ಬೆಂಗಳೂರು: ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಯಡಿ ತರುವ ಐತಿಹಾಸಿಕ ರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ. ಕಾಮನ್ವೆಲ್ತ್ ಮಹಿಳಾ ಸಂಸದೀಯರ (CWP – Commonwealth Women Parliamentarians Conference) ಭಾರತ ಪ್ರಾದೇಶಿಕ ಘಟಕದ ವಿಶೇಷ ಸಮ್ಮೇಳನವನ್ನು ನವೆಂಬರ್ 17 ಮತ್ತು 18ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಈ ಸ್ವರೂಪದ ಸಮ್ಮೇಳನ ಭಾರತದಲ್ಲಿ ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಶ್ರೀ ಜಿ.ಎಸ್. ಪಾಟೀಲ ಹಾಗೂ ವಿಧಾನಪರಿಷತ್ತಿನ ಸಭಾಪತಿ ಶ್ರೀ ಸಲೀಂ ಅಹ್ಮದ್ ತಿಳಿಸಿದರು.
ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರಗಳನ್ನು ಪ್ರಕಟಿಸಿದ ಅವರು, ಭಾರತ ಸಂಸತ್ತು ಹಾಗೂ ಕರ್ನಾಟಕ ವಿಧಾನಮಂಡಲದ ಸಮನ್ವಯದಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹಕಾರದೊಂದಿಗೆ ಎರಡು ದಿನಗಳ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಹಿಳಾ ಸಂಸದರು, ಮಹಿಳಾ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಶಾಸಕಿಯರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಸುಮಾರು 150 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕಾಮನ್ವೆಲ್ತ್ ಸಂಸದೀಯ ಸಂಘದ ಅಂತಾರಾಷ್ಟ್ರೀಯ ಪ್ರತಿನಿಧಿಗಳೂ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ನ.17ರಂದು ಗಣ್ಯರಿಂದ ಸಮ್ಮೇಳನ ಉದ್ಘಾಟನೆ
ನವೆಂಬರ್ 17ರಂದು ನಡೆಯಲಿರುವ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.
ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಶ್ರೀ ಜಿ.ಎಸ್. ಪಾಟೀಲ, ವಿಧಾನಪರಿಷತ್ತಿನ ಸಭಾಪತಿ ಶ್ರೀ ಸಲೀಂ ಅಹ್ಮದ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಾ. ಡಿ. ಪುರಂದೇಶ್ವರಿ, ಸಭಾಪತಿಗಳು, ಉಪಸಭಾಪತಿಗಳು, ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು ಸೇರಿದಂತೆ ಸಚಿವರು, ಪ್ರತಿಪಕ್ಷ ನಾಯಕರು ಹಾಗೂ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.
ಸೈಬರ್ ಸುರಕ್ಷತೆ, ನೂತನ ಮಹಿಳಾ ಜನಪ್ರತಿನಿಧಿಗಳ ಮಾರ್ಗದರ್ಶನಕ್ಕೆ ಒತ್ತು
‘ಭದ್ರ ಬುನಾದಿ, ಸಶಕ್ತ ಧ್ವನಿಗಳು: ನೂತನ ಮಹಿಳಾ ಜನಪ್ರತಿನಿಧಿಗಳಿಗೆ ಸೈಬರ್ ಸುರಕ್ಷತೆ ಮತ್ತು ಮಾರ್ಗದರ್ಶನದ ಹಾದಿಗಳು’ (Safe Foundations, Strong Voices: Cyber Safety and Mentorship Pathways for New Women Legislators) ಎಂಬ ಪ್ರಮುಖ ಆಶಯದಡಿ ಸಮ್ಮೇಳನ ನಡೆಯಲಿದೆ.
ಡಿಜಿಟಲ್ ಯುಗದಲ್ಲಿ ಮಹಿಳಾ ಜನಪ್ರತಿನಿಧಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದು ಹಾಗೂ ಮೊದಲ ಬಾರಿಗೆ ಶಾಸನಸಭೆಗಳಿಗೆ ಆಯ್ಕೆಯಾಗಿರುವ ಮಹಿಳಾ ಜನಪ್ರತಿನಿಧಿಗಳಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ಸಾಂಸ್ಥಿಕ ಬೆಂಬಲ ಒದಗಿಸುವ ಕುರಿತು ಚರ್ಚಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.
ಮಹಿಳೆಯರ ಡಿಜಿಟಲ್ ಸಬಲೀಕರಣ, ಸೈಬರ್ ಸುರಕ್ಷತೆ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಕಿರುಕುಳ, ಕೃತಕ ಬುದ್ಧಿಮತ್ತೆ (AI), ಡೀಪ್ಫೇಕ್ ತಂತ್ರಜ್ಞಾನದಿಂದ ಎದುರಾಗುತ್ತಿರುವ ಸವಾಲುಗಳು ಹಾಗೂ ಡಿಜಿಟಲ್ ಜಗತ್ತಿನಲ್ಲಿ ಮಹಿಳಾ ಜನಪ್ರತಿನಿಧಿಗಳ ವೈಯಕ್ತಿಕ ಮಾಹಿತಿ ಮತ್ತು ಗೌಪ್ಯತೆಯ ರಕ್ಷಣೆ ಕುರಿತು ವಿಚಾರ ವಿನಿಮಯ ನಡೆಯಲಿದೆ.
ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವ ಮಹಿಳಾ ಜನಪ್ರತಿನಿಧಿಗಳು ಎದುರಿಸುತ್ತಿರುವ ಆನ್ಲೈನ್ ದೌರ್ಜನ್ಯ, ನಕಲಿ ಖಾತೆಗಳ ಮೂಲಕ ನಡೆಯುವ ಅಪಪ್ರಚಾರ ಹಾಗೂ ಸೈಬರ್ ಅಪರಾಧಗಳಂತಹ ಸವಾಲುಗಳನ್ನು ಎದುರಿಸಲು ಅಗತ್ಯವಾದ ಅರಿವು ಮತ್ತು ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಲಾಗುವುದು.
ನೂತನ ಮಹಿಳಾ ಜನಪ್ರತಿನಿಧಿಗಳಿಗೆ ಅನುಭವಿಗಳ ಮಾರ್ಗದರ್ಶನ ಒದಗಿಸುವುದು ಸಮ್ಮೇಳನದ ಮತ್ತೊಂದು ಪ್ರಮುಖ ವಿಷಯವಾಗಿದೆ. ಮೊದಲ ಬಾರಿಗೆ ಶಾಸನಸಭೆ ಪ್ರವೇಶಿಸುವ ಮಹಿಳಾ ಜನಪ್ರತಿನಿಧಿಗಳಿಗೆ ಸದನದ ಕಾರ್ಯವಿಧಾನ, ಕಾನೂನು ರಚನೆ, ನೀತಿ ನಿರೂಪಣೆ, ಸಂಸದೀಯ ಚರ್ಚೆಗಳಲ್ಲಿ ಪರಿಣಾಮಕಾರಿ ಪಾಲ್ಗೊಳ್ಳುವಿಕೆ, ನಾಯಕತ್ವ ಕೌಶಲ್ಯ ಹಾಗೂ ಶಾಸನಸಭೆಗಳ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಅನುಭವಿ ಜನಪ್ರತಿನಿಧಿಗಳಿಂದ ಮಾರ್ಗದರ್ಶನ ದೊರೆಯುವಂತೆ ಮಾಡುವ ಮಾರ್ಗೋಪಾಯಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ.
ಅನುಭವಿ ಹಾಗೂ ನೂತನ ಮಹಿಳಾ ಜನಪ್ರತಿನಿಧಿಗಳ ನಡುವೆ ಜ್ಞಾನ ಮತ್ತು ಅನುಭವಗಳ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು, ಮೊದಲ ಬಾರಿಗೆ ಆಯ್ಕೆಯಾದ ಪ್ರತಿನಿಧಿಗಳ ಆತ್ಮವಿಶ್ವಾಸ ಹೆಚ್ಚಿಸುವುದು ಹಾಗೂ ಶಾಸನಾತ್ಮಕ ಕಾರ್ಯನಿರ್ವಹಣೆಯಲ್ಲಿ ಅವರ ಪರಿಣಾಮಕಾರಿ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಕುರಿತು ಚರ್ಚಿಸಲಾಗುವುದು.
ಮಹಿಳಾ ನಾಯಕತ್ವ ಬಲಪಡಿಸಲು ಐತಿಹಾಸಿಕ ವೇದಿಕೆ: ಜಿ.ಎಸ್. ಪಾಟೀಲ
ಈ ಕುರಿತು ಮಾತನಾಡಿದ ವಿಧಾನಸಭೆಯ ಸಭಾಧ್ಯಕ್ಷ ಶ್ರೀ ಜಿ.ಎಸ್. ಪಾಟೀಲ, “ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ಕರೆತರುತ್ತಿರುವ ಈ ಸಮ್ಮೇಳನವು ಭಾರತದ ಸಂಸದೀಯ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಮಹಿಳೆಯರ ಪರಿಣಾಮಕಾರಿ ಪಾಲ್ಗೊಳ್ಳುವಿಕೆಯಲ್ಲಿದೆ. ಮಹಿಳೆಯರ ಪ್ರಾತಿನಿಧ್ಯ ಹೆಚ್ಚುವುದರ ಜೊತೆಗೆ ಶಾಸನ ರಚನೆ ಮತ್ತು ಆಡಳಿತದಲ್ಲಿ ಅವರ ನಾಯಕತ್ವವೂ ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ಸಮ್ಮೇಳನವು ಹೊಸ ವಿಚಾರಗಳು, ಉತ್ತಮ ಶಾಸನ ಪದ್ಧತಿಗಳು ಹಾಗೂ ಅನುಭವಗಳ ವಿನಿಮಯಕ್ಕೆ ಮಹತ್ವದ ವೇದಿಕೆಯಾಗಲಿದೆ” ಎಂದು ಹೇಳಿದರು.
“ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಕಂಡುಕೊಂಡಿರುವ ಪರಿಹಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಕರ್ನಾಟಕ ಇಂತಹ ಮಹತ್ವದ ರಾಷ್ಟ್ರೀಯ ಸಮ್ಮೇಳನಕ್ಕೆ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ತಿಳಿಸಿದರು.
ಡಿಜಿಟಲ್ ಯುಗದ ಸವಾಲುಗಳಿಗೆ ಶಾಸನಾತ್ಮಕ ಪರಿಹಾರ ಅಗತ್ಯ: ಸಲೀಂ ಅಹ್ಮದ್
ವಿಧಾನಪರಿಷತ್ತಿನ ಸಭಾಪತಿ ಶ್ರೀ ಸಲೀಂ ಅಹ್ಮದ್ ಮಾತನಾಡಿ, “ಡಿಜಿಟಲ್ ತಂತ್ರಜ್ಞಾನ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಆದರೆ ಸೈಬರ್ ಕಿರುಕುಳ, ಆನ್ಲೈನ್ ದೌರ್ಜನ್ಯ, ಡೀಪ್ಫೇಕ್ ಹಾಗೂ ವೈಯಕ್ತಿಕ ಮಾಹಿತಿಯ ದುರ್ಬಳಕೆಯಂತಹ ಗಂಭೀರ ಸವಾಲುಗಳನ್ನೂ ಎದುರಿಸಬೇಕಾಗಿದೆ. ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವ ಮಹಿಳೆಯರ ಡಿಜಿಟಲ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಈ ಕುರಿತು ದೇಶದ ಮಹಿಳಾ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಚರ್ಚಿಸುವುದು ಅತ್ಯಂತ ಪ್ರಸ್ತುತವಾಗಿದೆ” ಎಂದರು.
“ಮಹಿಳಾ ಜನಪ್ರತಿನಿಧಿಗಳಲ್ಲಿ ಶಾಸನಾತ್ಮಕ ತಿಳುವಳಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ತರಬೇತಿ, ಸಂಶೋಧನೆ ಮತ್ತು ತಂತ್ರಜ್ಞಾನದ ನೆರವು ಅಗತ್ಯ. ಶಾಸನಸಭೆಗಳಲ್ಲಿ ಮಹಿಳೆಯರು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಪೂರಕವಾದ ಉತ್ತಮ ಪದ್ಧತಿಗಳ ಕುರಿತು ಈ ಸಮ್ಮೇಳನದಲ್ಲಿ ವಿಚಾರ ವಿನಿಮಯ ನಡೆಯಲಿದೆ. ಇಲ್ಲಿ ನಡೆಯುವ ಚರ್ಚೆಗಳು ಭವಿಷ್ಯದ ಶಾಸನಾತ್ಮಕ ಸುಧಾರಣೆಗಳಿಗೆ ದಿಕ್ಸೂಚಿಯಾಗಲಿವೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
ನ.14ರಂದು ಕರ್ಟನ್ ರೈಸರ್; ಸಮ್ಮೇಳನದ ಪೋಸ್ಟರ್ ಅನಾವರಣ
ಸಮ್ಮೇಳನದ ಪೂರ್ವಭಾವಿಯಾಗಿ ನವೆಂಬರ್ 14ರಂದು ಬೆಂಗಳೂರಿನಲ್ಲಿ ವಿಶೇಷ ಕರ್ಟನ್ ರೈಸರ್ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಾ. ಡಿ. ಪುರಂದೇಶ್ವರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನದ ಅಧಿಕೃತ ಪೋಸ್ಟರ್ ಅನಾವರಣಗೊಳಿಸಲಿದ್ದಾರೆ.
ಮಹಿಳಾ ನಾಯಕತ್ವ ಬಲಪಡಿಸಲು ರಾಷ್ಟ್ರೀಯ ವೇದಿಕೆ
ಕಾಮನ್ವೆಲ್ತ್ ಸಂಸದೀಯ ಸಂಘದ ಪ್ರಮುಖ ಜಾಲವಾಗಿರುವ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಸಂಘಟನೆಯು ಮಹಿಳೆಯರ ರಾಜಕೀಯ ಪ್ರಾತಿನಿಧ್ಯ, ಸಂಸದೀಯ ನಾಯಕತ್ವ ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸುಮಾರು 150 ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಈ ಸಮ್ಮೇಳನವು ಮಹಿಳಾ ಜನಪ್ರತಿನಿಧಿಗಳ ನಡುವೆ ರಾಷ್ಟ್ರೀಯ ಮಟ್ಟದ ಸಂವಾದ, ಸಹಕಾರ ಹಾಗೂ ಅನುಭವಗಳ ವಿನಿಮಯಕ್ಕೆ ವೇದಿಕೆಯಾಗಲಿದೆ.
ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಮಹಿಳಾ ಜನಪ್ರತಿನಿಧಿಗಳ ಸೈಬರ್ ಸುರಕ್ಷತೆ ಹಾಗೂ ನೂತನ ಪ್ರತಿನಿಧಿಗಳಿಗೆ ಮಾರ್ಗದರ್ಶನದ ಕುರಿತು ಚರ್ಚೆ ನಡೆಯುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.
ಮಹಿಳೆಯರ ಡಿಜಿಟಲ್ ಸುರಕ್ಷತೆಯನ್ನು ಬಲಪಡಿಸುವುದು, ನೂತನ ಮಹಿಳಾ ಜನಪ್ರತಿನಿಧಿಗಳಿಗೆ ಅನುಭವಿಗಳ ಮಾರ್ಗದರ್ಶನ ದೊರೆಯುವಂತೆ ಮಾಡುವುದು ಹಾಗೂ ಶಾಸನಸಭೆಗಳಲ್ಲಿ ಮಹಿಳಾ ನಾಯಕತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಮ್ಮೇಳನವು ಮಹತ್ವದ ಚರ್ಚೆಗಳಿಗೆ ಸಾಕ್ಷಿಯಾಗಲಿದೆ ಎಂದು ಜಿ.ಎಸ್. ಪಾಟೀಲ ಹಾಗೂ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಹಾಗೂ ವಿಧಾನಪರಿಷತ್ತಿನ ಕಾರ್ಯದರ್ಶಿ ಜ್ಯೋತಿ ಉಪಸ್ಥಿತರಿದ್ದರು.
