ಸಮಗ್ರ ಸುದ್ದಿ

ಇ-ಕೆವೈಸಿಗೆ ₹500 ಪಡೆದ ಆರೋಪ: ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದು| ಸಾರ್ವಜನಿಕರಿಂದ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಕೆ

Share

ಬೆಂಗಳೂರು: ಪಡಿತರ ಚೀಟಿದಾರರೊಬ್ಬರಿಂದ ಇ-ಕೆವೈಸಿ ಮಾಡಿಸಲು ₹500 ಹಣ ಪಡೆದ ಆರೋಪ ಹಾಗೂ ನ್ಯಾಯಬೆಲೆ ಅಂಗಡಿಯ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ವಲಯದ ಚಂದ್ರಪ್ಪನಗರ ಆರ್‌ಸಿಎಚ್‌ಎಸ್‌ನ ನ್ಯಾಯಬೆಲೆ ಅಂಗಡಿ ಸಂಖ್ಯೆ BLS-272ರ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ.‌

ಸದರಿ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ಅಕ್ಟೋಬರ್ 2 ರಂದು ಬಸವರಾಜಸ್ವಾಮಿ ಎಂಬುವವರ ಈ- ಕೆವೈಸಿ ಮಾಡಲು ₹500 ಹಣವನ್ನು ಫೋನ್‌- ಪೇ ಮೂಲಕ ಪಡೆದುಕೊಂಡಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ಆಹಾರ ಮತ್ತು ನಾಗರೀಕ‌ ಸರಬರಾಜು ಇಲಾಖೆ‌ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ಪರೀಶಿಲಿಸಿದಾಗ ಆರೋಪ ದೃಢಪಟ್ಟಿತ್ತು.

ಪರಿಶೀಲನೆ ವೇಳೆ ದರಪಟ್ಟಿ, ದಾಸ್ತಾನು ಫಲಕ ಆಹಾರ ಧಾನ್ಯಗಳ ಮಾದರಿಗಳನ್ನು ಪ್ರದರ್ಶಿಸಿರಲಿಲ್ಲ. ತನಿಖಾ ಪುಸ್ತಕ ಇಟ್ಟಿರಲಿಲ್ಲ. ಅಂಗಡಿ ಮಳಿಗೆಯಲ್ಲಿ ಸ್ವಚ್ಛತೆ ಕಾಪಾಡಿರಲಿಲ್ಲ.
ಸುಮಾರು 3.75 ಕ್ವಿಂಟಾಲ್ ರಾಗಿ ದಾಸ್ತಾನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿರಲಿಲ್ಲ. ಅಂಗಡಿಯ ಸೀಲ್ ಸೇರಿದಂತೆ ಅಗತ್ಯ ನಿಯಮಗಳನ್ನು ಪಾಲಿಸಿರಲಿಲ್ಲ.

ಅಕ್ರಮ‌ಹಣ ಸ್ವೀಕಾರ, ನಿಯಮಗಳ ಉಲ್ಲಂಘನೆ‌ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿದ್ದರೂ, ನ್ಯಾಯಬೆಲೆ ಅಂಗಡಿಯಿಂದ ಸಮರ್ಪಕ ಲಿಖಿತ ಸಮಜಾಯಿಷಿ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ-2016ರ ನಿಯಮಗಳಡಿ ವಿಚಾರಣೆ ಕಾಯ್ದಿರಿಸಿ, ನ್ಯಾಯಬೆಲೆ ಅಂಗಡಿ ಪರವಾನಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.

ಈ- ಕೆವೈಸಿ ಮಾಡಿಕೊಡಲು ಪಡಿತರ ಚೀಟಿದಾರರಿಂದ ನ್ಯಾಯಬೆಲೆ ಅಂಗಡಿಯವರು ಹಣ ಪಡೆಯುತ್ತಿರುವ ಆರೋಪಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಆಹಾರ, ನಾಗರೀಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಿಜ್ವಾನ್ ಅರ್ಷದ್ ಅವರು ಇಂತಹ ದೂರುಗಳು ಬಂದರೆ ತಕ್ಣಣವೇ ಅಂತಹ ಅಂಗಡಿಗಳ ಪರವಾನಿಗೆ ರದ್ದಯಪಡಿಸುವುದರ ಜೊತೆಗೆ ಕಾನೂನು ಕ್ಕಮ‌ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.


Share

You cannot copy content of this page