ಸಮಗ್ರ ಸುದ್ದಿ

ಓಬವ್ವರ ಶೌರ್ಯ, ಸಾಹಸ, ಸಮಯ ಪ್ರಜ್ಞೆ ಅಳವಡಿಸಿಕೊಳ್ಳಿ: ಸಚಿವ ಶಿವರಾಜ್ ತಂಗಡಗಿ ಕರೆ

Share

ಬೆಂಗಳೂರು, ನ.11: ಒನಕೆ ಓಬವ್ವ ತೋರಿದ ಶೌರ್ಯ, ಸಾಹಸ ಮತ್ತು ಸಮಯ ಪ್ರಜ್ಞೆಯನ್ನು ಎಲ್ಲ ಮಹಿಳೆಯರು ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಬಸವ ರಮಾನಂದ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬ ನುಡಿಗೆ ಅನ್ವರ್ಥವಾಗಿ ಓಬವ್ವ ತಾನು ಸೇರಿದ ಚಿತ್ರದುರ್ಗದ ಮಹಾಲಕ್ಷ್ಮೀಯಾಗಿ ಕಂಗೊಳಿಸುವ ಮೂಲಕ ಅಲ್ಲಿನ‌ ಪ್ರಜೆಗಳನ್ನು ರಕ್ಷಿಸಿದ ದಿಟ್ಟ ಮಹಿಳೆ‌. ಇಂದು ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ ಎಂಬಂತೆ ದೇಶದ ರಾಷ್ಟ್ರಪತಿ ಹುದ್ದೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಸಾಧನೆಯನ್ನು ಮೆರೆಯುತ್ತಿದ್ದಾರೆ ಎಂದು ಹೇಳಿದರು.‌

ಚಿತ್ರದುರ್ಗದ ಕೋಟೆಯಲ್ಲಿ ಓಬವ್ವರ ಪತಿ ಮುದ್ದು ಹನುಮಪ್ಪ ಅವರು ಯಾರಾದರೂ ಶತ್ರು ಪಾಳೆಯದವರು ಕೋಟೆ ಬಳಿ ಬರುವುದನ್ನು ಕಂಡರೆ, ಕಹಳೆ‌‌ ಊದುವ ಮೂಲಕ ತನ್ನ ರಾಜ ಹಾಗೂ ಸೇನಾ ಪಡೆಗೆ ಮಾಹಿತಿ ರವಾನಿಸುತ್ತಿದ್ದ. ಈ ಬಾರಿ ಚಿತ್ರದುರ್ಗದಲ್ಲಿ‌ ಕಹಳೆ ಊದುವ ಕಲಾವಿದನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದೇವೆ. ಈ ರೀತಿ ಕಲಾವಿದರನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಣ್ಣ ಸಮುದಾಯದವರಿಂದ ದೊಡ್ಡ ಕೊಡುಗೆ:
ಸಣ್ಣ ಸಮುದಾಯದಲ್ಲಿ ಜನಿಸಿದವರು ದೊಡ್ಡ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸಂವಿಧಾನ ರಚನೆ – ಡಾ.ಬಿ.ಆರ್. ಅಂಬೇಡ್ಕರ್,‌ ರಾಮಾಯಾಣ- ವಾಲ್ಮೀಕಿ, ಮಹಾಭಾರತವನ್ನು ವೇದವ್ಯಾಸರು ಬರೆದಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ರಚಿಸದಿದ್ದರೆ ನಾವು ಎಲ್ಲಿ ಇರುತ್ತಿದ್ದೆವು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.‌

ಓಬವ್ವ ನಿಷ್ಕಲ್ಮಷ ನಾಡಭಕ್ತಿಯ ದ್ಯೋತಕ. ಓಬವ್ವ ಸಾವನ್ನಪ್ಪಿದಾಗ ದೊರೆಗಳೇ ಬಂದು ಸಂತಾಪ ಸೂಚಿಸಿ, ರಾಜ ಮರ್ಯಾದೆಯೊಡನೆ ಇಡೀ ದುರ್ಗದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ತಣ್ಣೀರು ಚಿಲುಮೆಯ ಪೂರ್ವಕ್ಕೆ ಸಮಾದಿ ಮಾಡಿಸಿದ್ದರು. ನಾವು ಸಮಾಜಕ್ಕೆ ನೀಡುವ ಕೊಡುಗೆ ಎಂದೆಂದಿಗೂ ಉಳಿಯುತ್ತದೆ ಎಂಬುದಕ್ಕೆ ಓಬವ್ವರ ಕಥೆಯೇ ಸಾಕ್ಷಿ ಎಂದರು.‌

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮಾನಸಾ, ಪತ್ರಕರ್ತೆ ಸಾವಿತ್ರಿ ಮಜುಂದಾರ, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ, ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್, ಅಶೋಕ್ ಛಲವಾದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Share

You cannot copy content of this page