ಬೆಂಗಳೂರು: ಪೋಲೆಂಡ್ ದೇಶದ ಭಾರತದ ರಾಯಭಾರಿ ನೀತಾ ಭೂಷಣ್ ಅವರು ಶನಿವಾರ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ಕಚೇರಿಯಲ್ಲಿರುವ ಡಾ.ಕೆ.ಗೋವಿಂದರಾಜ್ ಹಾಲ್ ಆಫ್ ಫೇಮ್ ಮ್ಯೂಸಿಯಂಗೆ ಭೇಟಿ ನೀಡಿದರು. ಹಾಲ್ ಆಫ್ ಫೇಮ್ ಮ್ಯೂಸಿಯಂನಲ್ಲಿರುವ ಕರ್ನಾಟಕದ ಕ್ರೀಡಾ ಸಾಧಕರ ಫೋಟೋಗಳನ್ನು ನೀತಾ ಭೂಷಣ್ ಅವರು ವೀಕ್ಷಿಸಿದರು.
ಬಳಿಕ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿಯ ಭಾರತೀಯ ರೈಲ್ವೇಸ್ ಹಾಗೂ ಅಕಾರಿ ಸ್ಪಾರ್ಕ್ಸ್ ನಡುವಿನ ಕ್ಲಾಸಿಫಿಕೇಷನ್ ಪಂದ್ಯವನ್ನು ಕೆಲಕಾಲ ವೀಕ್ಷಿಸಿದರು.
ಫಿಬಾ ಏಷ್ಯಾ ಅಧ್ಯಕ್ಷರು, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜ್ ಅವರು ನೀತಾ ಭೂಷಣ್ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
