ಕುಣಿಗಲ್: ರಾಜಧಾನಿ ಬೆಂಗಳೂರಿನಿಂದ ತುಮಕೂರು ಜಿಲ್ಲೆಯ ಕುಣಿಗಲ್ ಗೆ 8 ಬಿಎಂಟಿಸಿ ಹವಾನಿಯಂತ್ರಿತ ವಜ್ರ ವಿಸ್ತಾರ ಬಸ್ ಗಳ ಸಂಚಾರಕ್ಕೆ ಸಾರಿಗೆ ಸಚಿವ ಬೈರತಿ ಸುರೇಶ್ ಬುಧವಾರ ಹಸಿರು ನಿಶಾನೆ ತೋರಿದರು.
ಕುಣಿಗಲ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಬೈರತಿ ಸುರೇಶ್ ಅವರು, ಈ ಸಾರಿಗೆ ಸಂಪರ್ಕದಿಂದ ಕುಣಿಗಲ್ ರಾಜಧಾನಿಗೆ ಇನ್ನಷ್ಟು ಹತ್ತಿರವಾಗಲಿದೆ ಎಂದರು.
ಸಂಸ್ಥೆಗೆ 3-4 ತಿಂಗಳಲ್ಲಿ 4550 ಎಲೆಕ್ಟ್ರಿಕ್ ಬಸ್ ಸೇರ್ಪಡೆ
ಕೇಂದ್ರ ಸರ್ಕಾರದಿಂದ 4550 ಎಲೆಕ್ಟ್ರಿಕ್ ಬಸ್ ಗಳನ್ನು ಬಿಎಂಟಿಸಿ ಗೆ ಪಡೆಯಲಾಗುತ್ತಿದೆ. ಈ ಬಸ್ ಗಳು ಮುಂದಿನ 4-5 ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ದೂರದೃಷ್ಟಿ ಯಿಂದಾಗಿ ಈ ಬಸ್ ಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 12 ವರ್ಷಗಳಲ್ಲಿ ಸುಮಾರು 21 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ ಎಂದು ಅವರು ಹೇಳಿದರು.
ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಶಕ್ತಿ ಯೋಜನೆಯಡಿ 26473 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ವಾರ್ಷಿಕ 10 ಸಾವಿರ ಕೋಟಿ ರೂಪಾಯಿಗಳನ್ನು ಭರಿಸುತ್ತಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣವೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ. ಇದಕ್ಕೆ ಸರ್ಕಾರ ವಾರ್ಷಿಕ 350-400 ಕೋಟಿ ರೂಪಾಯಿ ಹಣ ವ್ಯಯಿಸಲಿದೆ ಎಂದರು.
ಬಿಜೆಪಿಯವರದ್ದು ಕೇವಲ ರಾಜಕೀಯ
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಸರ್ಕಾರ ಜನತೆಗೆ ಪಂಚ ಗ್ಯಾರೆಂಟಿ ಕಾರ್ಯಕ್ರಮಗಳನ್ನು ನೀಡಿದೆ. ಇದರಿಂದ ಕೋಟ್ಯಂತರ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಆದರೆ, ಬಿಜೆಪಿ ಮತ್ತು ಜೆಡಿಎಸ್ ನವರು ಇಂತಹ ಒಂದೇ ಒಂದು ಕಾರ್ಯಕ್ರಮವನ್ನೂ ನೀಡಲಿಲ್ಲ. ಅದು ಅವರಿಗೂ ಸಾಧ್ಯವಿಲ್ಲ. ಎರಡೂ ಪಕ್ಷಗಳ ನಾಯಕರು ಕೇವಲ ರಾಜಕೀಯ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಬಿಡದಿ ಟೌನ್ ಶಿಪ್ ನಮ್ಮದಲ್ಲ
ಬಿಡದಿ ಟೌನ್ ಶಿಪ್ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ರೂಪಿಸಿದ್ದಲ್ಲ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರೂಪಿಸಿದ್ದರು. ಆದರೆ, ಯಾವ ಕಾರಣದಿಂದ ನಿಲ್ಲಿಸಿದರೋ ಗೊತ್ತಿಲ್ಲ. ಶೇಕಡಾ 70-80 ರಷ್ಟು ರೈತರು ಈ ಯೋಜನೆಗೆ ಭೂಮಿ ನೀಡಲು ಮುಂದಾಗಿದ್ದಾರೆ. ಅವರಿಗೆ ಉತ್ತಮ ಪರಿಹಾರವನ್ನೂ ಕೊಡಲಾಗುತ್ತಿದೆ ಎಂದರು.
ರಾಜಧಾನಿ ವಿಸ್ತಾರ ಅಗತ್ಯ
ಬೆಂಗಳೂರು ನಗರ ಇನ್ನಷ್ಟು ವಿಸ್ತಾರವಾಗಬೇಕೆಂಬುದು ಸಿಎಂ ಡಿ ಕೆ ಶಿವಕುಮಾರ್ ಮತ್ತು ನಮ್ಮೆಲ್ಲರ ಆಶಯವಾಗಿದೆ. ಐಟಿ ಬಿಟಿ ಸೇರಿದಂತೆ ಅನೇಕ ಕೈಗಾರಿಕೆಗಳು ಹೆಚ್ಚಾಗಬೇಕು. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ತಿಳಿಸಿದರು.
ನಂಬರ್ ಒನ್ ರಾಜ್ಯದ ಸಂಕಲ್ಪ
ಕಾಂಗ್ರೆಸ್ ಸರ್ಕಾರ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕರ್ನಾಟಕವನ್ನು ದೇಶದಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ನಾವೆಲ್ಲಾ ಪಣ ತೊಟ್ಟಿದ್ದೇವೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
2028 ಕ್ಕೂ ಕಾಂಗ್ರೆಸ್ ಸರ್ಕಾರ
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಡಿ ಕೆ ಶಿವಕುಮಾರ್ ಅವರು ಅಣ್ಣ ತಮ್ಮಂದಿರಂತೆ ಇದ್ದಾರೆ. ಅವರಿಬ್ಬರ ಶ್ರಮದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 2028 ಕ್ಕೂ ಇವರಿಬ್ಬರ ನಾಯಕತ್ವದಲ್ಲಿ ಪಕ್ಷ 140ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆದ್ದು ಭರ್ಜರಿಯಾಗಿ ಅಧಿಕಾರಕ್ಕೆ ಬರಲಿದೆ ಎಂದು ಘೋಷಿಸಿದರು.
ಡಿ ಕೆ ಸುರೇಶ್ ಸೋಲಿನಿಂದ ಆಶ್ಚರ್ಯ
ಸಮಾರಂಭದಲ್ಲಿ ಹಾಜರಿದ್ದ ಮಾಜಿ ಸಂಸದ ಮತ್ತು ಬಮುಲ್ ಅಧ್ಯಕ್ಷ ಡಿ ಕೆ ಸುರೇಶ್ ಅವರನ್ನು ಉದ್ದೇಶಿಸಿ ಸಚಿವರು, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿರುವುದು ಆಶ್ಚರ್ಯ ತಂದಿದೆ. ಹಗಲಿರುಳೂ ಜನರ ಬಗ್ಗೆ ಕಾಳಜಿ ತೋರಿ ಹಲವು ಕಾರ್ಯಕ್ರಮಗಳನ್ನು ಕೊಟ್ಟಿರುವ ಸುರೇಶ್ ಅವರನ್ನು ರಾಮನಗರ ಮತದಾರರು ಯಾವ ಕಾರಣದಿಂದ ಸೋಲಿಸಿದ್ದಾರೋ ಗೊತ್ತಿಲ್ಲ. ಈಗ ತಪ್ಪಿನ ಅರಿವಾಗಿರಬಹುದು. ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದು ಅಗತ್ಯವಾಗಿದೆ ಎಂದರು.
