ಸಮಗ್ರ ಸುದ್ದಿ

ಮೈಸೂರು ದಸರಾ : ಯಶಸ್ವಿಯಾಗಿ ನಡೆದ ಏರ್ ಶೋ

Share

ಮೈಸೂರು:ಲೋಹದ ಹಕ್ಕಿಗಳ ಕಲರವ ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಪ್ರವಾಸಿಗರಿಗೆ ಮತ್ತಷ್ಟು ಮನರಂಜನೆ ನೀಡಲು ಯಶಸ್ವಿಯಾಗಿದೆ.

ನಗರದ ಬನ್ನಿಮಂಟಪದ ಪಂಜಿನ ಕವಯತು ಮೈದಾನದಲ್ಲಿ ನಿನ್ನೆ ಹವಾಮಾನ ವೈಪರೀತ್ಯ ಹಿನ್ನೆಲೆ ಏರ್ ಶೋ ಅರ್ಧಕ್ಕೆ ಮೊಟಕುಗೊಂಡಿತ್ತು, ಈ ಹಿನ್ನೆಲೆ ಇಂದು ವಾಯು ಪಡೆಯ ಸಿಬ್ಬಂದಿಯಿಂದ ಪೂರ್ಣ ಪ್ರಮಾಣದ ಪ್ರದರ್ಶನ ಮಾಡಲಾಯಿತು.

ಮೈಸೂರು ದಸರಾ ಮಹೋತ್ಸವದ ಶುಭ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್’ ಏರೋಬ್ಯಾಟಿಕ್ ತಂಡವು ಮೈಸೂರಿನಲ್ಲಿ ಗಗನದಲ್ಲಿ ರೋಮಾಂಚಕ ವೈಮಾನಿಕ ಪ್ರದರ್ಶನವನ್ನು ನೀಡಿದೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತಂಡದ ವಿಂಗ್ ಕಮಾಂಡರ್ ಅಭಿಮನ್ಯು ತ್ಯಾಗಿ ಅವರು, ಮೈಸೂರಿನ ಸಾರ್ವಜನಿಕರ ಮುಂದೆ ಈ ಅತ್ಯಾಕರ್ಷಕ ಸಾಹಸ ಪ್ರದರ್ಶಿಸಲು ಅತ್ಯಂತ ಸಂತಸವಾಗುತ್ತಿದೆ ಎಂದು ತಿಳಿಸಿದರು.

​ವಿಶ್ವದ ಪ್ರಮುಖ ನಾಲ್ಕು ವೈಮಾನಿಕ ಸಾಹಸ ತಂಡಗಳಲ್ಲಿ ಒಂದಾಗಿರುವ ಸೂರ್ಯಕಿರಣ್, ಇಡೀ ಏಷ್ಯಾ ಖಂಡದಲ್ಲೇ ಒಂಬತ್ತು ಯುದ್ಧ ವಿಮಾನಗಳೊಂದಿಗೆ ಪ್ರದರ್ಶನ ನೀಡುವ ಏಕೈಕ ತಂಡವಾಗಿದೆ. ಕಳೆದ 25 ವರ್ಷಗಳಲ್ಲಿ ಈ ತಂಡವು 800ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ ಎಂದು ಅವರು ಮಾಹಿತಿ ನೀಡಿದರು.

​ಪ್ರದರ್ಶನದ ಕುರಿತು ಹೆಚ್ಚಿನ ವಿವರ ನೀಡಿದ ಅವರು, ಹೆಚ್.ಎ.ಎಲ್ ನಿರ್ಮಿತ ‘ಹಾಕ್ ಎಂ.ಕೆ-132’ ವಿಮಾನಗಳನ್ನು ಈ ಸಾಹಸಕ್ಕಾಗಿ ವಿಶೇಷವಾಗಿ ಮಾರ್ಪಡಿಸಲಾಗಿದ್ದು, ಆಕಾಶದಲ್ಲಿ ತ್ರಿವರ್ಣದ ಹೊಗೆಯನ್ನು ಸೂಸುವ ವ್ಯವಸ್ಥೆ ಮಾಡಲಾಗಿದೆ. ಪ್ರದರ್ಶನದ ವೇಳೆ ವಿಮಾನಗಳು ಡಿ.ಎನ್.ಎ, ಹಾರ್ಟ್, ಫಲ್ಕ್ರಮ್ ಹಾಗೂ ಆರೋ ಮಾದರಿಯ ಸಾಹಸ ಕಲಾಕೃತಿಗಳನ್ನು ರಚಿಸಿ ನೋಟಕರ ಮನಸೆಳೆದವು.

​ತಂಡವು ಕರ್ನಾಟಕದ ಬೀದರ್ ವಾಯುಪಡೆ ನೆಲೆಯಲ್ಲಿ ತರಬೇತಿ ಪಡೆಯುತ್ತಿದ್ದು, ಯುವಜನರಲ್ಲಿ ದೇಶಭಕ್ತಿ ಮೂಡಿಸುವುದು ಹಾಗೂ ಸಶಸ್ತ್ರ ಪಡೆಗೆ ಸೇರಲು ಪ್ರೇರೇಪಿಸುವುದು ಈ ಪ್ರದರ್ಶನಗಳ ಮುಖ್ಯ ಉದ್ದೇಶವಾಗಿದೆ ಎಂದು ವಿಂಗ್ ಕಮಾಂಡರ್ ಅಭಿಮನ್ಯು ತ್ಯಾಗಿ ಹೇಳಿದರು.


Share

You cannot copy content of this page