ಸಮಗ್ರ ಸುದ್ದಿ

ಮನ್ರೇಗಾ ಕೂಲಿಯ ಬಾಕಿ ಪಾವತಿಗೆ 35 ಕೋಟಿ ರೂ.ಬಿಡುಗಡೆ: ಸಚಿವ ಈಶ್ವರ ಖಂಡ್ರೆ

Share

ಬೀದರ್: ವಿಬಿಜಿ ರಾಮ್ ಜಿ ಜಾರಿಯಾಗುವ ಮುನ್ನ ಜಾರಿಯಲ್ಲಿದ್ದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ರೇಗಾ)ದಡಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ ನೀಡಬೇಕಿದ್ದ ಬಾಕಿ ಕೂಲಿ ಹಣ ಪಾವತಿಸಲು 35 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಮನ್ರೇಗಾದಡಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಬಾಕಿ ಇರುವ ಕೂಲಿ ಪಾವತಿಸಲು ಹಣ ಬಿಡುಗಡೆ ಮಾಡುವಂತೆ ತಾವು ಕೇಂದ್ರ ಸರ್ಕಾರಕ್ಕೆ, ಕೇಂದ್ರ ಸಚಿವರಿಗೆ ಹಲವು ಮನವಿ, ಒತ್ತಾಯ ಮಾಡಿದ ಬಳಿಕ ಕೊನೆಯ ಕಂತಿನ ಕೂಲಿ ಪಾವತಿಗಾಗಿ ಒಟ್ಟು 34.77 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಒಟ್ಟಾರೆ ಮೊತ್ತದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕಾರ್ಮಿಕರ ಕೂಲಿ ಪೂವತಿಗೆ 6.87 ಕೋಟಿ ರೂ., ಪರಿಶಿಷ್ಟ ಪಂಗಡದ ಕಾರ್ಮಿಕರ ಕೂಲಿ ಹಣ ಪಾವತಿಗೆ 5.75 ಕೋಟಿ ರೂ. ಹಾಗೂ ಇತರ ವರ್ಗಗಳಿಗೆ 22.15 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಈ ಅನುದಾನವು ಕಾರ್ಮಿಕರ ವೇತನ ಬಾಕಿ ಪಾವತಿಗೆ ನೆರವಾಗಲಿದ್ದು, ಕಾರ್ಮಿಕರಿಗೆ ನಿಧಿ ವರ್ಗಾವಣೆ ಆದೇಶದ ಆಧಾರದ ಮೇಲೆ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮನ್ರೇಗಾದಡಿ ಗ್ರಾಮಗಳಲ್ಲಿ ಆಸ್ತಿ ಸೃಜನೆಗಾಗಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಸಾಮಗ್ರಿಯ ಬಾಕಿ 1570 ಕೋಟಿ ಇದ್ದು, ಈ ಹಣವನ್ನೂ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.


Share

You cannot copy content of this page