ಬೆಂಗಳೂರು:ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ಶನಿವಾರ ಲೋಕಭವನಕ್ಕೆ ತೆರಳಿ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಗೌರವಪೂರ್ವಕವಾಗಿ ಭೇಟಿ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರ ಧರ್ಮಪತ್ಮಿ ಹಾಗೂ ಮಾಜಿ ಶಾಸಕಿ ಆಗಿರುವ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಹಾಜರಿದ್ದರು.
ರಾಜ್ಯಕ್ಕೆ ನೂತನ ರಾಜ್ಯಪಾಲರಾಗಿ ಬಂದಿರುವ ಡಾ. ಸುಧಾ ಯಾದವ್ ಅವರನ್ನು ಅಭಿನಂದಿಸಿದ ಕೇಂದ್ರ ಸಚಿವರು, ತಮ್ಮ ಮೂಲಕ ರಾಜ್ಯದಲ್ಲಿ ಸಂಸದೀಯ ಪರಂಪರೆಯು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸಿದರು. ತಮ್ಮಿಂದ ರಾಜ್ಯದ ಅಭಿವೃದ್ಧಿಗೆ ಅಗತ್ಯ ಮಾರ್ಗದರ್ಶನ ಸಿಗುವಂತೆ ಆಗಲಿ ಮತ್ತು ತಮಗೆ ಜೆಡಿಎಸ್ ಪಕ್ಷದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದರು.
ತದನಂತರ ಲೋಕಭವನದ ಹೊರಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು; ರಾಜ್ಯಕ್ಕೆ ರಾಜ್ಯಪಾಲರಾಗಿ ಬಂದ ಎರಡನೇ ಮಹಿಳೆ ಶ್ರೀಮತಿ ಸುಧಾ ಯಾದವ್ ಅವರಾಗಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಆಶಿಸಿದರು.
ಒಂದು ಕಾಲದಲ್ಲಿ ಅತ್ಯುತ್ತಮ ಆಡಳಿತದ ಮೂಲಕ ದೇಶಕ್ಕೆ ಮಾದರಿಯಾಗಿದ್ದ ಈ ರಾಜ್ಯವು ಪ್ರಸ್ತುತ ದಾರಿ ತಪ್ಪುತ್ತಿದ್ದು, ಅದನ್ನು ಸರಿಪಡಿಸಿ ಉತ್ತಮ ರಾಜ್ಯವನ್ನಾಗಿ ಮರುಸ್ಥಾಪಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ರಾಜ್ಯಪಾಲರ ಪತಿ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಅಮರ ವೀರರಾಗಿದ್ದು, ಅವರಿಗೆ ದೇಶದ ಬಗ್ಗೆ ಅಪಾರ ಭಕ್ತಿ ಮತ್ತು ಗೌರವವಿದೆ ಹಾಗೂ ಅವರಿಗೆ ಕಾರ್ಯನಿರ್ವಹಿಸಲು ಭಗವಂತ ಹೆಚ್ಚಿನ ಶಕ್ತಿ ನೀಡಲಿ ಎಂದು ತಾವು ಪ್ರಾರ್ಥಿಸಿರುವುದಾಗಿ ತಿಳಿಸಿದರು ಸಚಿವರು.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಕೆಟ್ಟ ಘಟನೆಗಳು ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಮಾನ್ಯ ರಾಜ್ಯಪಾಲರ ಗಮನ ಸೆಳೆಯಲಾಯಿತು. ಅವರು ಹೊಸದಾಗಿ ರಾಜ್ಯಕ್ಕೆ ಬಂದಿದ್ದು, ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿಯಾಗಿ ವಿವರವಾಗಿ ಚರ್ಚಿಸಿ ದೂರು ನೀಡಲಾಗುವುದು ಎಂದು ಸಚಿವರು ಹೇಳಿದರು.
ಕರ್ನಾಟಕದ ಬಗ್ಗೆ ರಾಜ್ಯಪಾಲರಿಗೆ ಅಪಾರ ಅಭಿಮಾನವಿದೆ. ರಾಜ್ಯದ ಕಲೆ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಒಟ್ಟಾರೆ ಪರಂಪರೆಯ ಬಗ್ಗೆ ಅವರಿಗೆ ಮಾಹಿತಿ ಇದೆ. ಅವರ ಸಾಂವಿಧಾನಿಕ ನೇತೃತ್ವದಲ್ಲಿ ಕರ್ನಾಟಕಕ್ಕೆ ಒಳ್ಳೆಯದಾಗಲಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
