ಸಮಗ್ರ ಸುದ್ದಿ

ಜೀವವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ ವಿಕಸಿತ ಭಾರತದ ಭವಿಷ್ಯಕ್ಕೆ ನಿರ್ಣಾಯಕ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

Share

ಬೆಂಗಳೂರು:ಜೀವವೈವಿಧ್ಯದ ಸಂರಕ್ಷಣೆ ಮತ್ತು ಸಸ್ಯ ತಳಿ ಸಂಪನ್ಮೂಲಗಳ ಸುಸ್ಥಿರ ಬಳಕೆಯು ವಿಕಸಿತ ಭಾರತದ ನಿರ್ಮಾಣಕ್ಕೆ ಅತ್ಯಂತ ನಿರ್ಣಾಯಕವಾಗಿದ್ದು, ಸಾಂಪ್ರದಾಯಿಕ ಜ್ಞಾನ, ಆಧುನಿಕ ವಿಜ್ಞಾನ ಮತ್ತು ಡಿಜಿಟಲ್ ನಾವೀನ್ಯತೆಯ ಸಮನ್ವಯದ ಮೂಲಕ ಭಾರತವನ್ನು ಸುಸ್ಥಿರ ಜೈವಿಕ ಆರ್ಥಿಕತೆಯತ್ತ ಮುನ್ನಡೆಸಬಹುದಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಹೇಳಿದರು.

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಧೀನದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR)ಯ ಡಾ. ಜಿ.ಎಸ್. ರಾಂಧವ ಸಭಾಂಗಣದಲ್ಲಿ ಭಾರತೀಯ ಸಸ್ಯ ತಳಿ ಸಂಪನ್ಮೂಲಗಳ ಸಂಘ (ISPGR), ICAR ಹಾಗೂ IIHR ವತಿಯಿಂದ ಆಯೋಜಿಸಿದ್ದ “ಭಾರತದ ಪರ್ಯಾಯ ದ್ವೀಪದ ಸಸ್ಯ ತಳಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು – ಜೀವವೈವಿಧ್ಯ ತಾಣದಿಂದ ಸುಸ್ಥಿರ ಜೈವಿಕ ಸಂಪನ್ಮೂಲ ಕೇಂದ್ರದವರೆಗೆ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾತಡಿದರು.

ಇಂದು ನಿರ್ಲಕ್ಷ್ಯಕ್ಕೊಳಗಾಗಿರುವ ಸ್ಥಳೀಯ ಬೆಳೆ ಪ್ರಭೇದಗಳೇ ನಾಳೆಯ ಹವಾಮಾನ-ಸಹಿಷ್ಣು, ರೋಗ-ನಿರೋಧಕ ಹಾಗೂ ಪೌಷ್ಟಿಕಾಂಶಯುಕ್ತ ಬೆಳೆಗಳಾಗುವ ಸಾಮರ್ಥ್ಯ ಹೊಂದಿದ್ದು, ಇಂದು ಸಂರಕ್ಷಿಸುವ ಬೀಜಗಳೇ ಭವಿಷ್ಯದ ಆಹಾರ ಭದ್ರತೆಗೆ ಭದ್ರ ಅಡಿಪಾಯವಾಗಲಿವೆ. ಕರ್ನಾಟಕವು ರಾಗಿ, ಜೋಳ, ದ್ವಿದಳ ಧಾನ್ಯಗಳು, ಅಕ್ಕಿ, ಎಣ್ಣೆಕಾಳುಗಳು, ಮಸಾಲೆಗಳು ಹಾಗೂ ಔಷಧೀಯ ಸಸ್ಯಗಳ ಸಮೃದ್ಧ ಜೀವವೈವಿಧ್ಯ ಪರಂಪರೆಯನ್ನು ಹೊಂದಿರುವ ರಾಜ್ಯವಾಗಿದ್ದು, ವಿಶೇಷವಾಗಿ ರಾಗಿಯಂತಹ ಸಾಂಪ್ರದಾಯಿಕ ಬೆಳೆಗಳು ಹವಾಮಾನ ಸಹಿಷ್ಣುತೆ ಮತ್ತು ಪೌಷ್ಟಿಕಾಂಶ ಎರಡಕ್ಕೂ ಮಹತ್ವದ್ದಾಗಿವೆ ಎಂದು ಅವರು ತಿಳಿಸಿದರು.

ಪರ್ಯಾಯ ದ್ವೀಪ ಭಾರತವನ್ನು ಜೀವವೈವಿಧ್ಯದ ತಾಣದಿಂದ ಸುಸ್ಥಿರ ಜೈವಿಕ ಸಂಪನ್ಮೂಲ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಸಂರಕ್ಷಣೆ, ಸಂಶೋಧನೆ, ನಾವೀನ್ಯತೆ, ಮೌಲ್ಯವರ್ಧನೆ, ಉದ್ಯಮಶೀಲತೆ ಮತ್ತು ರೈತರಿಗೆ ನೇರ ಪ್ರಯೋಜನ ತಲುಪಿಸುವ ಮೌಲ್ಯ ಸರಪಳಿಯನ್ನು ಬಲಪಡಿಸುವ ಅಗತ್ಯವಿದೆ. ಜೀನೋಮಿಕ್ಸ್, ಜೈವಿಕ ತಂತ್ರಜ್ಞಾನ, ಜೈವಿಕ ಮಾಹಿತಿಶಾಸ್ತ್ರ, ಕೃತಕ ಬುದ್ಧಿಮತ್ತೆ (AI), ರಿಮೋಟ್ ಸೆನ್ಸಿಂಗ್ ಮತ್ತು GIS ತಂತ್ರಜ್ಞಾನಗಳ ನೆರವಿನಿಂದ ಸಸ್ಯಗಳ ಆನುವಂಶಿಕ ಲಕ್ಷಣಗಳ ಗುರುತಿಸುವಿಕೆ ಮತ್ತು ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ರೈತರು ಹಾಗೂ ಸ್ಥಳೀಯ ಸಮುದಾಯಗಳೇ ಜೀವವೈವಿಧ್ಯದ ನಿಜವಾದ ರಕ್ಷಕರಾಗಿದ್ದು, ಟೋಡಾ, ಕಾನಿ, ಸೋಲಿಗ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳು ತಲೆಮಾರುಗಳಿಂದ ಸಂರಕ್ಷಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಜ್ಞಾನವು ಕೃಷಿಯ ಭವಿಷ್ಯಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಯುವ ವಿಜ್ಞಾನಿಗಳು ಸಸ್ಯ ತಳಿ ಸಂಪನ್ಮೂಲಗಳನ್ನು ಕೇವಲ ಸಂಶೋಧನೆಯ ವಿಷಯವಾಗಿ ಮಾತ್ರವಲ್ಲದೆ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಅವಕಾಶವಾಗಿಯೂ ಪರಿಗಣಿಸಬೇಕು ಎಂದು ಕರೆ ನೀಡಿದ ಅವರು, “ಪ್ರಯೋಗಾಲಯದಿಂದ ಭೂಮಿಗೆ” ಹಾಗೂ “ಭೂಮಿಯಿಂದ ಪ್ರಯೋಗಾಲಯಕ್ಕೆ” ಎಂಬ ಪರಿಕಲ್ಪನೆಯನ್ನು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಮತ್ತಷ್ಟು ಬಲಪಡಿಸಬೇಕೆಂದು ಸಲಹೆ ನೀಡಿದರು.

ಬೆಂಗಳೂರು ವಿಜ್ಞಾನ, ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ನಾವೀನ್ಯತೆಯ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿ ನಡೆಯುವ ಇಂತಹ ರಾಷ್ಟ್ರೀಯ ವಿಚಾರ ಸಂಕಿರಣಗಳು ದೇಶದ ವಿವಿಧ ಕೃಷಿ ವಲಯಗಳು ಮತ್ತು ರೈತರನ್ನು ತಲುಪುವ ಹೊಸ ಸಂಶೋಧನಾ ಸಹಭಾಗಿತ್ವ ಹಾಗೂ ಕಾರ್ಯಯೋಜನೆಗಳಿಗೆ ದಾರಿ ಮಾಡಿಕೊಡಲಿವೆ ಎಂಬ ವಿಶ್ವಾಸವನ್ನು ರಾಜ್ಯಪಾಲರು ವ್ಯಕ್ತಪಡಿಸಿದರು.

ನಮ್ಮ ಬೀಜಗಳು ನಮ್ಮ ಪರಂಪರೆ, ನಮ್ಮ ಜೀವವೈವಿಧ್ಯ ನಮ್ಮ ಶಕ್ತಿ ಮತ್ತು ಅದರ ಸುಸ್ಥಿರ ಬಳಕೆಯೇ ನಮ್ಮ ಭವಿಷ್ಯದ ಸಾಧ್ಯತೆ”. ಸಸ್ಯ ತಳಿ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

ಈ ವಿಚಾರ ಸಂಕಿರಣವು ಹವಾಮಾನ ಬದಲಾವಣೆ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಹಾಗೂ ಜೀವವೈವಿಧ್ಯದ ಸಂರಕ್ಷಣೆ ಎಂಬ ಜಾಗತಿಕ ಸವಾಲುಗಳ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾದ ವಿಷಯವನ್ನು ಚರ್ಚೆಗೆ ತಂದಿದ್ದು, ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು, ರೈತರು ಮತ್ತು ವಿವಿಧ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿರುವುದಕ್ಕಾಗಿ ಆಯೋಜಕರಿಗೆ ರಾಜ್ಯಪಾಲರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಸ್ಯ ತಳಿ ಸಂಪನ್ಮೂಲ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ. ಆರ್.ಎಸ್. ಪರೋಡಾ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕರಾದ ಡಾ. ಡಿ.ಕೆ. ಯಾದವ್, ಐಎಸ್‌ಪಿಜಿಆರ್‌ನ ಪ್ರಧಾನ ಕಾರ್ಯದರ್ಶಿ ಡಾ. ಅನುರಾಧ ಅಗರ್ವಾಲ್, ICAR-IIHR ನಿರ್ದೇಶಕರಾದ ಡಾ. ತುಸಾರ್ ಕಾಂತಿ ಬೆಹೆರಾ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಹಿರಿಯ ವಿಜ್ಞಾನಿಗಳು, ಕೃಷಿ ಮತ್ತು ತೋಟಗಾರಿಕೆ ತಜ್ಞರು, ಸಂಶೋಧಕರು, ಶಿಕ್ಷಣ ತಜ್ಞರು ಹಾಗೂ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.


Share

You cannot copy content of this page