ಬೆಂಗಳೂರು: ಜಯನಗರದಲ್ಲಿರುವ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ ನವೆಂಬರ್ ತಿಂಗಳಿನಲ್ಲಿ ಪೂರ್ತಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ.
ಪರಮ್ ಸೈನ್ಸ್ ಕೇಂದ್ರಕ್ಕೆ ಭೇಟಿ ನೀಡುವ ಎಲ್ಲ ಸಂದರ್ಶಕರಿಗೆ ಗ್ಯಾಲರಿಯಲ್ಲಿನ ವಿಜ್ಞಾನದ ಕೌತುಕಗಳನ್ನು ಕನ್ನಡ ಭಾಷೆಯಲ್ಲಿಯೇ ಮನಮುಟ್ಟುವಂತೆ ವಿವರಿಸಲಾಗುತ್ತದೆ. ವಿಜ್ಞಾನದ ವಿಷಯಗಳನ್ನು ಹೆಚ್ಚು ಆಕರ್ಷಕವಾಗಿಸಲು ಸಿಬ್ಬಂದಿ ವರ್ಗವು ಸಂದರ್ಶಕರೊಂದಿಗೆ ಸಂವಾದ ನಡೆಸಲಿದೆ.
‘ನೀವೇನಾದರೂ ಕನ್ನಡದಲ್ಲಿ ಒಂದು ನುಡಿಗಟ್ಟು ಹೇಳಿದರೆ, ಅದರ ಹಿಂದಿನ ವಿಜ್ಞಾನದ ಹಿನ್ನೆಲೆ ನಿಮಗೆ ಗೊತ್ತೇ?’ ಅಥವಾ ‘ಕರ್ನಾಟಕದಲ್ಲಿ ಬಳಕೆಯಲ್ಲಿರುವ ಯಾವುದಾದರೂ ತಂತ್ರಜ್ಞಾನದ ಹಿಂದಿನ ವಿಜ್ಞಾನವೇನು?’ ಎಂದು ಪ್ರಶ್ನಿಸುವ ಮೂಲಕ ಅವರನ್ನು ವಿಷಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಈ ರೀತಿಯಾಗಿ ವಿಜ್ಞಾನವನ್ನು ಕನ್ನಡದೊಂದಿಗೆ ಬೆಸೆಯುವ ಪ್ರಯತ್ನ ನಡೆಯಲಿದೆ.
*ವಾರಾಂತ್ಯದಲ್ಲಿ ವಿಜ್ಞಾನದ ವಿಶೇಷ ಕಾರ್ಯಾಗಾರಗಳು*!
ಕೇವಲ ಗ್ಯಾಲರಿ ವಿವರಣೆಗೆ ಸೀಮಿತವಾಗದೇ, ಮಕ್ಕಳು ಹಾಗೂ ಸಂದರ್ಶಕರಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಹೆಚ್ಚಿಸಲು ಪ್ರತಿ ಶನಿವಾರ ಮತ್ತು ಭಾನುವಾರ ಎರಡು ಮುಖ್ಯ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಇದಕ್ಕೆ ಹಾಜರಾಗಲು ‘ಬುಕ್ ಮೈ ಶೋ’ ಮೂಲಕ ಟಿಕೆಟ್ ಕಾಯ್ದಿರಿಸಬಹುದು.
- *ಟೆಕ್ಸ್‌ಟೈಲ್ಸ್ ವರ್ಕ್‌ಶಾಪ್ (ಬಟ್ಟೆಗಳಿಗೆ ಕಲರಿಂಗ್)*:
ಈ ಕಾರ್ಯಾಗಾರದಲ್ಲಿ ಬಟ್ಟೆಗಳಿಗೆ ವಿಭಿನ್ನ ಬಣ್ಣಗಳನ್ನು ನೀಡುವುದು (ಕಲರ್ ಪೇಂಟ್ ಮಾಡುವುದು) ಸೇರಿದಂತೆ, ಸಿಲ್ಕ್‌ನಂತಹ ಮೆಟೀರಿಯಲ್‌ಗಳು ಎಲ್ಲಿಂದ ಬಂದಿವೆ? ಅವುಗಳ ಹಿಂದಿನ ವಿಜ್ಞಾನವೇನು? ಎಂಬುದನ್ನು ಕನ್ನಡದಲ್ಲಿ ಪ್ರಾಯೋಗಿಕವಾಗಿ ವಿವರಿಸಲಾಗುತ್ತದೆ.
- *ಸೈನ್ಸ್ ಆಫ್ ಸೌಂಡ್ (ಧ್ವನಿಯ ವಿಜ್ಞಾನ)*:
ಈ ಕಾರ್ಯಕ್ರಮವು ಕನ್ನಡ ಭಾಷೆಯನ್ನು ವಿಜ್ಞಾನದೊಂದಿಗೆ ವಿಶಿಷ್ಟವಾಗಿ ಸಂಯೋಜಿಸುತ್ತದೆ. ಕನ್ನಡದಲ್ಲಿನ ಭಾಷೆಗಳ ವ್ಯತ್ಯಾಸಗಳು ಮತ್ತು ಬರೆಯುವ ಶೈಲಿಯ ವೈಜ್ಞಾನಿಕ ಹಿನ್ನೆಲೆಯನ್ನು ಧ್ವನಿ ವಿಜ್ಞಾನಕ್ಕೆ ಜೋಡಿಸಿ ಕಲಿಸಿಕೊಡಲಾಗುತ್ತದೆ.
ಈ ಕಾರ್ಯಾಗಾರಗಳು ಪ್ರತಿ ವಾರಾಂತ್ಯದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯುತ್ತವೆ. ಒಂದು ವಾರ ಕಾರ್ಯಕ್ರಮ ತಪ್ಪಿಸಿಕೊಂಡವರು ಮುಂದಿನ ವಾರವೂ ಇದೇ ಕಾರ್ಯಾಗಾರಗಳಿಗೆ ಹಾಜರಾಗಲು ಇದು ಅನುಕೂಲ ಕಲ್ಪಿಸುತ್ತದೆ.
