ಮೈಸೂರು:ಇಂದು ಬದುಕಿನ ಎಲ್ಲಾ ಆಯಾಮಗಳನ್ನು ಆವರಿಸಿರುವ ಡಿಜಿಟಲ್ ಹಾಗೂ ಕಂಪ್ಯೂಟರ್ ಮಾಧ್ಯಮ ಪುಸ್ತಕ ಸಂಸ್ಕೃತಿಗೆ ಮಾರಕವಾಗಿದೆ ಎಂದು ಹಿರಿಯ ಸಾಹಿತಿ ಚಿಂತಕ ಡಾ. ಕೆ ಮರಳು ಸಿದ್ದಪ್ಪ ಹೇಳಿದ್ದಾರೆ.
ಕೆಲವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರದ 2025 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ದತ್ತಿ ಪ್ರಶಸ್ತಿಗಳ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪುಸ್ತಕ ಸಂಸ್ಕೃತಿ ಇಂದು ಮರೆಯಾಗುತ್ತಿರುವುದಕ್ಕೆ ಕಾರಣ ಈ ಆಧುನಿಕ ಮಾಧ್ಯಮಗಳು, ಹಿಂದೆ ಪುಸ್ತಕಗಳ ಬಹು ದೊಡ್ಡ ಸಂಗ್ರಹವೇ ಮನೆಗಳಲ್ಲಿ ಇರುತ್ತಿತ್ತು ಆದರೆ ಇಂದು ನಮ್ಮ ಯುವಸಮೂಹದ ಕೈಯಲ್ಲಿ ಒಂದು ಕಿಂಡಲ್ ಇದ್ದರೆ ಅದರಲ್ಲಿ ಸಾವಿರಾರು ಪುಸ್ತಕ ಓದಬಹುದಾಗಿದೆ.
ಇದು ಪುಸ್ತಕ ಮುದ್ರಣ, ಪ್ರಕಾಶಕರು ಹಾಗೂ ಲೇಖಕರಿಗೆ ಆಗುತ್ತಿರುವ ಬಹು ದೊಡ್ಡ ನಷ್ಟ ಎಂದು ಅವರು ಹೇಳಿದರು.
ಪುಸ್ತಕ ಸಂಸ್ಕೃತಿಯನ್ನು ಕಾಪಾಡಬೇಕಾದ ಜವಾಬ್ದಾರಿ ಮಾಧ್ಯಮಗಳು ಸೇರಿದಂತೆ ನಮ್ಮೆಲ್ಲರ ಮೇಲಿದೆ ಆ ದಿಸೆಯಲ್ಲಿ ನಮ್ಮ ಚಿಂತನೆ ನಡೆಯಬೇಕು ಎಂದು ಅವರು ಹೇಳಿದರು. ಪುಸ್ತಕ ಸಂಸ್ಕೃತಿ ಕಾಪಾಡುವಲ್ಲಿ ಗ್ರಂಥಪಾಲಕರ ಪಾತ್ರ ಬಹು ದೊಡ್ಡದು ಪ್ರಾಧಿಕಾರ ಗ್ರಂಥಪಾಲಕರಿಗೂ ಒಂದು ಪ್ರಶಸ್ತಿ ನೀಡುವುದು ಸೂಕ್ತ ಎಂದು ಅವರು ತಿಳಿಸಿದರು.
ಪ್ರಾಧಿಕಾರದ ಪ್ರಶಸ್ತಿ ಪುರಸ್ಕೃತರ ಕಿರು ಹೊತ್ತಿಗೆ ಹೊನ್ನ ಕಳಸ ಬಿಡುಗಡೆ ಮಾಡಿದ ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ. ರಾಜಪ್ಪ ದಳವಾಯಿ ಅವರು ಮಾತನಾಡಿ ಕನ್ನಡ ಪುಸ್ತಕ ಸಂಸ್ಕೃತಿಗೆ ಬಹು ದೊಡ್ಡ ಇತಿಹಾಸವಿದೆ ನಮ್ಮ ಚರಿತ್ರೆ ಮುಂದಿನ ಪೀಳಿಗೆಗೆ ತಲುಪಿಸಲು ಹಾಗೂ ಹಿಂದಿನ ಇತಿಹಾಸ ತಿಳಿಯಲು ಪುಸ್ತಕಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಪುಸ್ತಕಗಳು ನೂರಾರು ಕುಟುಂಬಗಳನ್ನು ಸಲಹುತ್ತಿವೆ ,ಪುಸ್ತಕೋದ್ಯಮವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ ಎನ್ ಅವರು ಮಾತನಾಡಿ ನಾನು ಲೋಕಸೇವಾ ಆಯೋಗದಲ್ಲಿ ಐಎಎಸ್ ಪರೀಕ್ಷೆ ಬರೆಯುವಾಗ ಐಚ್ಚಿಕ ಕನ್ನಡ ವಿಷಯವನ್ನು ತೆಗೆದುಕೊಂಡಿದ್ದೆ ಹಾಗಾಗಿ ಕನ್ನಡ ಸಾಹಿತ್ಯದ ಹಿರಿಮೆ, ಕನ್ನಡ ಪುಸ್ತಕಗಳ ಗರಿಮೆ, ನನಗೆ ತಿಳಿದಿದೆ ಎಂದರು.
ಕನ್ನಡ ಸಾಹಿತ್ಯದ ಪರಂಪರೆಯನ್ನು ಕಾಪಾಡುವ ದಿಸೆಯಲ್ಲಿ ಕರ್ನಾಟಕ ಸರ್ಕಾರ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಅವುಗಳನ್ನು ತೆಗೆದುಕೊಳ್ಳಲು ಸಿದ್ದರಿದ್ದೇವೆ ಭಾಷೆ ಮತ್ತು ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ಎನ್ ಕೆ ಅವರು ಮಾತನಾಡಿ ಕನ್ನಡ ಪುಸ್ತಕ ಸಂಸ್ಕೃತಿಗೆ ಮೈಸೂರು ವಿಶ್ವವಿದ್ಯಾಲಯ ಬಹಳ ದೊಡ್ಡ ಕೊಡುಗೆ ನೀಡಿದೆ ನಮ್ಮ ಪ್ರಸಾರಂಗದ ಪುಸ್ತಕಗಳು ಕನ್ನಡ ಪುಸ್ತಕ ಲೋಕಕ್ಕೆ ಮೌಲಿಕವಾದ ಕೊಡುಗೆ ನೀಡಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಹಲವಾರು ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಕನ್ನಡ ಪುಸ್ತಕ ಲೋಕಕ್ಕೆ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ, ಅಂಗಳದಲ್ಲಿ ತಿಂಗಳ ಪುಸ್ತಕ ಮುಂತಾದ ಯೋಜನೆಗಳ ಮೂಲಕ ಪುಸ್ತಕ ಸಂಸ್ಕೃತಿಗೆ ಚೈತನ್ಯ ತುಂಬಲು ಪ್ರಯತ್ನಿಸುತ್ತಿದ್ದೇವೆ ಆ ದಿಸೆಯಲ್ಲಿ ಈ ಯೋಜನೆಯಡಿ ನಾಲ್ಕು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ ಎಂದರು.
ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಅವರು ಪ್ರಾಸ್ತಾವಿಕ ಮಾತನಾಡಿದರು.
ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ ಬರಗೂರು ಸ್ವಾಗತಿಸಿದರು. ಬಿ ಎಚ್ ನಿರಗುಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಲಕ್ಷ್ಮಣ ಕೊಡಸೆ ವಂದನಾರ್ಪಣೆ ಸಲ್ಲಿಸಿದರು.
ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲಾ ಮಠಪತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದತ್ತಿ ಬಹುಮಾನ ನೀಡಿದ ಡಾ.ಎಂ ಜಿ ಆರ್ ಅರಸ್ ಹಾಗೂ ಜಾನಪದ ಗಾಯಕ ಶಿವರುದ್ರಪ್ಪ ಜೋಗಿ ಮತ್ತು ಕವಿತೆ ಹಾಡಿ ಗಿಡ ಪಡೆಯಿರಿ ಕಾರ್ಯಕ್ರಮದ ಅಪಾಯೋಜಕರಾದ ಸಂತೋಷ್ ಮಡೆನೂರು ಅವರನ್ನು ಸನ್ಮಾನಿಸಲಾಯಿತು.
