ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅನಧಿಕೃತ ಫೆಕ್ಸ್ ಗಳನ್ನು ತೆರವುಗೊಳಿಸಿ ದಂಡ ವಿಧಿಸುವ ಜೊತೆಗೆ ದೂರು ದಾಖಲಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳುರು ನಗರದ 5 ನಗರ ಪಾಲಿಕೆಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್ /ಬ್ಯಾನರ್ ಗಳನ್ನು ತೆರವುಗೊಳಿಸಿ, ಅಳವಡಿಸಿರುವವರ ಮೇಲೆ ದೂರು ದಾಖಲಿಸಿ ದಂಡ ವಿಧಿಸುವಂತೆ ನಿರ್ದೇಶನ ನೀಡಿದರು.
50 ಸ್ಥಳಗಳನ್ನು ಗುರುತಿಸಿ ಸಮಸ್ಯೆ ಬಗೆಹರಿಸಿ:
5 ನಗರ ಪಾಲಿಕೆಗಳಲ್ಲಿ ಬರುವ 10 ವಲಯಗಳಲ್ಲಿ ಒಂದು ವಲಯದಲ್ಲಿ 50 ಕೆಟ್ಟ ಪರಿಸ್ಥಿತಿಯಲ್ಲಿರುವ ಪಾದಚಾರಿ ಸ್ಥಳಗಳನ್ನು ಗುರುತಿಸಿ ಅವುಗಳನ್ನು ದುರಸ್ಥಿಪಡಿಸಿದ ನಂತರ, ಸರಿಪಡಿಸಿರುವ ಸ್ಥಳಗಳ ಪಟ್ಟಿ ಸಿದ್ದಪಡಿಸಿ ವರದಿ ನೀಡಲು ಸೂಚನೆ ನೀಡಿದರು.
ಟೋಯಿಂಗ್ ಯಂತ್ರಗಳನ್ನು ತ್ವರಿತವಾಗಿ ಖರೀದಿಸಲು ಕ್ರಮವಹಿಸಬೇಕು. ಸುರಕ್ಷಾ 75 ಜಂಕ್ಷನ್‌ಗಳನ್ನು ಕಾಲಮಿತಿಯೊಳಗಾಗಿ ಅಭಿವೃದ್ಧಿಪಡಿಸಿ ಎಂದು ಹೇಳಿದರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳಿಗೆ ಆಯಾ ನಗರ ಪಾಲಿಕೆಗಳಲ್ಲಿ ಶೆಲ್ಟರ್ ಗಳನ್ನು ಗುರುತಿಸಬೇಕು. ಬೀದಿ ದೀಪಗಳನ್ನು ಅಳವಡಿಸಿ ಸರಿಯಾಗಿ ನಿರ್ವಹಣೆ ಮಾಡಲು ಕ್ರಮವಹಿಸಲು ಸೂಚಿಸಿದರು.
ಪಾದಚಾರಿ ಮಾರ್ಗಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಸ್ವಚ್ಛತೆಯಿಂದಿರುವಂತೆ ನೋಡಿಕೊಳ್ಳಬೇಕು. ಆಯಾ ನಗರ ಪಾಲಿಕೆಗಳಲ್ಲಿ ವಿಧಾನಸಭಾ ಕ್ಷೇತ್ರಕ್ಕೊಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಿ ಕಾಮಗಾರಿ ಪ್ರಾರಂಭಿಸಲು ನಿರ್ದೇಶಿಸಿದರು.
ನಗರದಲ್ಲಿ ರಸ್ತೆ ಬದಿ, ಖಾಲಿ ಜಾಗದಲ್ಲಿ ಕಸ ಬಿಸಾಡುವವರನ್ನು ಗುರುತಿಸಿ ಅವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕು. ಕಟ್ಟಡಗಳ ಬೇಸ್ಮೆಂಟ್ ಗಳಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ವಾಣಿಜ್ಯ ಕಾರ್ಯ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ತ್ಯಾಜ್ಯ ಹಾಕಲು ಕಡ್ಡಾಯವಾಗಿ ಹಸಿ ಹಾಗೂ ಒಣ ತ್ಯಾಜ್ಯಕ್ಕೆ ಪ್ರತ್ಯೇಕವಾದ ಬಿನ್ ಗಳನ್ನು ಬಳಸಲು ಕ್ರಮವಹಿಸುವಂತೆ ಸೂಚನೆ ನೀಡಿದ ಅವರು, ಹೆಚ್ಚು ಕಸ ಬಿಸಾಡುವ ಹಾಗೂ ಕೊಳಗೇರಿ ಪ್ರದೇಶಗಳ ಬಳಿ ಕಸದ ಕಿಯೋಸ್ಕ್ ಅಳವಡಿಸಲು ಸೂಚಿಸಿದರು.
ಈ ವೇಳೆ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ರಮೇಶ್ ಕೆ.ಎನ್, ಕರೀಗೌಡ, ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ದಿಗ್ವಿಜಯ್ ಬೋಡ್ಕೆ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
