ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿಗೆ ಅರಮನೆ ನಗರಿ ಸಜ್ಜಾಗಿದೆ. ನಾಳೆ ನಡೆಯಲಿರುವ ಐತಿಹಾಸಿಕ ಜಂಬೂಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಲು ಕ್ಯಾಪ್ಟನ್ ಪ್ರಶಾಂತ ಆನೆ ಸಿದ್ಧವಾಗಿದ್ದಾನೆ. ಇದೇ ಮೊದಲ ಬಾರಿಗೆ ಪ್ರಶಾಂತ ಆನೆ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದೆ.
ಜಂಬೂಸವಾರಿಗೂ ಮುನ್ನ ಮಧ್ಯಾಹ್ನ 1:36 ರಿಂದ 1:56 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪೂಜೆ ನೆರವೇರಿಸಲಿದ್ದಾರೆ, ನಂತರ ಸಂಜೆ 4:10 ರಿಂದ 4: 35 ರವರೆಗೆ ಸಲ್ಲುವ ಮೀನಾ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಇತರೆ ಗಣ್ಯರಿಂದ 750 ಕೆಜಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಲಿದೆ.
ಈ ಬಾರಿ ಕ್ಯಾಪ್ಟನ್ ಪ್ರಶಾಂತ ಆನೆಗೆ ಕಾವೇರಿ ಮತ್ತು ರೂಪ ಆನೆಗಳು ಕುಮ್ಕಿ ಆನೆಗಳಾಗಿ ಸಾಥ್ ನೀಡಲಿವೆ. ಕಳೆದ ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು ನಿಶಾನೆ ಆನೆಯಾಗಿ ಸಾಗಲಿದ್ದಾನೆ. ಗೋಪಿ ನೌಪತ್ ಆನೆಯ ಜವಾಬ್ದಾರಿ ನಿರ್ವಹಿಸಲಿದ್ದು, ಉಳಿದ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ನಂದಿಧ್ವಜ ಪೂಜೆಯ ಬಳಿಕ ಜಂಬೂಸವಾರಿ ಮೆರವಣಿಗೆಯಲ್ಲಿ 53 ಸ್ತಬ್ಧಚಿತ್ರಗಳು ಸಾಗಲಿವೆ. ಕರ್ನಾಟಕದ 31 ಜಿಲ್ಲೆಗಳ ಸ್ತಬ್ಧಚಿತ್ರಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ. ವಿವಿಧ ಜಿಲ್ಲೆಗಳ 50 ಕಲಾತಂಡಗಳು ಭಾಗವಹಿಸಲಿದ್ದು, ಕೀಲುಕುದುರೆ, ಗೊರವರ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ ಹಾಗೂ ಹಾಡಿ ಮಕ್ಕಳ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಪ್ರದರ್ಶನಗಳು ಜನರನ್ನು ರಂಜಿಸಲಿವೆ.
ಈ ನಡುವೆ ಕನ್ನಡ ಚಲನಚಿತ್ರದ ನಟ-ನಟಿಯರು ಜಂಬೂ ಸವಾರಿಯಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳಲಿದ್ದಾರೆ.
ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅರಮನೆಯ ಸುತ್ತಮುತ್ತ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುಮಾರು 6719ಮಂದಿ ಪೊಲೀಸ್ ಸಿಬ್ಬಂದಿ ಮತ್ತು 1,500 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲು ಸಿದ್ಧತೆ ಮಾಡಲಾಗಿದೆ. ಇಬ್ಬರು ಡಿಐಜಿಗಳು, 27 ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಹೆಚ್ಚುವರಿಯಾಗಿ ಸಿಎಆರ್, ಕೆಎಸ್ಆರ್ಪಿ, ಎಎಸ್ಸಿ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸೇರಿದಂತೆ ವಿವಿಧ ವಿಶೇಷ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ.
ಮೆರವಣಿಗೆ ಸಾಗುವ ಮಾರ್ಗದಲ್ಲಿ 150 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅರಮನೆ ಪ್ರವೇಶ ದ್ವಾರಗಳಲ್ಲಿ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಮತ್ತು ಸಾರ್ವಜನಿಕರ ಪ್ರವೇಶದ ವೇಳೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅರಮನೆ ಅಂಗಳದಲ್ಲಿ ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಸುಮಾರು 48ಸಾವಿರಕ್ಕೂ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, ಐತಿಹಾಸಿಕ ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಲು ಸಾಂಸ್ಕೃತಿಕ ಕಾರ್ಯಕ್ರಮಗಳು, ಪೊಲೀಸ್ ಭದ್ರತೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಭವ್ಯ ಜಂಬೂ ಸವಾರಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ಜಂಬೂ ಸವಾರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಸಂಜೆ ಮೈಸೂರು ಅರಮನೆ ಆವರಣಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಅರಮನೆ ಆವರಣದಲ್ಲಿ ಸಾರ್ವಜನಿಕರು ಹಾಗೂ ಆಹ್ವಾನಿತರಿಗೆ ಕಲ್ಪಿಸಲಾಗಿರುವ ಆಸನ ವ್ಯವಸ್ಥೆ, ಜನದಟ್ಟಣೆ ನಿಯಂತ್ರಣ ಹಾಗೂ ಜಂಬೂ ಸವಾರಿ ಸುಗಮವಾಗಿ ಸಾಗಲು ಅಳವಡಿಸಿರುವ ಬ್ಯಾರಿಕೇಡ್ಗಳು ಮತ್ತು ಗಣ್ಯರು ಹಾಗೂ ಆಹ್ವಾನಿತರಿಗೆ ಕಲ್ಪಿಸಿರುವ ವಾಹನ ನಿಲುಗಡೆ ವ್ಯವಸ್ಥೆಗಳನ್ನು ಸಚಿವರು ಖುದ್ದಾಗಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು.
ನಾಡಹಬ್ಬ ಮೈಸೂರು ದಸರಾ ವೀಕ್ಷಿಸಲು ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಜಂಬೂ ಸವಾರಿಯ ಸಂದರ್ಭದಲ್ಲಿ ಜನಸಂದಣಿ ನಿರ್ವಹಣೆ, ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮತ್ತು ಸಮನ್ವಯದೊಂದಿಗೆ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಮಣ್ಯ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
