ಬೆಂಗಳೂರು:ಕರ್ನಾಟಕದಲ್ಲಿ ವಿಶೇಷವಾಗಿ ಮಂಗಳೂರು ಮತ್ತು ಉಡುಪಿಯಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸುವುದು ಹಾಗೂ ಹೊಸ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಕುರಿತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎನ್ಟಿಟಿ ಡೇಟಾ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಇತ್ತೀಚೆಗೆ ಕರ್ನಾಟಕ ಮೂಲದ ನಿವಿಯಸ್ ಸೊಲ್ಯೂಷನ್ಸ್ ಮತ್ತು ವಿನ್ವೈರ್ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿರುವ ಎನ್ಟಿಟಿ ಡೇಟಾ, ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಮತ್ತು ಕಾರ್ಯಾಚರಣೆಗಳನ್ನು ಬಲಪಡಿಸುವ ಯೋಜನೆಗಳನ್ನು ಹಂಚಿಕೊಂಡಿತು. ವಿಶೇಷವಾಗಿ ಕರಾವಳಿ ಭಾಗದಲ್ಲಿ ವಿಸ್ತರಣೆಗೆ ಒತ್ತು ನೀಡಿದ್ದು, ನುರಿತ ಮಾನವ ಸಂಪನ್ಮೂಲದ ಲಭ್ಯತೆಯನ್ನು ಪ್ರಮುಖ ಅನುಕೂಲವೆಂದು ಗುರುತಿಸಿತು.
ರಾಜ್ಯ ಸರ್ಕಾರದ ಉಪಕ್ರಮಗಳನ್ನು ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಬೆಂಗಳೂರು ಆಚೆಗೆ ಕಾರ್ಯಕ್ರಮದ ಮೂಲಕ ಕೌಶಲ್ಯಾಭಿವೃದ್ಧಿ, ಮೂಲಸೌಕರ್ಯ ಮತ್ತು ಪ್ರಗತಿಪರ ನೀತಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಪ್ರಾದೇಶಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುತ್ತಿದ್ದೇವೆ. ಪ್ರತಿಭೆ ಎಲ್ಲಿದೆಯೋ ಅಲ್ಲಿಗೆ ಹೂಡಿಕೆ ಮತ್ತು ಅವಕಾಶಗಳನ್ನು ಕೊಂಡೊಯ್ಯುವುದು ನಮ್ಮ ಆದ್ಯತೆಯಾಗಿದೆ. ಕರ್ನಾಟಕದ ಉದಯೋನ್ಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಬೆಳವಣಿಗೆಯನ್ನು ವೇಗಗೊಳಿಸುವ ಪರಿಹಾರಗಳನ್ನು ರೂಪಿಸಲು ಉದ್ಯಮ ವಲಯದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಬಯಸುತ್ತೇವೆ,” ಎಂದು ಹೇಳಿದರು.
ಕರ್ನಾಟಕದ ಸುಸ್ಥಿರ ದತ್ತಾಂಶ ಕೇಂದ್ರ ನೀತಿ ಹಾಗೂ ದತ್ತಾಂಶ ಕೇಂದ್ರಗಳು, ಮೇಘ ಗಣಕ ಸೇವೆಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಎನ್ಟಿಟಿ ಡೇಟಾ ಹೊಂದಿರುವ ಸಾಮರ್ಥ್ಯವನ್ನು ಬಳಸಿಕೊಂಡು ಸಹಯೋಗದ ಅವಕಾಶಗಳ ಬಗ್ಗೆಯೂ ಚರ್ಚಿಸಲಾಯಿತು. ಪ್ರಸ್ತಾವಿತ ಮಂಗಳೂರು ಕೇಬಲ್ ಸಂಪರ್ಕ ಕೇಂದ್ರ ಸೇರಿದಂತೆ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ರಾಜ್ಯದ ಯೋಜನೆಗಳನ್ನು ಸಚಿವರು ಪ್ರಸ್ತಾಪಿಸಿದರು. ಈ ಪ್ರಯತ್ನಗಳಲ್ಲಿ ಎನ್ಟಿಟಿ ಡೇಟಾ ಸಂಸ್ಥೆಯ ಪರಿಣತಿಯನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯಿತು.
ಮೇಘ ಗಣಕ ಸೇವೆಗಳಾಚೆಗೆ ಜೈವಿಕ ತಂತ್ರಜ್ಞಾನ, ಆರೋಗ್ಯ, ಜೀವ ವಿಜ್ಞಾನ ಮತ್ತು ವಾಹನ ಉತ್ಪಾದನಾ ಕ್ಷೇತ್ರಗಳಲ್ಲಿಯೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವಂತೆ ಸಚಿವರು ಎನ್ಟಿಟಿ ಡೇಟಾ ಸಂಸ್ಥೆಗೆ ಸಲಹೆ ನೀಡಿದರು. ಈ ಕ್ಷೇತ್ರಗಳಲ್ಲಿ ಸಂಸ್ಥೆಯ ಹೆಚ್ಚುತ್ತಿರುವ ಆಸಕ್ತಿಯು ಕರ್ನಾಟಕದ ಬಲಿಷ್ಠ ಕೈಗಾರಿಕಾ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯೊಂದಿಗೆ ಹೊಂದಾಣಿಕೆಯಾಗಲಿದೆ ಎಂದು ಅವರು ತಿಳಿಸಿದರು.
ಉದ್ಯಮ ಆರಂಭ ಘಟಕಗಳ ಪೋಷಣೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿನ ಸಹಯೋಗದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಇತ್ತೀಚೆಗೆ ಪ್ರಾರಂಭಿಸಲಾದ ಸರ್ಕಾರಿ ಪ್ರಥಮ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸಚಿವರು, ಈ ಕಾರ್ಯಕ್ರಮದಡಿ ಉದ್ಯಮ ಆರಂಭ ಘಟಕಗಳು ಸರ್ಕಾರಿ ಇಲಾಖೆಗಳೊಂದಿಗೆ ಕೈಜೋಡಿಸಿ ತಮ್ಮ ನವೀನ ಪರಿಹಾರಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಅವಕಾಶವಿದೆ ಎಂದು ತಿಳಿಸಿದರು. ಕರ್ನಾಟಕದ ಉದ್ಯಮ ಆರಂಭ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಪಾಲುದಾರರಾಗುವಂತೆ ಎನ್ಟಿಟಿ ಡೇಟಾ ಸಂಸ್ಥೆಯನ್ನು ಆಹ್ವಾನಿಸಿದರು.
ಸಭೆಯಲ್ಲಿ ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಎನ್ಟಿಟಿ ಡೇಟಾ ಸಂಸ್ಥೆಯ ಅಧ್ಯಕ್ಷರು ಹಾಗೂ ಮೇಘ ಗಣಕ, ಕೃತಕ ಬುದ್ಧಿಮತ್ತೆ ಮತ್ತು ಭದ್ರತಾ ವಿಭಾಗದ ಜಾಗತಿಕ ಮುಖ್ಯಸ್ಥ ಚಾರ್ಲಿ ಲಿ; ಜಾಗತಿಕ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಗೂಗಲ್ ವ್ಯವಹಾರ ಘಟಕದ ಉಪಾಧ್ಯಕ್ಷ ಅಯ್ಮನ್ ಹುಸೇನ್; ಮುಖ್ಯ ಬೆಳವಣಿಗೆ ಅಧಿಕಾರಿ ಶಶಿರ್ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
