ಮೈಸೂರು:ನಾಡ ಹಬ್ಬ ದಸರಾ ಸಂದರ್ಭದಲ್ಲಿ ದ್ವೇಷ ದೂರವಾಗಿ, ಸಾಮರಸ್ಯ ಬೆಳೆಯಬೇಕು. ಅಭಿವೃದ್ಧಿಯ ಬೆಳಕು ಪ್ರತಿ ಮನೆ ಮನೆಗೂ ತಲುಪಬೇಕು ಎಂಬುದು ನಮ್ಮ ಸಂಕಲ್ಪ. ಅನ್ಯಾಯ ಅಳಿಯಬೇಕು, ಸಮಾನತೆ ಬೆಳಗಬೇಕು. ಕಷ್ಟಗಳು ಕರಗಬೇಕು. ರೈತರು, ಯುವಕರ ಬದುಕು ಬೆಳಗಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮೈಸೂರಿನಲ್ಲಿ ನಂದಿ ಧ್ವಜ ಪೂಜೆ ಬಳಿಕ ಹಾಗೂ ಮೈಸೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
ನನ್ನ ಬದುಕಿನ ಅಮೂಲ್ಯವಾದ ಕ್ಷಣ
“ಇಂದು ನಂದಿ ಪೂಜೆ ಮಾಡಿ ದಸರಾ ಜಂಬು ಸವಾರಿಗೆ ಚಾಲನೆ ನೀಡಿದ್ದೇವೆ. ಇಂದು ನನ್ನ ಬದುಕಿನ ಅಮೂಲ್ಯವಾದ ಕ್ಷಣ. ನಾಡಿನ ಪ್ರಜಾಸೇವಕನಾಗಿ, ನಾನು ನನ್ನ ಸಹೋದ್ಯೋಗಿಗಳು ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಿದ್ದೇವೆ. ರಾಜ್ಯದ ಜನರ ಆಶೀರ್ವಾದಿಂದ ಶಕ್ತಿ ದೇವತೆ ಚಾಮುಂಡೇಶ್ವರಿ ಮೇರವಣಿಗೆಯಲ್ಲಿ ಸಾಕ್ಷಿಯಾಗುವ ಅವಕಾಶ ಸಿಕ್ಕಿದೆ. ಈ ಅವಕಾಸ ನೀಡಿದ ನಾಡಿನ ಜನತೆಗೆ ಶಾಂತಿ, ಸುಖ, ನೆಮ್ಮದಿ ಸಿಗಲಿ ಎಂದು ತಾಯಿ ಚಾಮುಂಡಿ ಪಾದಕ್ಕೆ ನಮಿಸಿ ಪ್ರಾರ್ಥಿಸುವೆ” ಎಂದರು.
“ಕೊಪ್ಪಳದ ಶ್ರೀಗಳು ದಸರಾಗೆ ಚಾಲನೆ ನೀಡಿ, ಶುಭ ಹಾರೈಸಿದ್ದಾರೆ. ರಾಜ್ಯದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಬೇಕು ಎಂದು ತಾಯಿ ಚಾಮುಂಡಿ ಬಳಿ ಪ್ರಾರ್ಥಿಸಿದ್ದೇವೆ. ಪ್ರತಿ ನಿತ್ಯ ಲಕ್ಷಾಂತರ ಜನ ಈ ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ. ತಾಯಿ ಆಶೀರ್ವಾದ ನಮ್ಮೆಲ್ಲರ ಶಕ್ತಿ, ಜನಸೇವೆಯೇ ನಮ್ಮ ಭಕ್ತಿ” ಎಂದು ಹೇಳಿದರು.
“ಇದು ಸರ್ಕಾರ ಅಥವಾ ರಾಜಮನೆತನಕ್ಕೆ ಸೇರಿದ ದಸರಾ ಮಾತ್ರವಲ್ಲ. ಪ್ರಜಾಪ್ರಭುತ್ವ ಬಂದ ಮೇಲೆ ಎಲ್ಲರ ಹಬ್ಬ. ರಾಜಮನೆತನಕ್ಕೆ ನೀಡಬೇಕಾದ ಗೌರವ ನೀಡಲಾಗುವುದು. ಕಲೆ ಸಾಹಿತ್ಯ, ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಕನ್ನಡ ನಾಡಿನ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ನೆರೆ ರಾಜ್ಯದ ಮುಖ್ಯಮಂತ್ರಿಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಿನಿಮಾ ನಟರು, ದೇಶ ಕಾಯುವ ಯೋಧರು ಭಾಗವಹಿಸಿದ್ದಾರೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ರಾಜ್ಯದ ಎಲ್ಲ ಜನರ ಮೇಲಿರಲಿ, ಎಲ್ಲರ ಬದುಕು ಹಸನಾಗಲಿ ಎಂದು ರಾಜ್ಯದ ಪ್ರಜಾಸೇವಕನಾಗಿ ಶುಭಕೋರುತ್ತೇನೆ. ಇಂದು ತಾಯಿ ಚಾಮುಂಡಿ ಹೊಸ ಆನೆ ಪ್ರಶಾಂತನ ಮೇಲೆ ಮೆರವಣಿಗೆ ಸಾಗಲಿದ್ದಾಳೆ. ಇನ್ನು ಹತ್ತಾರು ವರ್ಷಗಳ ಕಾಲ ಆ ತಾಯಿಯ ಮರವಣಿಗೆ ಮಾಡುವ ಭಾಗ್ಯ ಆ ಆನೆಗೆ ಸಿಗಲಿ” ಎಂದು ಶುಭಕೋರಿದರು.
ಎಲ್ಲಾ ರಾಜ್ಯಗಳು ಸಹೋದರರಂತೆ ಸಾಮರಸ್ಯದಲ್ಲಿರಬೇಕು
ನೆರೆ ರಾಜ್ಯಗಳ ಸಿಎಂಗಳ ಆಗಮನದಿಂದ ರಾಜ್ಯಗಳ ನಡುವಣ ಸಾಮರಸ್ಯ ವೃದ್ಧಿಯಾಗುತ್ತದೆಯೇ ಎಂದು ಕೇಳಿದಾಗ, “ಖಂಡಿತಾ ಸಾಮರಸ್ಯ ಮೂಡುತ್ತದೆ. ಇಲ್ಲಿ ತೆಲುಗು, ಮಲಯಾಳಂ, ತಮಿಳು ಮಾತನಾಡುವ ಜನ ಇದ್ದಾರೆ. ಕಾವೇರಿ ನೀರು ಹರಿದು ಎಳ್ಲಾ ರಾಜ್ಯ ತಲುಪುತ್ತಿದೆ. ಈ ರಾಜ್ಯಗಳು ಸಹೋದರರಂತೆ ಸಾಮರಸ್ಯದಲ್ಲಿರಬೇಕು. ನೆರೆ ರಾಜ್ಯಗಳ ಟ್ಯಾಬ್ಲೋಗಳು ಕೂಡ ಇಲ್ಲಿಗೆ ಬಂದಿವೆ. ನಮ್ಮ ರಾಜ್ಯ ವಿಶ್ವವನ್ನೇ ಆಕರ್ಷಿಸುತ್ತಿದ್ದು, ಬೆಂಗಳೂರಿನಲ್ಲಿ 45 ಲಕ್ಷ ಜನ ಹೊರ ರಾಜ್ಯದವರಾಗಿದ್ದಾರೆ. ನಾವು ಎಲ್ಲರನ್ನು ಸ್ವೀಕರಿಸುತ್ತಿದ್ದೇವೆ. ದಸರಾ ವಿಶ್ವವಿಖ್ಯಾತವಾಗಿದ್ದು, ವಿದೇಶದಿಂದಲೂ ಜನ ಬಂದಿದ್ದಾರೆ. 13 ವಿದೇಶಿ ರಾಯಭಾರಿಗಳು ದಸರಾಗೆ ಆಗಮಿಸಿದ್ದಾರೆ. ಈ ದಸರಾದಲ್ಲಿ ವಿಶೇಷ ಮೆರಗು ಮೂಡಿಸಲಾಗಿದೆ” ಎಂದರು.
ಇದಕ್ಕೂ ಮುನ್ನ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, “ಯುವಕರು-ಯುವತಿಯರು ರೀಲ್ ಗಳನ್ನು ಮಾಡಿ ಇಡೀ ದೇಶಕ್ಕೆ ದಸರಾ ಪರಿಚಯ ಮಾಡಿಕೊಟ್ಟಿದ್ದಾರೆ. ದಸರಾ ವೀಕ್ಷಣೆಗೆ ಆಗಮಿಸಿರುವ ಎಷ್ಟೋ ಮಂದಿಗೆ ರೂಮುಗಳು ಸಿಗುತ್ತಿಲ್ಲ ಎನ್ನುವ ಮಾಹಿತಿ ಬಂದಿದೆ. ಎಲ್ಲಕಡೆ ರೂಮುಗಳು ಭರ್ತಿಯಾಗಿವೆ. ಎಲ್ಲೂ ಕೂಡ ಸಂಚಾರ ದಟ್ಟಣೆ ಆಗದಂತೆ ನಮ್ಮ ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡುತ್ತಿದೆ” ಎಂದರು.
“ಏರ್ ಶೋ, ಕಂಬಳ ಬಹಳ ಚೆನ್ನಾಗಿ ಆಗಿದೆ ಎಂದು ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ. ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯ. ಇನ್ನು ಮುಂದೆ ನಡೆಯುವ ಕಾರ್ಯಕ್ರಮಗಳನ್ನು ನೋಡಿ, ಅಭಿಪ್ರಾಯವನ್ನು ತಿಳಿಸಿ. ಮಾಧ್ಯಮ ಪ್ರತಿನಿಧಿಗಳಿಗೆ ದಸರಾ ಒಳ್ಳೆಯದು ಮಾಡಲಿ. ನಿಮ್ಮ ಸಹಕಾರ ಇದಕ್ಕೆ ಬಹಳ ಮುಖ್ಯ” ಎಂದು ಹೇಳಿದರು.
