ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್ಎಲ್ಪಿ) ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪಿನ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲೇಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಮುಂದೆ ಇದನ್ನು ಹೇಗೆ ಸಂವಿಧಾನದ ಒಂಬತ್ತನೇ ಶೆಡ್ಯೂಲ್ (9th Schedule) ಅಡಿಯಲ್ಲಿ ತಂದು ಶಾಶ್ವತ ರಕ್ಷಣೆ ಒದಗಿಸಬೇಕು ಅನ್ನೋದರ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮೀಸಲಾತಿ ಹೆಚ್ಚಳಕ್ಕೆ ಶಾಶ್ವತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಸರ್ಕಾರ ಬದ್ಧ:
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಅನೇಕ ಗೊಂದಲಗಳಿರುವುದು ನಿಜ. ಈ ಹಿಂದೆ ಹೆಚ್. ಆಂಜನೇಯ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಮುಕ್ತವಾಗಿ ಅನುದಾನ ನೀಡುತ್ತಿದ್ದರು. ಸ್ವಾಮೀಜಿಯವರು ₹5 ಕೋಟಿ ಅನುದಾನ ಕೇಳಿದಾಗ ಅದನ್ನು ಮಂಜೂರು ಮಾಡಿದ್ದರು. ಈಗ ಎಲ್ಲ ಇಲಾಖೆಗಳಲ್ಲಿಯೂ ಶೇ.17ರಷ್ಟು ಅನುದಾನವನ್ನು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಡಬೇಕೆಂಬ ನಿಯಮವಿದೆ. ಈ ಅನುದಾನವನ್ನು ಸಮುದಾಯಗಳ ಅಭಿವೃದ್ಧಿಗೆ ಬಳಸಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ ಸಾವಿರಾರು ಫಲಾನುಭವಿಗಳಿಗೆ ಕೊಳವೆಬಾವಿ ಸೌಲಭ್ಯ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ 162 ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ರೀತಿಯ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ರಾಜಕೀಯ ಕಾರಣಗಳಿಗಾಗಿ ಗೊಂದಲ ಸೃಷ್ಟಿಸಲಾಯಿತು. ಇದರಿಂದ ಯಾರಿಗೂ ತೊಂದರೆಯಾಗಿಲ್ಲ. ಆ ಸಂದರ್ಭದಲ್ಲಿ ನಾನೇ ಗೃಹ ಸಚಿವನಾಗಿದ್ದೆ. ಆರೋಪಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಲಾಗಿದ್ದ ಎಲ್ಲ ಹಣವೂ ವಾಪಸ್ ಬಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ನಾವು ಪ್ರತಿನಿಧಿಸುವ ಸಮುದಾಯಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಏಳಿಗೆ ಹೊಂದದಿದ್ದರೆ ಜನಪ್ರತಿನಿಧಿಗಳಾಗಿರುವ ನಮಗೆ ಯಾವುದೇ ಅರ್ಹತೆ ಇರುವುದಿಲ್ಲ. ಆದ್ದರಿಂದ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮೀಸಲಾತಿ ಪ್ರಮಾಣವನ್ನು ಶೇ.56ರಿಂದ ಶೇ.50ಕ್ಕೆ ಇಳಿಸಿರುವುದು ಆಶ್ಚರ್ಯ ತಂದಿದೆ:
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲಾಗಿತ್ತು. ಆದರೆ, ಹೈಕೋರ್ಟ್ ಮೀಸಲಾತಿ ಪ್ರಮಾಣವನ್ನು ಶೇ.56ರಿಂದ ಶೇ.50ಕ್ಕೆ ಇಳಿಸಿರುವುದು ಆಶ್ಚರ್ಯ ತಂದಿದೆ. ನ್ಯಾಯಾಧೀಶರನ್ನು ದೂಷಿಸುವ ಉದ್ದೇಶ ನಮಗಿಲ್ಲ. ಆದರೆ, ಜನಸಂಖ್ಯೆಯ ಆಧಾರದಲ್ಲಿ ಹೆಚ್ಚಿಸಲಾಗಿದ್ದ ಮೀಸಲಾತಿಯನ್ನು ಯಾವ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.
2011ರ ಜನಗಣತಿ ಆಧಾರದಲ್ಲಿ ಪರಿಶಿಷ್ಟ ಜಾತಿಯವರು ಶೇ.17 ಮತ್ತು ಪರಿಶಿಷ್ಟ ಪಂಗಡದವರು ಶೇ.7ರಷ್ಟಿದ್ದಾರೆ. ಒಟ್ಟಾರೆ ಈ ಸಮುದಾಯಗಳ ಜನಸಂಖ್ಯೆ ಸುಮಾರು ಶೇ.24.1ರಷ್ಟಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಉದ್ದೇಶದಿಂದಲೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ಶೇ.10ರಷ್ಟು ಮೀಸಲಾತಿ ಕಲ್ಪಿಸಿದೆ. ಆದರೆ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ಶೇ.6ರಷ್ಟು ಹೆಚ್ಚಿಸಿದಾಗ ಅದನ್ನು ರದ್ದುಗೊಳಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರ ಅರ್ಥವೇನು ಎಂದು ಪ್ರಶ್ನಿಸಿದರು.
ಮೀಸಲಾತಿಗಾಗಿ ಸ್ವಾಮೀಜಿ ಅವರು 258 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದರು ಅಂದು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು, ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಸ್ವಾಮೀಜಿಯವರು ಸಾವಿರಾರು ಅನುಯಾಯಿಗಳೊಂದಿಗೆ ಪಾದಯಾತ್ರೆ ನಡೆಸಿ ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ಆಗಮಿಸಿದ್ದರು. ಮಳೆಯ ನಡುವೆಯೂ ಪಾದಯಾತ್ರೆ ನಡೆದಿತ್ತು. ಸ್ವಾಮೀಜಿಯವರು ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಆಗಮಿಸಿದ್ದರು ಎಂದರು.
ಆ ಸಂದರ್ಭದಲ್ಲಿ ರಾಷ್ಟ್ರೀಯ ಹಣಕಾಸು ಆಯೋಗದ ಸಭೆ ನಡೆಯುತ್ತಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಾನು ಸಭೆಯಲ್ಲಿ ಭಾಗವಹಿಸಿದ್ದೆವು. ಸ್ವಾಮೀಜಿಯವರನ್ನು ಭೇಟಿ ಮಾಡಿ ಮನವಿ ಸ್ವೀಕರಿಸುವಂತೆ ಮುಖ್ಯಮಂತ್ರಿಗಳು ನನಗೆ ಸೂಚಿಸಿದ್ದರು. ಅದರಂತೆ ನಾನು ತೆರಳಿ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದೆ. ಸುಮಾರು 15 ಶಾಸಕರು ಕೂಡ ಈ ಸಂದರ್ಭದಲ್ಲಿ ಆಗಮಿಸಿದ್ದರು ಎಂದು ತಿಳಿಸಿದರು.
ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಬೇಕು ಎಂಬುದು ಸ್ವಾಮೀಜಿಯವರ ಪ್ರಮುಖ ಬೇಡಿಕೆಯಾಗಿತ್ತು. ಇದರೊಂದಿಗೆ ಸಮುದಾಯದ ಇತರ ಸಮಸ್ಯೆಗಳನ್ನೂ ಒಳಗೊಂಡ ಮನವಿಯನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಶೇ.7ರಷ್ಟು ಮೀಸಲಾತಿ ಕಲ್ಪಿಸಿಯೇ ತೀರುತ್ತೇವೆ ಎಂದು ಅಂದು ಭರವಸೆ ನೀಡಿದ್ದೆ. ಆದರೆ, ಕಾರಣಾಂತರಗಳಿಂದ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂದು ಹೇಳಿದರು.
ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರ ಅಕ್ಟೋಬರ್ನಲ್ಲಿ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿತ್ತು. ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣದಲ್ಲಿಯೂ ಶೇ.3ರಷ್ಟು ಹೆಚ್ಚಳ ಮಾಡಿತ್ತು. ಆ ಮೂಲಕ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಏರಿಸುವ ಸಂಬಂಧ ಆದೇಶ ಹೊರಡಿಸಿತ್ತು ಎಂದು ತಿಳಿಸಿದರು.
ಅಂದು ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿಗೆ ಕರೆದೊಯ್ದು, ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವಂತೆ ಒತ್ತಾಯಿಸಬೇಕಿತ್ತು. ಹಾಗೆ ಮಾಡಿದ್ದರೆ ಬಹುಶಃ ಇಂದಿನ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ವಿಚಾರದಲ್ಲಿ ಹಿಂದಿನ ಸರ್ಕಾರವನ್ನು ದೂಷಿಸಲು ಹೋಗುವುದಿಲ್ಲ. ಆದರೆ, ಅಂದು ಮೀಸಲಾತಿ ಹೆಚ್ಚಳಕ್ಕೆ ಅಗತ್ಯವಾದ ರಕ್ಷಣೆ ಒದಗಿಸುವ ಪ್ರಯತ್ನ ಮಾಡಲಿಲ್ಲ ಎಂಬುದನ್ನು ಹೇಳಬೇಕಾಗಿದೆ ಎಂದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿರುವ ನಿರ್ಧಾರದ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಗಳನ್ನು ನಡೆಸಿಕೊಂಡು ಬರಲಾಗಿದೆ. ಇಂತಹ ಸಂದರ್ಭದಲ್ಲಿ ಹೈಕೋರ್ಟ್ ತೀರ್ಪಿನಿಂದ ಗೊಂದಲ ಉಂಟಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ನ್ಯಾಯಯುತ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಮೀಸಲಾತಿಯ ರಕ್ಷಣೆಗೆ ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು:
ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಸ್ಥಿತಿಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಪರಿಶಿಷ್ಟ ಪಂಗಡಗಳಲ್ಲಿ ಸಾಕ್ಷರತಾ ಪ್ರಮಾಣ ಶೇ.49ರಷ್ಟಿದ್ದು, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.38ರಷ್ಟಿದೆ. ದೇಶದ ಒಟ್ಟಾರೆ ಸಾಕ್ಷರತೆ ಶೇ.80ರ ಮಟ್ಟ ತಲುಪಿರುವ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯಗಳು ಇನ್ನೂ ಶೇ.50ರ ಮಟ್ಟವನ್ನೂ ತಲುಪದಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶೈಕ್ಷಣಿಕವಾಗಿ ಮುಂದುವರಿದಾಗ ಮಾತ್ರ ಉದ್ಯೋಗಾವಕಾಶಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಶಿಕ್ಷಣವೇ ಸಮುದಾಯಗಳ ಪ್ರಗತಿಗೆ ಪ್ರಮುಖ ಸಾಧನವಾಗಿದೆ ಎಂದು ತಿಳಿಸಿದರು.
ಸಂವಿಧಾನ ಮತ್ತು ಮೀಸಲಾತಿಯಿಂದ ಶೋಷಿತ ಸಮುದಾಯಗಳಿಗೆ ಸಮಾನತೆಯ ಅವಕಾಶ:
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆಯ ಹಕ್ಕುಗಳನ್ನು ಕಲ್ಪಿಸದಿದ್ದರೆ, ದೇಶದ ಶೋಷಿತ ಸಮುದಾಯಗಳ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ ಎಂದು ಹೇಳಿದರು.
ಶತಮಾನಗಳಿಂದ ಶಿಕ್ಷಣ, ಸಾಮಾಜಿಕ ಅವಕಾಶಗಳು ಹಾಗೂ ಸಾಮಾನ್ಯ ಜೀವನದ ಹಕ್ಕುಗಳಿಂದಲೂ ವಂಚಿತರಾಗಿದ್ದ ಸಮುದಾಯಗಳಿಗೆ ಸಂವಿಧಾನವು ಸಮಾನತೆಯ ಅವಕಾಶ ಕಲ್ಪಿಸಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಮಾನವಾಗಿ ಬದುಕುವ ಅವಕಾಶವನ್ನು ಒದಗಿಸಿದ್ದಾರೆ ಎಂದರು.
ಮೀಸಲಾತಿಯ ಪರಿಣಾಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿನಿಧಿಗಳು ಸಂಸತ್ತು, ವಿಧಾನಸಭೆ ಹಾಗೂ ವಿಧಾನ ಪರಿಷತ್ಗಳಿಗೆ ಆಯ್ಕೆಯಾಗಲು ಸಾಧ್ಯವಾಗಿದೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಸೇರಿದಂತೆ ಅನೇಕರು ಸಂಸತ್ತಿನಲ್ಲಿ ಸಮುದಾಯಗಳ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗಿರುವುದು ಮೀಸಲಾತಿಯಿಂದಲೇ. ಇಂದು ನಮ್ಮಂತಹ ಅನೇಕರು ಶಾಸಕರು ಹಾಗೂ ಸಚಿವರಾಗಿರುವುದಕ್ಕೂ ಮೀಸಲಾತಿ ಕಲ್ಪಿಸಿರುವ ಅವಕಾಶವೇ ಕಾರಣ ಎಂದು ಹೇಳಿದರು.
ಶೋಷಿತ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯದಿದ್ದರೆ ಅವರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಶಾಸನಸಭೆಗಳಲ್ಲಿ ಸಮರ್ಥವಾಗಿ ಪ್ರಸ್ತಾಪಿಸುವುದು ಕಷ್ಟವಾಗುತ್ತಿತ್ತು. ಸಾಮಾಜಿಕ ಅಸಮಾನತೆಯಿಂದ ಹೊರಬರಲು ಶಿಕ್ಷಣ ಮತ್ತು ಮೀಸಲಾತಿ ಎರಡೂ ಅತ್ಯಂತ ಅಗತ್ಯವಾಗಿವೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯಗಳು ಈ ದೇಶದ ಮೂಲ ನಿವಾಸಿಗಳು ಎಂದು ಮಾಜಿ ಸಂಸದ ಉಗ್ರಪ್ಪ ಅವರು ಪ್ರಸ್ತಾಪಿಸಿರುವ ವಿಚಾರವನ್ನು ಉಲ್ಲೇಖಿಸಿದ ಅವರು, ಈ ಅಭಿಪ್ರಾಯದೊಂದಿಗೆ ನಾನು ಸಹಮತ ಹೊಂದಿದ್ದೇನೆ ಎಂದು ಹೇಳಿದರು.
ಆರ್ಯರ ಆಗಮನಕ್ಕೂ ಮುನ್ನ ದೇಶದಲ್ಲಿ ಬುಡಕಟ್ಟು ಸಮುದಾಯಗಳು ಹಾಗೂ ಇಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯಗಳೆಂದು ಗುರುತಿಸಲ್ಪಡುವ ಜನರು ನೆಲೆಸಿದ್ದರು. ಸಮಾಜವನ್ನು ಜಾತಿಗಳ ಆಧಾರದಲ್ಲಿ ವರ್ಗೀಕರಿಸಿ ಮೇಲು-ಕೀಳು ಎಂಬ ಭೇದಭಾವ ಸೃಷ್ಟಿಸಿದ ಶ್ರೇಣೀಕೃತ ವ್ಯವಸ್ಥೆ ಸಾವಿರಾರು ವರ್ಷಗಳಿಂದ ಮುಂದುವರಿದಿದೆ. ಈ ವ್ಯವಸ್ಥೆಯಿಂದ ಶೋಷಣೆ ಮತ್ತು ಅಸಮಾನತೆ ಉಂಟಾಗಿದೆ. 21ನೇ ಶತಮಾನದಲ್ಲಿಯೂ ಸಮಾಜದಲ್ಲಿ ಇಂತಹ ಅಸಮಾನತೆಗಳು ಮುಂದುವರಿದಿರುವುದು ವಿಷಾದನೀಯ ಎಂದು ಹೇಳಿದರು.
ಇಂತಹ ಶ್ರೇಣೀಕೃತ ವ್ಯವಸ್ಥೆ ಇಲ್ಲದಿದ್ದರೆ ಎಲ್ಲರೂ ಸಮಾನತೆಯಿಂದ ಬದುಕುವ ಸಮಾಜ ನಿರ್ಮಾಣವಾಗುತ್ತಿತ್ತು. ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಪರಸ್ಪರ ಗೌರವದ ಮೌಲ್ಯಗಳು ನೆಲೆಗೊಳ್ಳಬೇಕು ಎಂದು ತಿಳಿಸಿದರು.
ವಾಲ್ಮೀಕಿ ಮಹರ್ಷಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸಕ್ಕೆ ಭದ್ರ ಅಡಿಪಾಯ ಹಾಕಿವೆ. ಮಹರ್ಷಿ ವಾಲ್ಮೀಕಿ ಅವರು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಆಧಾರದಲ್ಲಿ ಜೀವನ ನಡೆಸಬೇಕು ಎಂಬ ಸಂದೇಶ ಈ ಮಹಾಕಾವ್ಯಗಳಲ್ಲಿದೆ. ಶ್ರೀರಾಮನ 14 ವರ್ಷಗಳ ವನವಾಸ, ಸೀತೆಯನ್ನು ಕಾಡಿಗೆ ಕಳುಹಿಸಿದ ಪ್ರಸಂಗ ಸೇರಿದಂತೆ ರಾಮಾಯಣದಲ್ಲಿನ ಘಟನೆಗಳು ಕೇವಲ ಕಥೆಗಳಲ್ಲ. ಅವು ಇಂದಿಗೂ ಸಮಾಜಕ್ಕೆ ಜೀವನಮೌಲ್ಯಗಳನ್ನು ನೆನಪಿಸುವ ಉದಾಹರಣೆಗಳಾಗಿ ಉಳಿದಿವೆ ಎಂದು ತಿಳಿಸಿದರು.
ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಭಾರತದ ಗಡಿಗಳನ್ನು ಮೀರಿ ವಿಶ್ವಾದ್ಯಂತ ಅಧ್ಯಯನಕ್ಕೆ ಒಳಪಟ್ಟಿವೆ. ವಿಶ್ವದ ಪ್ರತಿಷ್ಠಿತ ಗ್ರಂಥಾಲಯಗಳಲ್ಲಿಯೂ ಈ ಕೃತಿಗಳು ಲಭ್ಯವಿದ್ದು, ಪಾಶ್ಚಿಮಾತ್ಯ ದೇಶಗಳ ವಿದ್ವಾಂಸರು ಕೂಡ ಇವುಗಳ ಅಧ್ಯಯನಕ್ಕಾಗಿ ಭಾರತದ ವಿಶ್ವವಿದ್ಯಾಲಯಗಳಿಗೆ ಆಗಮಿಸುತ್ತಾರೆ ಎಂದರು.
ಮಾಹಿತಿ ತಂತ್ರಜ್ಞಾನ ಮುಂದುವರಿದಿರುವ ಇಂದಿನ ಕಾಲದಲ್ಲಿ ಈ ಮಹಾಕಾವ್ಯಗಳ ವಿಷಯಗಳನ್ನು ಕ್ಷಣಾರ್ಧದಲ್ಲಿ ಪಡೆಯಲು ಸಾಧ್ಯವಿದೆ. ಆದರೆ, ಅವುಗಳಲ್ಲಿರುವ ಸತ್ಯ, ಧರ್ಮ, ನ್ಯಾಯ, ನೀತಿ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅವರನ್ನು ಸ್ಮರಿಸುವುದರ ಜೊತೆಗೆ ಅವರ ಆದರ್ಶಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಮಹರ್ಷಿ ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಯವಾಗುವಂತಹ ಕೆಲಸವನ್ನು ನಾವು ಮಾಡಬೇಕು ಎಂದು ತಿಳಿಸಿದರು.
ಸ್ಚಾಮೀಜಿಯವರು ನೀಡಿರುವ ಮನವಿಯ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
