ಸಮಗ್ರ ಸುದ್ದಿ

ಬೆಂಗಳೂರಿಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆ ಸೃಜನೆ ಪ್ರಸ್ತಾವನೆಯಿಲ್ಲ: ಡಾ.ಜಿ.ಪರಮೇಶ್ವರ್

Share

ಬೆಳಗಾವಿ : ಬೆಂಗಳೂರು ಪೊಲೀಸ್ ಘಟಕವನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿ ಹಾಲಿ ಇರುವ ಪೊಲೀಸ್ ಆಯುಕ್ತರ ಹುದ್ದೆಯ ಜೊತೆಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಜಿಸಲು ಪ್ರಸ್ತುತ ಯಾವುದೇ ಪ್ರಸ್ತಾವನೆಯು ಪರಿಶೀಲನೆಯಲ್ಲಿರುವುದಿಲ್ಲ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಕೆ.ಗೋವಿಂದರಾಜ್ ಅವರ ಗಮನ ಸೆಳೆಯುವ ಸೂಚನೆಗೆ ಸಚಿವರು ಲಿಖಿತ ಉತ್ತರ ನೀಡಿದರು.

ಸರ್ಕಾರವು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ -2024 ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶ ಎಂದು ಗುರುತಿಸಿ 2025ರ ಮೇ 15ರಿಂದ ಜಾರಿಗೊಳಿಸಿ, ಇದರ ಅಡಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಉತ್ತರ ಎಂದು ಹೊಸದಾಗಿ ಐದು ನಗರ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯಾ ಸಾಂದ್ರತೆ, ಉತ್ಪತ್ತಿಯಾಗುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗ ಪ್ರಮಾಣ, ಆರ್ಥಿಕ ಪ್ರಾಮುಖ್ಯತೆಯನ್ನು ಪರಿಗಣಿಸಿ ಉತ್ತಮ ಹಾಗೂ ಪರಿಣಾಮಕಾರಿ ಆಡಳಿತಕ್ಕಾಗಿ ಈ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಇದೊಂದು ಸ್ತುತ್ಯಾರ್ಹ ಕ್ರಮವಾಗಿದೆ ಎಂದರು.

ಇದೇ ರೀತಿ ಉದ್ಯೋಗ, ಶಿಕ್ಷಣ, ವ್ಯಾಪಾರಕ್ಕೆಂದು ನಗರಕ್ಕೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಗರೀಕರಣದ ಜೊತೆಗೆ, ಅಪರಾಧ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿವೆ. ದರೋಡೆ, ಮನೆಗಳ್ಳತನ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ, ಸೈಬರ್ ಅಪರಾಧ ಪ್ರಕರಣಗಳು, ದ್ವಿಚಕ್ರ ವಾಹನಗಳ ಕಳ್ಳತನ, ರಸ್ತೆ ಅಪಘಾತ ಪ್ರಕರಣಗಳು, ವೀಲಿಂಗ್ ಹಾವಳಿ ಮುಂತಾದವು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ.

ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವುದು, ತನಿಖೆಯಲ್ಲಿ ಗುಣಮಟ್ಟ ಹೆಚ್ಚಿಸುವುದು ಹಾಗೂ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿ ಕ್ರಮ ಕೈಗೊಳ್ಳಲು ನೆರವಾಗಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮರುವಿಂಗಡಿಸಿದಂತೆ, ಬೆಂಗಳೂರು ಪೊಲೀಸ್ ಕಮೀಷನರೇಟನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿ, ಹಾಲಿ ಇರುವ ಪೊಲೀಸ್ ಆಯುಕ್ತರ ಜೊತೆಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಜಿಸಿ, ಇದರನುಸಾರ ಸಂಬಂಧಿತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವ ತುರ್ತು ಹಾಗೂ ಸಾರ್ವಜನಿಕ ಮಹತ್ವದ ಕುರಿತು ಸದಸ್ಯರಾದ ಡಾ.ಕೆ.ಗೋವಿಂದರಾಜ್ ಅವರು ಗೃಹ ಸಚಿವರ ಗಮನ ಸೆಳೆದಿದ್ದರು.


Share

You cannot copy content of this page