ಸಮಗ್ರ ಸುದ್ದಿ

ಸರ್ಕಾರದಿಂದಲೇ ಪೌರಕಾರ್ಮಿಕರಿಗೆ ವೇತನ : ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ- ಸಚಿವ ರಹೀಂ ಖಾನ್

Share

ಬೆಳಗಾವಿ : ರಾಜ್ಯದ ನಗರಸಭೆ, ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪೌರಕಾರ್ಮಿಕರಿಗೆ ಸರ್ಕಾರದಿಂದಲೇ ವೇತನ ಪಾವತಿಸುವ ಕುರಿತಂತೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿಂದು ವಿಧಾನಸಭೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿ, ಕಳೆದ 2022 ಕ್ಕೂ ಮುನ್ನ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಎಸ್‍ಎಫ್‍ಸಿ ಅನುದಾನದಡಿ ವೇತನ ಪಾವತಿಸಲಾಗುತ್ತಿತ್ತು.

ಆದರೆ ಸ್ಥಳೀಯ ಸಂಸ್ಥೆಗಳು ಉತ್ತಮವಾಗಿ ತೆರಿಗೆ ಸಂಗ್ರಹಿಸಿ, ಆತ್ಮ ನಿರ್ಬರವಾಗಬೇಕು, ಆರ್ಥಿಕವಾಗಿ ಸಬಲತೆಯನ್ನು ಸಾಧಿಸಬೇಕು ಎಂಬ ಉದ್ದೇಶದಿಂದ ಶೇ. 40 ರಷ್ಟು ಸರ್ಕಾರದಿಂದ ಹಾಗೂ ಶೇ. 60 ರಷ್ಟು ನಗರ ಸ್ಥಳೀಯ ಸಂಸ್ಥೆಗಳೇ ತಮ್ಮ ಆದಾಯದ ಅನುದಾನದಿಂದ ಪಾವತಿಸುವಂತೆ ಸೂಚನೆ ನೀಡಲಾಗಿರುತ್ತದೆ ಎಂದರು.

ಶಾಸಕ ಸಿದ್ದು ಸವದಿ ಅವರು ಪ್ರತಿಕ್ರಿಯಿಸಿ, ನಗರ, ಸ್ಥಳೀಯ ಸಂಸ್ಥೆಗಳಿಗೆ ಸ್ವಚ್ಛತೆ, ರಸ್ತೆ, ಚರಂಡಿ, ಸೇತುವೆ ಮುಂತಾದ ಕಾಮಗಾರಿಗಳಿಗೆ ಅನುದಾನದ ಅವಶ್ಯಕತೆ ಹೆಚ್ಚಿರುತ್ತದೆ, ಅಲ್ಲದೆ ತೆರಿಗೆ ಸಂಗ್ರಹ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಇವೆಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೌರಕಾರ್ಮಿಕರಿಗೆ ಸರ್ಕಾರದಿಂದಲೇ ವೇತನ ಪಾವತಿಯಾಗಬೇಕು ಎಂದು ಒತ್ತಾಯಿಸಿದರು. ಈ ಕುರಿತಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಹೀಂ ಖಾನ್ ಭರವಸೆ ನೀಡಿದರು.


Share

You cannot copy content of this page