ಸಮಗ್ರ ಸುದ್ದಿ

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ನಿರೀಕ್ಷಿತ‌ ಫಲಿತಾಂಶ ನೀಡಿಲ್ಲ-ಡಾ.ಪುರುಷೋತ್ತಮ ಬಿಳಿಮಲೆ

Share

ಬೆಂಗಳೂರು: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಏಳನೇ ತರಗತಿಯ ಮಕ್ಕಳಿಗೂ ಇಂಗ್ಲಿಷ್‌ನಲ್ಲಿ ಪುಟ್ಟ ಕಥೆಯೊಂದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಓದಿದ ಪಠ್ಯದ ಅರ್ಥವನ್ನು ಗ್ರಹಿಸುವುದರಲ್ಲಿಯೂ ತೊಂದರೆ ಎದುರಿಸುತ್ತಿದ್ದಾರೆ. ಸ್ವತಂತ್ರ ವಾಕ್ಯ ರಚನೆ, ಸಂಭಾಷಣೆ ಮತ್ತು ಬರವಣಿಗೆಯಲ್ಲೂ ಮಕ್ಕಳು ಹಿಂದುಳಿದಿದ್ದಾರೆ ಎನ್ನುವ ಪ್ರಮುಖ ಅಂಶಗಳು ರಾಜ್ಯದ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಗಳ ಮಕ್ಕಳ ಇಂಗ್ಲಿಷ್‌ ಭಾಷಾ ಕಲಿಕೆಯ ಗುಣಮಟ್ಟದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

2019-20ನೇ ಶೈಕ್ಷಣಿಕ ವರ್ಷದಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಗೊಂಡ ಆಯ್ದ ಸರ್ಕಾರಿ ಶಾಲೆಗಳ ಆರನೇ ಮತ್ತು ಏಳನೇ ತರಗತಿಗಳ ವಿದ್ಯಾರ್ಥಿಗಳ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರವಣಿಗೆಯ ನಾಲ್ಕು ಪ್ರಮುಖ ಭಾಷಾ ಕೌಶಲಗಳ ಆಧಾರದಲ್ಲಿ ಈ ಮೌಲ್ಯಮಾಪನವನ್ನು ನಡೆಸಲಾಗಿದೆ ಎಂದಿರುವ ಬಿಳಿಮಲೆ ಈ ಅಧ್ಯಯನವು ಭಾಷಾ ಕಲಿಕೆಯಲ್ಲಿ ಮಕ್ಕಳ ಸಕ್ರಿಯ ಪಾಲ್ಗೊಳ್ಳುವಿಕೆ, ಸಂವಹನ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ ಎಂದು ವಿವರಿಸಿದ್ದಾರೆ.

ವರದಿಯ ಪ್ರಮುಖ ಅಂಶಗಳು

ಇಂಗ್ಲಿಷ್‌ ಭಾಷೆಯೊಂದಿಗೆ ಸೀಮಿತ ಒಡನಾಟ: ತರಗತಿಯ ಹೊರಗೆ ಇಂಗ್ಲಿಷ್‌ ಆಲಿಸಲು ಮತ್ತು ಮಾತನಾಡಲು ಅವಕಾಶಗಳ ಕೊರತೆಯಿಂದ ಮಕ್ಕಳು ಒಂದೇ ಪದದಲ್ಲಿ ಉತ್ತರಿಸುತ್ತಿದ್ದು, ಸ್ವತಂತ್ರ ವಾಕ್ಯಗಳನ್ನು ರಚಿಸಲು ಕಷ್ಟಪಡುತ್ತಿದ್ದಾರೆ.

ಮಾತನಾಡುವಲ್ಲಿ ಆತ್ಮವಿಶ್ವಾಸದ ಕೊರತೆ: ವೈಯಕ್ತಿಕ ಅನುಭವಗಳನ್ನು ವಿವರಿಸುವುದು, ಸರಳ ಸಂಭಾಷಣೆ ನಡೆಸುವುದು ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿ ಮಕ್ಕಳು ಹಿಂದುಳಿದಿದ್ದಾರೆ.

ಬರವಣಿಗೆಯಲ್ಲಿ ತೊಂದರೆ: ಚಿತ್ರದಲ್ಲಿರುವ ಸಾಮಾನ್ಯ ವಸ್ತುಗಳನ್ನು ಗುರುತಿಸಿ ಬರೆಯುವುದರಲ್ಲಿಯೂ, ಕಾಗುಣಿತ ದೋಷಗಳಿಲ್ಲದೆ ಬರೆಯುವುದರಲ್ಲಿಯೂ ಸಮಸ್ಯೆ ಎದುರಿಸುತ್ತಿದ್ದಾರೆ.

ಓದು ಮತ್ತು ಗ್ರಹಿಕೆಯ ನಡುವಿನ ಅಂತರ: ಮಕ್ಕಳು ಪಠ್ಯವನ್ನು ಓದಬಲ್ಲರಾದರೂ ಅದರ ಅರ್ಥವನ್ನು ಗ್ರಹಿಸಿ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ.

ಕಂಠಪಾಠಕ್ಕೆ ಸೀಮಿತವಾದ ಕಲಿಕೆ: ಸೃಜನಶೀಲ ಅಭಿವ್ಯಕ್ತಿ, ಸಂದರ್ಭೋಚಿತ ಭಾಷಾ ಬಳಕೆ ಮತ್ತು ವ್ಯಾಕರಣದ ಪ್ರಾಯೋಗಿಕ ಅನ್ವಯದಲ್ಲಿ ಕೊರತೆ ಕಂಡುಬಂದಿದೆ.

ಮಾತೃಭಾಷೆಯೇ ಕಲಿಕೆಯ ಬುನಾದಿ

ಕೇವಲ ಬೋಧನಾ ಮಾಧ್ಯಮವನ್ನು ಬದಲಾಯಿಸುವುದರಿಂದ ಭಾಷಾ ಕಲಿಕೆ ಯಶಸ್ವಿಯಾಗುವುದಿಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದೇ ಅತ್ಯುತ್ತಮ ಮಾದರಿ ಎಂಬುದನ್ನು ಪ್ರಾಧಿಕಾರದ ಈ ಅಧ್ಯಯನ ಸ್ಪಷ್ಟಪಡಿಸಿದೆ ಎಂದಿರುವ ಬಿಳಿಮಲೆ ಇಂತಹ ಸಾಮಾಜಿಕ ಸಂದರ್ಭದಲ್ಲಿ ಮಾಧ್ಯಮವನ್ನೇ ಬದಲಾಯಿಸಿ ಕಲಿಸುವ ಚಿಂತನೆಗಳು ಬೆಳೆಯುತ್ತಿರುವುದು ಆತ್ಮಹತ್ಯಾಕಾರಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾತೃಭಾಷೆಯಲ್ಲಿನ ಗಟ್ಟಿಯಾದ ತಳಹದಿಯು ಮಗುವಿನ ತಿಳಿವಳಿಕೆ, ಸಾಮಾಜಿಕ ಪ್ರಜ್ಞೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಿ ಮಾನವೀಯ ಮೌಲ್ಯಗಳ ಬೆಳವಣಿಗೆಗೂ ನೆರವಾಗುತ್ತದೆ. ಪರಿಚಿತ ಭಾಷೆಯಲ್ಲಿ ಪ್ರಾವೀಣ್ಯ ಗಳಿಸಿದಾಗ ಇತರ ಭಾಷೆಗಳ ಕಲಿಕೆಯೂ ಸುಲಭವಾಗುತ್ತದೆ ಎಂದಿರುವ ಬಿಳಿಮಲೆ ಈ ಎಲ್ಲ ಕಾರಣಗಳಿಗಾಗಿ ಸರ್ಕಾರವು ಕನ್ನಡದ ಕಲಿಕೆಯನ್ನು ಬಲಪಡಿಸುವುದರ ಜೊತೆಗೆ ಮಾತ್ರ ಇಂಗ್ಲಿಷ್‌ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವ ಕ್ರಮಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ.

ಚಾಮರಾಜನಗರದ ದೀನಬಂಧು ಟ್ರಸ್ಟ್‌ನ ಮುಖ್ಯಸ್ಥ ಡಾ. ಜಿ. ಎಸ್. ಜಯದೇವ, ಕನ್ನಡದ ಖ್ಯಾತ ಲೇಖಕ ಡಾ. ಕೃಷ್ಣಮೂರ್ತಿ ಹನೂರು ಹಾಗೂ ಇತರ ಶಿಕ್ಷಣ ತಜ್ಞರು ಪ್ರಾಧಿಕಾರದ ಸಹಯೋಗದಲ್ಲಿ ಈ ಅಧ್ಯಯನವನ್ನು ನಡೆಸಿ ವರದಿ ಸಿದ್ಧಪಡಿಸಿದ್ದಾರೆ ಎಂದಿರುವ ಬಿಳಿಮಲೆ ಮಕ್ಕಳ ಕೇಂದ್ರಿತ, ಸಂವಹನಾಧಾರಿತ ಮತ್ತು ಸಂದರ್ಭೋಚಿತ ಭಾಷಾ ಬೋಧನೆಗೆ ಒತ್ತು ನೀಡುವ ಅಗತ್ಯವನ್ನು ಈ ವರದಿ ಪ್ರತಿಪಾದಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂಬ ಮಾಹಿತಿಯನ್ನು ನೀಡಿರುವ ಬಿಳಿಮಲೆ, ಇಂಗ್ಲಿಷ್‌ ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಲು ಶಿಕ್ಷಣ ಇಲಾಖೆ ಯೋಜನೆಗಳನ್ನು ರೂಪಿಸುತ್ತಿರುವ ಹಿನ್ನೆಲೆಯಲ್ಲಿ, ಈ ಕ್ರಮಗಳು ಭಾಷಾ ಕಲಿಕೆಯ ಗುಣಮಟ್ಟವನ್ನು ಸುಧಾರಿಸಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ.


Share

You cannot copy content of this page