ಸಮಗ್ರ ಸುದ್ದಿ

ವಿದ್ಯುತ್ ಸಮಸ್ಯೆಯಾಗದಂತೆ ಕ್ರಮ: ಸಚಿವ ಕೆ.ಜೆ.ಜಾರ್ಜ್|-ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ವಿದ್ಯುತ್ ಮೂಲ ಸೌಕರ್ಯ ಹೆಚ್ಚಿಸಲು ಅಗತ್ಯ ಸಬ್ ಸ್ಟೇಷನ್ ನಿರ್ಮಾಣ

Share

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಇದ್ದರೂ ವಿದ್ಯುತ್ ಸಮಸ್ಯೆ ತಲೆದೋರದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅಗತ್ಯ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026ರ ಬೆಂಗಳೂರು ರೋಡ್ ಶೋನಲ್ಲಿ ಸೋಮವಾರ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದುವರೆಗೆ ವಿದ್ಯುತ್ ಸಮಸ್ಯೆ ತಲೆದೋರಿಲ್ಲ. ಮುಂದಿನ ದಿನಗಳಲ್ಲೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಯೋಜನೆ ಸಿದ್ಧಪಡಿಸಲಾಗುತ್ತಿದೆ,” ಎಂದರು.

“ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಕಳೆದ ಬಾರಿ ಬೇಸಿಗೆಯಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆದುಕೊಳ್ಳಲಾಗಿತ್ತು. ಜೂನ್ ಬಳಿಕ ಸೆಪ್ಟೆಂಬರ್ ವರೆಗೆ ಅದನ್ನು ಹಿಂತಿರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ವಿನಿಮಯ ಆಧಾರದ ಮೇಲೆ ಆ ರಾಜ್ಯಗಳಿಂದ ವಿದ್ಯುತ್ ಪಡೆಯಲಾಗುವುದು. ಒಂದು ವೇಳೆ ಆ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ನಿರೀಕ್ಷಿತ ವಿದ್ಯುತ್ ಬಾರದೇ ಇದ್ದರೆ ಬೇರೆ ಕಡೆಯಿಂದ ಖರೀದಿಸಿ ಪೂರೈಸಲಾಗುವುದು. ಖರೀದಿಗೆ ಎಷ್ಟೇ ವೆಚ್ಚವಾದರೂ ಭರಿಸಲು ಸರ್ಕಾರ ಸಿದ್ಧವಿದೆ,” ಎಂದು ತಿಳಿಸಿದರು.

“ರಾಜ್ಯದಲ್ಲಿ ಬರಗಾಲ ಇದ್ದರೂ ಇದುವರೆಗೆ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತಗೊಳಿಸಿಲ್ಲ. ಲಾಸ್ಟ್ ಮೈಲ್ ಕನೆಕ್ಟಿವಿಟಿ ಇಲ್ಲದ ಪ್ರದೇಶಗಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ ಕಂಡು ಬರುತ್ತದೆಯಾದರೂ ಅದು ಸ್ವಲ್ಪ ಸಮಯ ಮಾತ್ರ. ಕೂಡಲೇ ಸಮಸ್ಯೆ ಸರಿಪಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಲಾಸ್ಟ್ ಮೈಲಿ ಕನೆಕ್ಟಿವಿಟಿಗೆ ಒತ್ತು ನೀಡಲಾಗುತ್ತಿದೆ,” ಎಂದು ಹೇಳಿದರು.

“ಈ ನಿಟ್ಟಿನಲ್ಲಿ ವಿದ್ಯುತ್ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 12 ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಂದಿನ 2-3 ವರ್ಷದಲ್ಲಿ ಸುಮಾರು 400 ಸಬ್ ಸ್ಟೇಷನ್ ಗಳ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯುತ್ ಲೈನ್ ಗಳನ್ನು ಸ್ಥಾಪಿಸುವುದು, ಪ್ರಸ್ತುತ ಇರುವ ವಿದ್ಯುತ್ ಲೈನ್ ಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಎಲ್ಲಾ ಕಾರ್ಯ ಮುಗಿದರೆ ಎಲ್ಲರಿಗೂ ಸಮರ್ಪಕ ವಿದ್ಯುತ್ ಲಭ್ಯವಾಗಲಿದೆ,” ಎಂದರು.

ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ಬೇಡ:

“ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಗೊಂಡರೆ ವಿದ್ಯುತ್ ಸಮಸ್ಯೆ ಇರುವುದಿಲ್ಲ. ರಾಜ್ಯದಲ್ಲಿ ಪ್ರಸ್ತುತ 18,000 ಮೆಗಾವ್ಯಾಟ್ ನಷ್ಟು ವಿದ್ಯುತ್ ಬೇಡಿಕೆ ಇದೆ. ಅದರಲ್ಲಿ ಶೇ. 70ರಷ್ಟನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತದೆ. ಆದರೆ, ಈ ಮೂಲಗಳಿಂದ ಹಗಲು ವೇಳೆ ಮಾತ್ರ ವಿದ್ಯುತ್ ಲಭ್ಯವಾಗುತ್ತದೆ. ಹೀಗಾಗಿ ಅದನ್ನು ಸಂಗ್ರಹಿಸಿ ಬೇಡಿಕೆ ಅವಧಿಯಲ್ಲಿ ಪೂರೈಸಲು ಸರ್ಕಾರ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಆದರೆ, ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ,” ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

“ನಾವೀಗ 18ನೇ ಶತಮಾನದಲ್ಲಿ ಇಲ್ಲ, 21ನೇ ಶತಮಾನದಲ್ಲಿದ್ದೇವೆ. ಹೀಗಾಗಿ ಈ ಶತಮಾನಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಅದರಂತೆ ಪಂಪ್ಡ್ ಸ್ಟೋರೇಜ್ ಯೋಜನೆಯ ಅನಿವಾರ್ಯತೆ ಕಂಡು ಇದನ್ನು ಜಾರಿಗೊಳಿಸುತ್ತಿದ್ದೇವೆ. ನಾವು ಯಾವುದೇ ಯೋಜನೆ ಕೈಗೆತ್ತಿಕೊಳ್ಳುವುದಿದ್ದರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವನ್ಯಜೀವಿ ಮಂಡಳಿಯಿಂದ ಒಪ್ಪಿಗೆ ಪಡೆದು ಅದನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಕಳುಹಿಸಿಕೊಡುತ್ತೇವೆ. ಅಲ್ಲಿ ಒಪ್ಪಿಗೆಯಾದರೆ ಮಾತ್ರ ಯೋಜನೆ ಜಾರಿಗೊಳಿಸುತ್ತೇವೆ. ಒಪ್ಪಿಗೆ ಸಿಗದಿದ್ದರೆ ಜಾರಿಗೊಳಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಗೃಹಜ್ಯೋತಿ ಯೋಜನೆಯ ಪರಿಶೀಲನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಕೆ.ಜೆ.ಜಾರ್ಜ್, “ಹಲವು ಸರ್ಕಾರಿ ನೌಕರರು ಸೇರಿದಂತೆ ಬಹಳಷ್ಟು ಮಂದಿ ನಮಗೆ ಗೃಹಜ್ಯೋತಿ ಯೋಜನೆ ಬೇಡ ಎಂದು ಹೇಳಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪರಿಶೀಲನೆಗೆ ಸೂಚಿಸಿದ್ದಾರೆ. ಪರಿಶೀಲನೆ ವೇಳೆ ಕೆಲವು ದಾಖಲೆಗಳನ್ನು ಕೇಳಿದ್ದು, ಯೋಜನೆಯ ಅನುಕೂಲ ಬೇಡ ಎನ್ನುವವರು ದಾಖಲೆಗಳನ್ನು ಕೊಡುವ ಅಗತ್ಯ ಇಲ್ಲ. ಹಾಗೆಂದು ನಾವು ಅರ್ಹರನ್ನು ಯೋಜನೆಯಿಂದ ಕೈಬಿಡುವುದಿಲ್ಲ. ಪ್ರಸ್ತುತ ಶೇ. 65ರಿಂದ ಶೇ. 70ರಷ್ಟು ಪರಿಶೀಲನಾ ಕಾರ್ಯ ಮುಗಿದಿದೆ. ಅರ್ಹ ಎಲ್ಲರೂ ಇದರ ಅನುಕೂಲ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಪರಿಶೀಲನಾ ಕಾರ್ಯಕ್ಕೆ ಇದ್ದ ಗಡುವನ್ನು ಸೆಪ್ಟಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ,” ಎಂದು ತಿಳಿಸಿದರು.


Share

You cannot copy content of this page