ್ಷ ಜನರು ವಾಸುತ್ತಿದ್ದಾರೆ. ಅಂದರೆ ರಾಜ್ಯದ ಮುಕ್ಕಾಲು ಭಾಗ ಜನಸಂಖ್ಯೆ ಇರುವುದೇ ಗ್ರಾಮೀಣ ಪ್ರದೇಶಗಳಲ್ಲಿ ಹೀಗಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮಾಭಿವೃದ್ಧಿಗೆ ಗಮನ ಹರಿಸಬೇಕು ಎಂದರು.

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ನೈರ್ಮಲ್ಯ, ವಿಬಿಜಿ ರಾಮ್ ಜಿ ಅಡಿ ಸ್ಥಳದಲ್ಲೇ ಉದ್ಯೋಗ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ಗ್ರಾಮಗಳಿಂದ ಜನರು ನಗರಕ್ಕೆ ವಲಸೆ ಹೋಗುವುದು ತಪ್ಪಲಿದ್ದು, ಇದು ನಗರಗಳ ಮೇಲಿನ ಒತ್ತಡವನ್ನೂ ತಗ್ಗಿಸುತ್ತದೆ, ಜೊತೆಗೆ ಗ್ರಾಮಗಳ ಅಭಿವೃದ್ಧಿಯೂ ಆಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಜಲ ಜೀವನ ಮಿಷನ್, ವಿಬಿಜಿ ರಾಮ್ ಜಿ, ಪ್ರಧಾನಮಂತ್ರಿ ವಸತಿ ಯೋಜನೆ (ಗ್ರಾಮೀಣ) ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಮುಖ್ಯಮಂತ್ರಿಗಳ ರಸ್ತೆ ಯೋಜನೆ ಇತ್ಯಾದಿಗಳ ಸಮರ್ಪಕ ಅನುಷ್ಠಾನ ಆಗುತ್ತಿದೆಯೇ, ಕೆರೆಗಳ ಒತ್ತುವರಿ ತೆರೆವು ಆಗುತ್ತಿದೆಯೇ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಒಣ ಹಾಗೂ ಹಸಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿದೆಯೇ ಎಂಬುದನ್ನು ಸಿಇಓಗಳು ನಿಯಮಿತವಾಗಿ ಪರಿಶೀಲಿಸಿದರೆ ಆಗ ಕಾಮಗಾರಿಗಳು ಚುರುಕಾಗಲಿವೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.


Share

You cannot copy content of this page