ಕಿತ್ತೂರು: ಐತಿಹಾಸಿಕ ಕಿತ್ತೂರು ಉತ್ಸವ-2026ರ ಅಂಗವಾಗಿ ಆಯೋಜಿಸಲಾಗಿರುವ ಜಲ ಕ್ರೀಡೆಗಳು ಹಾಗೂ ದೋಣಿ ವಿಹಾರದ ಕಾರ್ಯಕ್ರಮಕ್ಕೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು.
ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಐತಿಹಾಸಿಕ ಪರಾಕ್ರಮ, ಶೌರ್ಯ ಮತ್ತು ಸ್ವಾಭಿಮಾನದ ಹೋರಾಟವನ್ನು ಸ್ಮರಿಸುವ ಕಿತ್ತೂರು ಉತ್ಸವದ ಭಾಗವಾಗಿ, ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಜಲ ಕ್ರೀಡೆಗಳು ಮತ್ತು ದೋಣಿ ವಿಹಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸ್ಥಳೀಯ ನಿವಾಸಿಗಳು ಮಾತ್ರವಲ್ಲದೆ, ದೂರದೂರುಗಳಿಂದ ಆಗಮಿಸುವ ಪ್ರವಾಸಿಗರಿಗೂ ವಿಭಿನ್ನ ಹಾಗೂ ಮನರಂಜನಾತ್ಮಕ ಅನುಭವ ಒದಗಿಸುವ ನಿಟ್ಟಿನಲ್ಲಿ ಸಾಹಸಮಯ ಜಲ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಈ ಕಾರ್ಯಕ್ರಮವು ಪ್ರವಾಸೋದ್ಯಮ ಆಕರ್ಷಣೆಗೂ ಪೂರಕವಾಗಲಿದೆ.
ಜಲ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ರತಿಯೊಬ್ಬರಿಗೂ ಲೈಫ್ ಜಾಕೆಟ್‌ಗಳನ್ನು ಒದಗಿಸಲಾಗಿದೆ. ಅಲ್ಲದೆ, ನುರಿತ ರಕ್ಷಣಾ ಸಿಬ್ಬಂದಿ (ಲೈಫ್‌ಗಾರ್ಡ್‌ಗಳು) ಮೇಲ್ವಿಚಾರಣೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಶೇಗಾಂವಿ, ಬೆಳಗಾವಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಾಸಲೀಂ ಕಾಶೀಮನವರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಅಡಿವೇಶ್ ಇಟಗಿ ಸೇರಿದಂತೆ ಹಲವು ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
