ಸಮಗ್ರ ಸುದ್ದಿ

ಕಾಶಿ- ತಮಿಳು ಸಂಗಮ 5.0 ನೋಂದಣಿ ಪೋರ್ಟಲ್ ಲೋಕಾರ್ಪಣೆ| ನವೆಂಬರ್ 28ರಿಂದ ವಾರಣಾಸಿಯಲ್ಲಿ ಸಾಂಸ್ಕೃತಿಕ ಮಹೋತ್ಸವ

Share

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಮುಖ ಕಾರ್ಯಕ್ರಮದಲ್ಲೊಂದು ‘ಕಾಶಿ ತಮಿಳು ಸಂಗಮ’ವು ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಭಾವನೆಯನ್ನು ಯಶಸ್ವಿಯಾಗಿ ಸಾಕಾರಗೊಳಿಸುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

2022ರಲ್ಲಿ ಪ್ರಾರಂಭವಾದ ಈ ಸಾಂಸ್ಕೃತಿಕ ಮಹೋತ್ಸವವು ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ಸಾಂಸ್ಕೃತಿಕ ಹಾಗೂ ನಾಗರಿಕತೆಯ ನಂಟನ್ನು ಸಾರುತ್ತಾ ಬಂದಿದೆ.

ಕಳೆದ ನಾಲ್ಕು ಯಶಸ್ವಿ ಆವೃತ್ತಿಗಳಲ್ಲಿ ಈ ಕಾರ್ಯಕ್ರಮವು ವಿದ್ಯಾರ್ಥಿಗಳು, ಶಿಕ್ಷಕರು, ಬರಹಗಾರರು, ಕರಕುಶಲಕರ್ಮಿಗಳು, ಕೃಷಿಕರು, ವೃತ್ತಿಪರರು, ಮಹಿಳೆಯರು ಮತ್ತು ಆಧ್ಯಾತ್ಮಿಕ ವಿದ್ವಾಂಸರನ್ನು ಒಂದೇ ವೇದಿಕೆಯಡಿ ತಂದಿದೆ.

“ಭಾರತದ ವೈವಿಧ್ಯತೆಯೇ ನಮ್ಮ ಬಲವಾಗಿದ್ದು, ನಮ್ಮ ಭಾಷೆಗಳು ಮತ್ತು ಸಂಸ್ಕೃತಿಗಳು ಹಂಚಿಕೊಳ್ಳಲಾದ ನಾಗರಿಕತೆಯ ಪರಂಪರೆಯ ಮೂಲಕ ನಮ್ಮನ್ನು ಬೆಸೆಯುತ್ತವೆ” ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಯ ಆಶಯದಂತೆ ಭಾರತೀಯ ಜ್ಞಾನ ವ್ಯವಸ್ಥೆಗಳು (IKS) ಮತ್ತು ಸಾಂಸ್ಕೃತಿಕ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾಶಿ ತಮಿಳು ಸಂಗಮ ಮುಂಚೂಣಿಯಲ್ಲಿದೆ. ಈ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಹಬ್ಬದ ಐದನೇ ಆವೃತ್ತಿಯು (KTS 5.0) ಮುಂಬರುವ ನವೆಂಬರ್ 28 ರಿಂದ ಡಿಸೆಂಬರ್ 12, 2026ರವರೆಗೆ ವಾರಣಾಸಿಯಲ್ಲಿ ನಡೆಯಲಿದೆ. ಇದರೊಂದಿಗೆ ಪ್ರತಿನಿಧಿಗಳು ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಗೂ ಭೇಟಿ ನೀಡಲಿದ್ದಾರೆ.

ಈ ಬಾರಿಯ ವಿಶೇಷತೆ ಏನು?: ಈ ಬಾರಿಯ ಉತ್ಸವದ ಥೀಮ್ “ತಿರುಕ್ಕುರಲ್ ಪಯಿಲ್ವೋಮ್ ತಿರುಕ್ಕುರಲ್ ಅಭ್ಯಾಸ್ ಕರೇನ್” ಆಗಿದ್ದು, ಇದು ತಿರುಕ್ಕುರಲ್‌ನ ಕಾಲಾತೀತ ಜ್ಞಾನವನ್ನು ಪ್ರಚುರಪಡಿಸಲಿದೆ. ತಿರುಕ್ಕುರಲ್ ನೈತಿಕತೆ, ಸದಾಚಾರ, ಒಳ್ಳೆಯ ನಡವಳಿಕೆ ಹಾಗೂ ಜವಾಬ್ದಾರಿಯುತ ಜೀವನದ ಪಾಠಗಳನ್ನು ಬೋಧಿಸುತ್ತದೆ. ಶಾಸ್ತ್ರೀಯ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ಯುವ ಸಮೂಹವನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಈ ಆವೃತ್ತಿಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ.

ತಮಿಳುನಾಡಿನಿಂದ ಒಟ್ಟು ಏಳು ಗುಂಪುಗಳಲ್ಲಿ ಸುಮಾರು 1,400 ಪ್ರತಿನಿಧಿಗಳು ಈ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ವಿದ್ಯಾರ್ಥಿ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳೊಂದಿಗಿನ ಸಂವಾದಗಳು ಹಾಗೂ ತಿರುಕ್ಕುರಲ್ ತಜ್ಞರ ಜೊತೆಗಿನ ಚರ್ಚೆಗಳು ನಡೆಯಲಿವೆ. ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ (NBT India) ಮತ್ತು ರಾಷ್ಟ್ರೀಯ ಇ-ಪುಸ್ತಕಾಲಯದ ಸಹಯೋಗವು ಯುವ ಕಲಿಕಾರ್ಥಿಗಳಿಗೆ ಇದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಿದೆ.

ನೋಂದಣಿ ಪೋರ್ಟಲ್ ಉದ್ಘಾಟನೆ: ಚೆನ್ನೈನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು (CICT) ಸಂಸ್ಥೆಯು KTS 5.0 ಗಾಗಿ ಅಧಿಕೃತ ನೋಂದಣಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಸುಲಭವಾಗಿ ನೋಂದಣಿ ಮಾಡಲು ಅವಕಾಶ ಕಲ್ಪಿಸುವುದಲ್ಲದೆ, ಕಾರ್ಯಕ್ರಮದ ವಿವರವಾದ ಮಾಹಿತಿ, ಮಾರ್ಗಸೂಚಿಗಳು ಹಾಗೂ ಅಧ್ಯಯನ ಸಂಪನ್ಮೂಲಗಳನ್ನು ಒದಗಿಸಲಿದೆ.

ಭಾರತದ ಶಾಸ್ತ್ರೀಯ ಜ್ಞಾನ ಸಂಪತ್ತನ್ನು ಕೇವಲ ಪುಸ್ತಕಗಳಿಗೆ ಮಾತ್ರ ಸೀಮಿತಗೊಳಿಸದೆ, ಅದರ ಅಮೂಲ್ಯ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಕಾಶಿ ತಮಿಳು ಸಂಗಮವು ಸಾಂಸ್ಕೃತಿಕ ತಿಳುವಳಿಕೆಯನ್ನು ವೃದ್ಧಿಸುವುದಲ್ಲದೆ, ದೇಶದ ಭಾಷಾ ವೈವಿಧ್ಯತೆಯನ್ನು ಆಚರಿಸುತ್ತಾ ನಮ್ಮ ಹಂಚಿಕೊಳ್ಳಲಾದ ನಾಗರಿಕತೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share

You cannot copy content of this page