ಸಮಗ್ರ ಸುದ್ದಿ

ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು, ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ; ಡಿಸಿಎಂ ಡಾ. ಜಿ. ಪರಮೇಶ್ವರ

Share

ಬೆಂಗಳೂರು: ಸ್ಕೂಟಿಯಲ್ಲಿ ತೆರಳುತ್ತಿದ್ದ ಹುಬ್ಬಳ್ಳಿಯ ವಿದ್ಯಾ ಮಂಜುನಾಥ ಗೌಡರ್‌ ಅವರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ದಾರುಣ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಅಮಾಯಕ ಜೀವವೊಂದನ್ನು ಬಲಿಪಡೆದ ಈ ಘಟನೆ ತೀವ್ರ ನೋವು ಮತ್ತು ಕಳವಳವನ್ನುಂಟು ಮಾಡಿದೆ. ಇಂತಹ ಅಪಾಯಕಾರಿ ಪ್ರವೃತ್ತಿಗೆ ಸಕಾಲದಲ್ಲಿ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾದ ಆತಂಕವಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಷೇಧದ ಹೊರತಾಗಿಯೂ ಇಂತಹ ದಾರಗಳ ಮಾರಾಟ ಮತ್ತು ಬಳಕೆ ಮುಂದುವರಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಪ್ರಸ್ತುತ ಜಾರಿಯಿರುವ ಕಾನೂನಿನ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಜೊತೆಗೆ, ಅಗತ್ಯವಿದ್ದಲ್ಲಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಕ್ತ ತೀರ್ಮಾನ ಮಾಡಲಾಗುವುದು.

ಕೆಲವರ ಕ್ಷಣಿಕ ಮನೋರಂಜನೆ ಅಥವಾ ಮೋಜಿಗಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಗಾಳಿಪಟ ಹಾರಿಸುವ ಹವ್ಯಾಸ ಮತ್ತೊಬ್ಬರ ಬದುಕನ್ನೇ ಕಸಿದುಕೊಳ್ಳುವ ಅಪಾಯಕಾರಿ ಚಟುವಟಿಕೆಯಾಗಿ ಪರಿಣಮಿಸುವುದನ್ನು ತಡೆಯಲೇಬೇಕಿದೆ.

ಇದು ಕೇವಲ ಕಾನೂನು ಮತ್ತು ನಿಯಮಗಳ ಪ್ರಶ್ನೆಯಲ್ಲ. ಸಮಾಜದ ಮಾನವೀಯತೆ ಹಾಗೂ ನೈತಿಕ ಹೊಣೆಗಾರಿಕೆಯ ಪ್ರಶ್ನೆಯೂ ಹೌದು. ಕಳೆದ ಕೆಲವು ವರ್ಷಗಳಿಂದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಿದ್ದರೂ, ಅದರ ಅಪಾಯವನ್ನು ಅರಿತೂ ಇಂತಹ ದಾರಗಳನ್ನು ಬಳಸುತ್ತಿರುವವರು ತಮ್ಮೊಳಗಿನ ಮಾನವೀಯತೆಯನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ನಮ್ಮ ಮೋಜು ಮತ್ತೊಬ್ಬರ ಜೀವಕ್ಕೆ ಕುತ್ತು ತರಬಹುದು ಎಂಬ ಅರಿವಿದ್ದೂ ಅದನ್ನು ಮುಂದುವರಿಸುವುದು ಕೇವಲ ನಿರ್ಲಕ್ಷ್ಯವಲ್ಲ, ಅದು ಅಪರಾಧ ಕೃತ್ಯವಾಗುತ್ತದೆ. ಇದರಿಂದ ಜೀವಹಾನಿ ಸಂಭವಿಸಿದರೆ, ಅದಕ್ಕೆ ಕಾರಣರಾದವರು ಕಾನೂನಿನ ಪ್ರಕಾರ ಹೊಣೆಗಾರರಾಗಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಅಪಾಯ ಸೃಷ್ಟಿಸುವ ಅಥವಾ ಇತರರ ಸುರಕ್ಷತೆಯನ್ನು ಕಡೆಗಣಿಸುವ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ.

ಗಾಳಿಪಟ ಹಾರಿಸುವುದು ಮನೋರಂಜನೆಯಾಗಿರಬೇಕೇ ಹೊರತು ಮತ್ತೊಬ್ಬರ ಜೀವಕ್ಕೆ ಅಪಾಯ ತಂದೊಡ್ಡುವ ಸ್ಪರ್ಧೆಯಾಗಬಾರದು. ಮನೋರಂಜನೆಯ ಹೆಸರಿನಲ್ಲಿ ಅಪಾಯಕಾರಿ ಮಾಂಜಾ ದಾರಗಳನ್ನು ಬಳಸುವುದಾಗಲಿ, ಗಾಳಿಪಟ ಹಾರಿಸುವುದನ್ನು ಜೂಜಾಟ ಅಥವಾ ಅಪಾಯಕಾರಿ ಸ್ಪರ್ಧೆಯಾಗಿ ಪರಿವರ್ತಿಸುವುದಾಗಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾದರೆ, ತಪ್ಪಿತಸ್ಥರು ಕಾನೂನು ಕ್ರಮವನ್ನು ಎದುರಿಸಲು ಸಿದ್ಧರಾಗಬೇಕು.

ಮನುಷ್ಯನ ಜೀವಕ್ಕಿಂತ ದೊಡ್ಡ ಮನೋರಂಜನೆ ಯಾವುದೂ ಇಲ್ಲ. ಕೆಲವರ ಮೋಜಿಗಾಗಿ ಅಮಾಯಕರ ಜೀವ ಬಲಿಯಾಗುವುದನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ, ಅಪಾಯಕಾರಿ ಮಾಂಜಾ ದಾರದ ಬಳಕೆಗೆ ಪರಿಣಾಮಕಾರಿ ಕಡಿವಾಣ ಹಾಕಲು ನಮ್ಮ ಸರ್ಕಾರ ದೃಢಸಂಕಲ್ಪ ಮಾಡಿದೆ.


Share

You cannot copy content of this page