ಬೆಂಗಳೂರು:ಶಾಲಾ ಹಂತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಐದನೇ ಕರ್ನಾಟಕ ಮಿನಿ ಒಲಂಪಿಕ್ಸ್ ಕ್ರೀಡಾಕೂಟವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
“ಗ್ರಾಮ ಮಟ್ಟದಿಂದ ಒಲಂಪಿಕ್ಸ್ ವರೆಗೆ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಮಕ್ಕಳಲ್ಲಿನ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ ತರಬೇತಿ ನೀಡಲು ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯವಿದೆ. ಈ ಹುದ್ದೆಗಳ ನೇಮಕಾತಿಗೆ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ನಾವು ಗಮನ ಹರಿಸುತ್ತೇವೆ. ಪಿಯುಸಿ ಹಂತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂಬ ದೂರುಗಳಿದ್ದು, ಇದಕ್ಕೆ ಅವಕಾಶ ಇರಬಾರದು. ಶಾಲಾ ಮತ್ತು ಪಿಯು ಹಂತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪ್ರಾಶಸ್ತ್ಯ ನೀಡಬೇಕು” ಎಂದು ಅವರು ಹೇಳಿದರು.
“ನಾನು ಹೈಸ್ಕೂಲ್ ನಲ್ಲಿದ್ದಾಗ ಸತತ ಮೂರು ವರ್ಷ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಅಂದಿನ ರಾಜ್ಯಪಾಲರಿಂದ ಗೌರವ ಸ್ವೀಕರಿಸಿದ್ದೆ. ಪಿಯುಸಿಯಲ್ಲಿಯೂ ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು” ಎಂದು ಕಿವಿಮಾತು ಹೇಳಿದರು.
“ಯುವ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಭಾರತ ಜೋಡೋ ಯುವ ಸಂಘಗಳನ್ನು ಪ್ರಾರಂಭಿಸಿದ್ದೇವೆ. 16 ರಿಂದ 35 ವರ್ಷದ ಪ್ರತಿಭೆಗಳಿಗೆ ಇದು ಉತ್ತಮ ವೇದಿಕೆ. ಇದಕ್ಕಾಗಿ ಪ್ರತಿ ಪಂಚಾಯತಿ ಮತ್ತು ವಾರ್ಡ್ ಗಳಿಗೆ ತಲಾ 10 ಲಕ್ಷ ರೂಪಾಯಿ ಒದಗಿಸಲಿದ್ದೇವೆ. ಇದನ್ನು ಸದುಪಯೋಗಪಡಿಸಿಕೊಳ್ಳಿ” ಎಂದು ಹೇಳಿದರು.
“ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಪ್ರತಿಯೊಬ್ಬರೂ ಆಟದಲ್ಲಿ ಗೆಲ್ಲಲೇ ಬೇಕೆಂಬ ಸಂಕಲ್ಪದಿಂದ ಬಂದಿರುತ್ತೀರಿ. ಪ್ರತಿ ಮಗು ಸಾಮರ್ಥ್ಯ ಹೊಂದಿದ್ದು, ಪ್ರತಿ ಮಗುವೂ ಚಾಂಪಿಯನ್ ಆಗಿದೆ. ಸೋತವರಿಗೂ ಮುಂದೆ ಗೆಲ್ಲುವ ಅವಕಾಶವಿರುತ್ತದೆ. ಜೀವನದಲ್ಲಿ ಯಾವತ್ತೂ ಧೈರ್ಯವನ್ನು ಕಳೆದುಕೊಳ್ಳಬಾರದು. ಕನಸು ಕಾಣುವುದು ಮತ್ತು ಆ ಕನಸನ್ನು ನನಸು ಮಾಡುವ ಸಂಕಲ್ಪದೊಂದಿಗೆ ನಿರಂತರ ಪ್ರಯತ್ನಿಸುವುದು ಮುಖ್ಯ. ಗೆದ್ದಾಗ ಹೆಮ್ಮೆ ಪಡಬೇಡಿ. ಸೋತಾಗ ಧೈರ್ಯ ಕಳೆದುಕೊಳ್ಳಬೇಡಿ” ಎಂದು ಹೇಳಿದರು.
“ಆಕಾಶಕ್ಕೆ ಮಿತಿ ಎಂಬುದಿಲ್ಲ. ದೊರೆತ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಏನು ಬೇಕಾದರೂ ಸಾಧನೆ ಮಾಡುವ ಶಕ್ತಿ ನಮ್ಮ ಯುವಜನತೆಯಲ್ಲಿದೆ. ವಿದ್ಯಾರ್ಥಿ ಯುವಜನತೆಯಲ್ಲಿ ದೇಶದ ಭವಿಷ್ಯವಿದೆ. ಇದಕ್ಕಾಗಿ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಕರ್ನಾಟಕ ರಾಜ್ಯಕ್ಕೆ ಗೌರವ ತರುವ ಕೆಲಸವನ್ನು ನೀವೆಲ್ಲರೂ ಮಾಡಬೇಕು” ಎಂದು ಹೇಳಿದರು.
“ಕ್ರೀಡಾ ಮನೋಭಾವ ಇರಿಸಿಕೊಂಡವರು ಇತಿಹಾಸದಲ್ಲಿ ನಾಯಕರಾಗಿ ಬೆಳೆದಿದ್ದಾರೆ. ಆಟದಲ್ಲಿ ಗುರಿ ಮಾತ್ರ ಮುಖ್ಯ. ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ದೇಶಕ್ಕೆ 85 ಪದಕ ದೇಶಕ್ಕೆ ಬಂದಿದೆ. ಇದರಲ್ಲಿ ಬಹುತೇಕ ಮಂದಿ ಗ್ರಾಮೀಣ ಮಟ್ಟದಲ್ಲಿ ಬಂದವರು. ಮುಂದಿನ 10 ವರ್ಷ ನಿಮ್ಮ ಬದುಕಿನಲ್ಲಿ ಅತಿ ಮುಖ್ಯವಾದುದು. ಸಮರ್ಪಣಾ ಮನೋಭಾವದಿಂದ ಮುನ್ನಡೆಯಿರಿ” ಎಂದು ಹೇಳಿದರು.
